ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ, ಸದ್ಯಕ್ಕೆ ತವರು ಜಿಲ್ಲೆ ಬಳ್ಳಾರಿಗೆ ಹೋಗುವುದಕ್ಕೂ ಅನುಮತಿ ಪಡೆಯಬೇಕಾಗಿರುವ ಗಣಿ ಉದ್ಯಮಿ ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪನೆ ಮಾಡಲಿದ್ದಾರೆ. ಹೊಸ ಪಕ್ಷ ಸ್ಥಾಪನೆ ಕೆಲ ತಿಂಗಳ ಹಿಂದಿನ ಸುದ್ದಿಯಾದರೂ ಈ ಪಕ್ಷದ ಉದ್ಭವದಿಂದ ಯಾರಿಗೆ ರಾಜಕೀಯ ನಷ್ಟ ಎನ್ನುವುದು ಕುತೂಹಲಕಾರಿ.
ಮೇಲ್ನೋಟಕ್ಕೆ ರಾಜಕೀಯ ವಿಶ್ಲೇಷಕರ ಪ್ರಕಾರ ರೆಡ್ಡಿ ಹೊಸ ಪಕ್ಷ ರಚಿಸಿದರೆ ಅದರ ಲಾಭ ಕಾಂಗ್ರೆಸ್ಗೆ, ನಷ್ಟ ಬಿಜೆಪಿಗೆ. ಅಂದರೆ ಬಿಜೆಪಿಗೆ ಬರುವ ಮತಗಳನ್ನು ರೆಡ್ಡಿ ಪಕ್ಷ ತಿಂದು ಹಾಕಲಿದೆ ಎನ್ನುವುದು ಅಂದಾಜು.
ಬಿಜೆಪಿಯದ್ದೇ ಬೆಂಬಲ:
ಆದರೆ ಮಾಹಿತಿಗಳ ಪ್ರಕಾರ ಜನಾರ್ದನ ರೆಡ್ಡಿಗೆ ಹೊಸ ಪಕ್ಷ ರಚಿಸುವಂತೆ ಸಲಹೆ ಕೊಟ್ಟಿರುವುದೇ ಬಿಜೆಪಿ. ಇದಕ್ಕೆ ಎರಡು ಕಾರಣಗಳಿವೆ.
1) ಗಣಿ ಪ್ರಕರಣದಲ್ಲಿ ಆರೋಪಿ ಆಗಿರುವ, 2008ರಿಂದ 2013ರವರೆಗೆ ರಾಜ್ಯ ರಾಜಕೀಯವನ್ನೇ ಅಲ್ಲೋಲಕಲ್ಲೋಲವಾಗಿಸಿದ ರೆಡ್ಡಿಯನ್ನು ಚುನಾವಣೆಯ ಹೊತ್ತಲ್ಲಿ ಪಕ್ಷಕ್ಕೆ ಸೇರಿಸಿಕೊಂಡರೆ ಅದು ಕಾಂಗ್ರೆಸ್ ಕೈಗೆ ಪ್ರಬಲ ಅಸ್ತ್ರವಾಗಿ ಬಿಜೆಪಿ ಇಡೀ ರಾಜ್ಯದಲ್ಲೇ ಮುಜುಗರವನ್ನು ಅನುಭವಿಸಬೇಕಾಗುತ್ತದೆ, ರಾಜ್ಯಾದ್ಯಂತ ಬಿಜೆಪಿಗೆ ಚುನಾವಣೆ ಹಿನ್ನಡೆ ಆಗಬಹುದು ಎನ್ನುವುದು ಬಿಜೆಪಿ ನಾಯಕರ ಚಿಂತೆ.
2) ಒಂದು ವೇಳೆ ರೆಡ್ಡಿ ತಟಸ್ಥವಾಗಿ ಉಳಿದರೆ ಆಗ ರೆಡ್ಡಿ ನಿಷ್ಠ ಮತಗಳು ಬಿಜೆಪಿಗೆ ಬರದೇ ಕಾಂಗ್ರೆಸ್ಗೆ ಹೋಗಬಹುದು.
ಈ ಎರಡು ಕಾರಣಗಳಿಗಾಗಿ ಹೊಸ ಪಕ್ಷವನ್ನು ರಚಿಸಿ ಚುನಾವಣಾ ಅಖಾಡಕ್ಕೆ ಧುಮುಕುವಂತೆ ಬಿಜೆಪಿಯೇ ಜನಾರ್ದನ ರೆಡ್ಡಿಗೆ ಸೂಚಿಸಿದೆ.
ರೆಡ್ಡಿ ಹೊಸ ಪಕ್ಷ ರಚನೆಯಿಂದ ಬಿಜೆಪಿ ತನಗೆ ಆಗಬಹುದಾದ ರಾಜಕೀಯ ಲಾಭಗಳ ಬಗ್ಗೆ ಯೋಚಿಸಿದೆ.
