ADVERTISEMENT
ಪ್ರಧಾನಿ ನರೇಂದ್ರ ಮೋದಿ ಸರ್ಕಾರ 2019ರಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೂ ಮೀಸಲಾತಿ ನೀಡಿ ಜಾರಿಗೊಳಿಸಿದ್ದ ಕಾನೂನನ್ನು ಸುಪ್ರೀಂಕೋರ್ಟ್ 3:2 ಅಂತರದಿಂದ ಎತ್ತಿಹಿಡಿದಿದೆ.
ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ಮತ್ತು ನ್ಯಾಯಮೂರ್ತಿ ರವೀಂದ್ರ ಭಟ್ ಭಿನ್ನ ತೀರ್ಪು ನೀಡಿದ್ದು, ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ವ್ಯಾಪ್ತಿಯಿಂದ ಎಸ್ಸಿ/ಎಸ್ಟಿ ಮತ್ತು ಇತರೆ ಹಿಂದುಳಿದ ವರ್ಗದವರನ್ನು ಹೊರಗಿಟ್ಟಿದ್ದು ಸರಿಯಲ್ಲ ಎಂದಿದ್ದಾರೆ.
ಈ ಮೂಲಕ ಮೇಲ್ಜಾತಿಯವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ನೀಡಲಾಗಿದ್ದ ಶೇಕಡಾ 10ರಷ್ಟು ಮೀಸಲಾತಿ ಮುಂದುವರೆಯಲಿದೆ.
ನಿವೃತ್ತಿ ಆಗಲಿರುವ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ಅವರ ನೇತೃತ್ವದ ಪೀಠ ತೀರ್ಪು ನೀಡಿದೆ,
ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಮತ್ತು ಬೆಲಾ ತ್ರಿವೇದಿ, ಪರಿದಾವಾಲಾ ಅವರು ಸರ್ವಸಮ್ಮತದ ತೀರ್ಪು ನೀಡಿದ್ದಾರೆ.
ಆರ್ಥಿಕ ಸ್ಥಿತಿ ಮೇಲೆ ಮೀಸಲಾತಿ ಹೆಚ್ಚಳದ ಕಾನೂನು ಸಂವಿಧಾನದ ಮೂಲರಚನೆಗೆ ವಿರುದ್ಧವಾಗಿಲ್ಲ ಮತ್ತು ಸಮಾನತೆ ಸಂಹಿತೆ ಉಲ್ಲಂಘಿಸಿಲ್ಲ ಎಂದು ತೀರ್ಪು ನೀಡಿದ್ದಾರೆ.
ಮೀಸಲಾತಿ ಶೇಕಡಾ 50ಕ್ಕಿಂತ ಮೀರಬಾರದು ಎನ್ನುವುದನ್ನೂ ಬದಲಾಯಿಸಬಹುದಾದ ಕಾರಣ ಮೇಲ್ವರ್ಗಕ್ಕೆ ಶೇಕಡಾ 10ರಷ್ಟು ಮೀಸಲಾತಿ ನೀಡುವುದರಿಂದ ಮೀಸಲಾತಿ ಮೇಲೆ ಹೇರಲಾಗಿರುವ ಈ ಮಿತಿ ಉಲ್ಲಂಘನೆ ಆಗಿಲ್ಲ ಎಂದು ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಅವರು ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.
ದಲಿತ ಮೀಸಲಾತಿ ಹೆಚ್ಚಳಕ್ಕೆ ಅನುಕೂಲ:
ಶೇಕಡಾ 50ರಷ್ಟು ಮೀಸಲಾತಿ ಮಿತಿಯನ್ನು ಬದಲಾಯಿಸಿಕೊಳ್ಳಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಎಸ್ಸಿ ಮತ್ತು ಎಸ್ಟಿ ಸಮುದಾಯಕ್ಕೆ ಮಾಡಲಾಗಿರುವ ಮೀಸಲಾತಿ ಹೆಚ್ಚಳಕ್ಕೆ ಸುಪ್ರೀಂಕೋರ್ಟ್ನಲ್ಲೂ ಕಾನೂನಿನ ರಕ್ಷಣೆ ಸಿಗುವ ಆಶಾಭಾವ ಇದೆ. ಎಸ್ಸಿ ಮತ್ತು ಎಸ್ಟಿ ಮೀಸಲಾತಿ ಹೆಚ್ಚಳದಿಂದ ಕರ್ನಾಟಕದಲ್ಲಿ ಮೀಸಲಾತಿ ಶೇಕಡಾ 56ಕ್ಕೆ ಏರಿಕೆ ಆಗಿದೆ.
ADVERTISEMENT