ಬಡ ಬ್ರಿಟನ್ ರಾಷ್ಟ್ರದ ಶ್ರೀಮಂತ ಪ್ರಧಾನಮಂತ್ರಿಯಾಗಿ ರಿಷಿ ಸುನಕ್ ಕಾರ್ಯಭಾರ ಆರಂಭವಾಗಿದೆ. ರಿಷಿ ಸುನಕ್ ಅವರು ಬ್ರಿಟನ್ನಲ್ಲಿ ಪ್ರಧಾನಿ ಗಾದಿಗೇರಿದ ಮೊದಲ ಕ್ರಿಶ್ಚಿಯನ್ನೇತರ ಸಂಸದ ಎನ್ನುವುದರ ಜೊತೆಗೆ ಇವರ ಸಂಪತ್ತು ಬ್ರಿಟನ್ ರಾಜ ಮೂರನೇ ಚಾರ್ಲ್ಸ್ ಗಿಂತಲೂ ಹೆಚ್ಚು ಮತ್ತು ಬ್ರಿಟನ್ನಲ್ಲಿ ಇಲ್ಲಿಯವರೆಗೆ ಪ್ರಧಾನಿ ಗಾದಿಗೇರಿದವರಲ್ಲಿ ಅತೀ ಶ್ರೀಮಂತ ಎಂಬ ಹೆಗ್ಗಳಿಕೆ ಕೂಡಾ ರಿಷಿ ಸುನಕ್ ಅವರದ್ದು. ಬ್ರಿಟನ್ನ ಶ್ರೀಮಂತರಲ್ಲಿ ರಿಷಿ ಸುನಕ್ ದಂಪತಿ ಸ್ಥಾನ 222.
ಅಕ್ಷತಾ ಮೂರ್ತಿ ಎಂಬ ಅದೃಷ್ಟ ಲಕ್ಷಿ :
42 ವರ್ಷದ ರಿಷಿ ಸುನಕ್ ಬೋರಿಸ್ ಜಾನ್ಸನ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದರು. ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯುವುದಕ್ಕೂ ಮೊದಲು ರಿಷಿ ಸುನಕ್ ಬ್ಯಾಂಕರ್ ಆಗಿದ್ದರು. ಹೂಡಿಕೆ ಸಂಸ್ಥೆಗಳಲ್ಲಿ ಅದೃಷ್ಟ ಕಂಡುಕೊಂಡವರು.
2009ರಲ್ಲಿ ಬೆಂಗಳೂರಲ್ಲಿ ಇನ್ಫೋಸಿಸ್ ಸಹ ಸಂಸ್ಥಾಪಕರಾದ ನಾರಾಯಣಮೂರ್ತಿ ಮತ್ತು ಸುಧಾ ಮೂರ್ತಿ ಮಗಳು ಅಕ್ಷತಾ ಮೂರ್ತಿ ಅವರನ್ನು ಮದುವೆ ಆದ ಬಳಿಕ ರಿಷಿ ಸುನಕ್ಗೆ ಸಂಪತ್ತಿನ ಲಕ್ಷ್ಮೀ ಒಲಿದು ಬಂದಳು.
ಇನ್ಫೋಸಿಸ್ನಿಂದ ಅಕ್ಷತಾ ಮೂರ್ತಿಗೆ ಅಪಾರ ಆದಾಯ:
42 ವರ್ಷದ ಅಕ್ಷತಾ ಮೂರ್ತಿ ಅವರು ತಮ್ಮ ಪೋಷಕರು ಸ್ಥಾಪಿಸಿರುವ ಇನ್ಫೋಸಿಸ್ನಲ್ಲಿ ಹೊಂದಿರುವ ಷೇರು ಪ್ರಮಾಣ ಶೇಕಡಾ 0.93. (ಅಂದರೆ ಶೇಕಡಾ 1ಕ್ಕಿಂತಲೂ ಕಡಿಮೆ). ಈ ಷೇರುಗಳ ಮೌಲ್ಯ 715 ಮಿಲಿಯನ್ ಅಮೆರಿಕನ್ ಡಾಲರ್ ( 1 ಮಿಲಿಯನ್ ಎಂದರೆ 10 ಲಕ್ಷ).
ಬ್ರಿಟನ್ ರಾಜನಿಗಿಂತಲೂ ಎರಡು ಪಟ್ಟು ಸಂಪತ್ತು:
ರಿಷಿ ಸುನಕ್ ದಂಪತಿಯ ಒಟ್ಟು ಸಂಪತ್ತಿನಲ್ಲಿ ಅತ್ಯಧಿಕ ಪಾಲು ಅಕ್ಷತಾ ಮೂರ್ತಿಯವರದ್ದೇ. ರಿಷಿ ಸುನಕ್ ಮತ್ತು ಅಕ್ಷತಾ ಮೂರ್ತಿ ಅವರ ಒಟ್ಟು ಆಸ್ತಿಯ ಮೌಲ್ಯ 810 ಮಿಲಿಯನ್ ಡಾಲರ್. ಬ್ರಿಟನ್ ರಾಜ ಮೂರನೇ ಚಾರ್ಲ್ಸ್ನ ಸಂಪತ್ತು 510 ಮಿಲಿಯನ್ ಡಾಲರ್.
ಐಷಾರಾಮಿ ಬಂಗಲೆಗಳು:
ರಿಷಿ ಸುನಕ್ ಮತ್ತು ಅಕ್ಷತಾ ಮೂರ್ತಿ ದಂಪತಿ ಬ್ರಿಟನ್ ಮತ್ತು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ 18.3 ಮಿಲಿಯನ್ ಡಾಲರ್ ಮೊತ್ತದ ನಾಲ್ಕು ಐಷಾರಾಮಿ ವೈಭವೋಪೇತ ವಿಶಾಲವಾದ ಬಂಗಲೆಗಳನ್ನು ಹೊಂದಿದ್ದಾರೆ. 2015ರಲ್ಲಿ ಈ ದಂಪತಿ 19ನೇ ಶತಮಾನದ ಎರಡು ಅಂತಸ್ತಿನ ಕಟ್ಟಡವನ್ನು 2.3 ಮಿಲಿಯನ್ ಡಾಲರ್ಗೆ ಖರೀದಿಸಿದ್ದರು. ಈ ಕಟ್ಟಡದಲ್ಲಿ 40 ಅಡಿ ವೀಸ್ತೀರ್ಣದ ಈಜುಕೊಳ, ಜಿಮ್, ಟೆನಿಸ್ ಕೋರ್ಟ್ ಕೂಡಾ ಇದೆ.
2010ರಲ್ಲಿ ರಿಷಿ ಸುನಕ್ ಮತ್ತು ಅಕ್ಷತಾ ಮೂರ್ತಿ ದಂಪತಿ ನಾಲ್ಕು ಬೆಡ್ರೂಂಗಳ ಐಷಾರಾಮಿ ಬಂಗಲೆಯನ್ನು 7.1 ಮಿಲಿಯನ್ ಡಾಲರ್ಗೆ ಖರೀದಿಸಿದರು. ಸುನಕ್ ಹೆಸರಲ್ಲಿ 2001ರಲ್ಲಿ 3 ಲಕ್ಷ ಡಾಲರ್ಗೆ ಖರೀದಿಸಲಾದ ಅಪಾರ್ಟ್ಮೆಂಟ್ ಕೂಡಾ ಇದೆ.
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ರಿಷಿ ಸುನಕ್ ಮತ್ತು ಅಕ್ಷತಾ ಮೂರ್ತಿ ದಂಪತಿ ಸಮುದ್ರತಟದಲ್ಲಿ 7.5 ಮಿಲಿಯನ್ ಡಾಲರ್ ಮೊತ್ತದ ಪೆಂಟ್ಹೌಸ್ನ್ನೂ ಹೊಂದಿದ್ದಾರೆ.
ಹಲವು ಉದ್ಯಮಗಳಲ್ಲಿ ಹೂಡಿಕೆ: ಕೆಲವು ವಿಫಲ:
ಅಕ್ಷತಾ ಮೂರ್ತಿ ಅವರು ತಮ್ಮ ತಂದೆ ನಾರಾಯಣಮೂರ್ತಿ ಅವರು ಆರಂಭಿಸಿರುವ ಕ್ಯಾಟಮಾರ್ಯಾನ್ ವೆಂಚರ್ಸ್ನ ಬ್ರಿಟನ್ ವ್ಯವಹಾರವನ್ನು ನೋಡಿಕೊಳ್ತಿದ್ದಾರೆ. ಈ ಕಂಪನಿಯ ಒಟ್ಟು ಆಸ್ತಿ 4 ದಶಲಕ್ಷ ಡಾಲರ್ ಮತ್ತು ಅಕ್ಷತಾ ಮೂರ್ತಿ ಅವರಿಂದ ಈ ಕಂಪನಿ 4.8 ದಶಲಕ್ಷ ಡಾಲರ್ ಸಾಲವನ್ನೂ ಪಡೆದಿದೆ. ಈ ಕಂಪನಿಯಲ್ಲಿ ರಿಷಿ ಸುನಕ್ ಅವರು ಶೇಕಡಾ 50ರಷ್ಟು ಪಾಲನ್ನು ಹೊಂದಿದ್ದರು. 2015ರಲ್ಲಿ ಸಂಸದರಾಗಿ ಆಯ್ಕೆ ಆಗುವುದಕ್ಕೂ ಮೊದಲು ಅಕ್ಷತಾ ಮೂರ್ತಿ ಅವರಿಗೆ ಆ ಷೇರನ್ನು ಹಸ್ತಾಂತರಿಸಿದ್ದರು.
ಕ್ಯಾಟಮರ್ಯಾನ್ ಕಂಪನಿ ಲಕ್ಸುರಿ ಪೀಠೋಪಕರಣಗಳ ಕಂಪನಿ ನ್ಯೂ ಕ್ರಾಫ್ಸ್ಟ್ಮೆನ್, ಆನ್ಲೈನ್ ಮೂಲಕ ಹೂ ಮಾರುವ ಕಂಪನಿ ಬ್ಲೂ & ವೈಲ್ಡ್ನಲ್ಲೂ ಪಾಲು ಹೊಂದಿದೆ.
ಆದರೆ ಅಕ್ಷತಾ ಮೂರ್ತಿಯವರು ಕೆಲವು ಹೂಡಿಕೆ ಸಾಹಸಗಳಲ್ಲಿ ಕೈ ಸುಟ್ಟುಕೊಂಡಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ ಇವರು ತಮ್ಮದೇ ಹೆಸರಲ್ಲಿ ಅಕ್ಷತಾ ಡಿಸೈನ್ಸ್ ಎಂಬ ಕಂಪನಿಯನ್ನು 2010ರಲ್ಲಿ ಆರಂಭಿಸಿದ್ದರು. ಆದರೆ ಆ ಬಳಿಕ ಆ ಕಂಪನಿ ಮುಚ್ಚಿತು. ಡಿಗ್ಮೆ ಫಿಟ್ನೆಸ್ ಎಂಬ ಕಂಪನಿಯಲ್ಲೂ ಹೂಡಿಕೆ ಮಾಡಿದ್ದರು. ಆದರೆ ಅದು ಕೋವಿಡ್ ಸೋಂಕಿನ ಸಂಕಷ್ಟಕ್ಕೆ ಒಳಗಾಯಿತು.
ತೆರಿಗೆ ವಂಚನೆ ಆರೋಪ:
ಅಕ್ಷತಾ ಮೂರ್ತಿ ಅವರು ಇನ್ಫೋಸಿಸ್ನಲ್ಲಿ ತಾವು ಹೊಂದಿರುವ ಷೇರುಗಳ ಮೇಲೆ ಲಾಭಾಂಶ ರೂಪದಲ್ಲಿ 2015ರಿಂದ 2022ರವರೆಗೆ 70 ಮಿಲಿಯನ್ ಅಮೆರಿಕನ್ ಡಾಲರ್ ಆದಾಯ ಗಳಿಸಿದ್ದಾರೆ ಮತ್ತು 2017ರಲ್ಲಿ ತಮ್ಮ ಷೇರುಗಳ ಮಾರಾಟದಿಂದ 17 ಮಿಲಿಯನ್ ಡಾಲರ್ ಗಳಿಸಿದ್ದಾರೆ. ಭಾರತದಲ್ಲಿ ಲಾಭಾಂಶ ಮತ್ತು ದೀಘಕಾಲದ ಬಂಡವಾಳ ಹೂಡಿಕೆ ಲಾಭದ ಮೇಲಿನ ತೆರಿಗೆ ಶೇಕಡಾ 10ರಷ್ಟಿದೆ. ಬ್ರಿಟನ್ನಲ್ಲಿ ಈ ತೆರಿಗೆ ಶೇಕಡಾ 20ರಷ್ಟಿದೆ ಮತ್ತು ಅತ್ಯಧಿಕ ಸಂಪಾದನೆ ಮಾಡುವವರಿಗೆ ಲಾಭಾಂಶದ ಮೇಲೆ ಶೇಕಡಾ 39.5ರಷ್ಟು ತೆರಿಗೆಯನ್ನು ಬ್ರಿಟನ್ನಲ್ಲಿ ವಿಧಿಸಲಾಗುತ್ತದೆ.
ಈ ಹಿನ್ನೆಲೆಯಲ್ಲಿ ಅಕ್ಷತಾ ಮೂರ್ತಿ 22 ದಶಲಕ್ಷ ಡಾಲರ್ನ್ನಷ್ಟು ತೆರಿಗೆ ಹಣವನ್ನು ಉಳಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಸಾರ್ವಜನಿಕ ಟೀಕೆ-ಟಿಪ್ಪಣಿಗಳ ಬಳಿಕ ಅಕ್ಷತಾ ಮೂರ್ತಿ ಬಾಕಿ ತೆರಿಗೆ ಪಾವತಿಸುವ ಬಗ್ಗೆ ಘೋಷಣೆ ಮಾಡಿದ್ದರು.
ADVERTISEMENT
ADVERTISEMENT