1) ರೆಡ್ಡಿ ಹೊಸ ಪಕ್ಷವನ್ನು ರಚಿಸಿದರೆ ಆಗ ರೆಡ್ಡಿ ನಿಷ್ಠ ಮತಗಳು ನೇರವಾಗಿ ರೆಡ್ಡಿಯ ಹೊಸ ಪಕ್ಷಕ್ಕೆ ಹೋಗುತ್ತವೆ. ಈ ಮತಗಳು ಕಾಂಗ್ರೆಸ್ಗೆ ಹೋಗದಂತೆ ರೆಡ್ಡಿ ಪಕ್ಷವನ್ನೇ ತಡೆಗೋಡೆಯಾಗಿ ಬಳಸಿಕೊಳ್ಳಬಹುದು ಮತ್ತು ಆ ಮೂಲಕ ಬಿಜೆಪಿ ಗೆಲುವಿಗೆ ಸಹಕಾರಿಯಾಗುತ್ತದೆ.
2) ಅಧಿಕಾರದ ಲಾಲಸೆಗಾಗಿ ಗಣಿ ಹಗರಣದ ಆರೋಪಿಯನ್ನು ಪಕ್ಷಕ್ಕೆ ಸೇರಿಸಿಕೊಂಡರು ಎಂಬ ಕಳಂಕದಿಂದ ಬಿಜೆಪಿ ಮುಕ್ತವಾಗುತ್ತದೆ.
ಚುನಾವಣೆ ಬಳಿಕ ಬಿಜೆಪಿ ಜೊತೆಗೆ ಹೋಗುವ ಲೆಕ್ಕಾಚಾರ:
ಇನ್ನು ನಾಲ್ಕು ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ನಡೆಯಲಿದೆ. ಫಲಿತಾಂಶ ಬಂದ ಬಳಿಕ ಜನಾರ್ದನ ರೆಡ್ಡಿ ಆಗಿನ ಪರಿಸ್ಥಿತಿ ನೋಡಿಕೊಂಡು ಬಿಜೆಪಿ ಜೊತೆ ಹೋಗುವ ಬಗ್ಗೆ ತೀರ್ಮಾನಿಸಲಿದ್ದಾರೆ. ಅಲ್ಲಿಯವರೆಗೂ ಮೇಲ್ನೋಟಕ್ಕಾದರೂ ರೆಡ್ಡಿ ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳುವ ಪ್ರಯತ್ನ ಮಾಡಲಿದ್ದಾರೆ. ಆ ಮೂಲಕ ರೆಡ್ಡಿಗೂ ಬಿಜೆಪಿಗೂ ಸಂಘರ್ಷ ಇದೆ ಎನ್ನುವುದನ್ನು ಬಿಂಬಿಸುವ ಪ್ರಯತ್ನವನ್ನು ಬಿಜೆಪಿ ಮತ್ತು ರೆಡ್ಡಿ ಇಬ್ಬರೂ ಮಾಡಲಿದ್ದಾರೆ.
2013ರಲ್ಲೂ ವಿಧಾನಸಭಾ ಚುನಾವಣೆ ಬಳಿಕ ಬಿಜೆಪಿ ಅಧಿಕಾರ ಕಳೆದುಕೊಂಡರೂ ಯಡಿಯೂರಪ್ಪನವರು ಮತ್ತು ಶ್ರೀರಾಮುಲು ಮತ್ತೆ ವಾಪಸ್ ಬಿಜೆಪಿಗೆ ಬಂದಿದ್ದರು. ಇದೇ ಸೂತ್ರವನ್ನು 2023ರ ಚುನಾವಣೆ ಬಳಿಕ ಜನಾರ್ದನ ರೆಡ್ಡಿ ಅನುಸರಿಸುವ ಬಗ್ಗೆ ಬಿಜೆಪಿ ಮತ್ತು ರೆಡ್ಡಿ ಪಾಳಯದಲ್ಲಿ ಆಲೋಚನೆ ಆಗಿದೆ.
30 ಕ್ಷೇತ್ರಗಳು ಗುರಿ:
ಕಲ್ಯಾಣ ಕರ್ನಾಟಕ ಭಾಗದ 30 ವಿಧಾನಸಭಾ ಕ್ಷೇತ್ರಗಳಲ್ಲಿ ಜನಾರ್ದನ ರೆಡ್ಡಿ ಪಕ್ಷ ಅಖಾಡಕ್ಕೆ ಧುಮುಕಲಿದೆ. ಸದ್ಯದ ಅಂದಾಜಿನ ಪ್ರಕಾರ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಅತ್ಯಧಿಕ ಸೀಟುಗಳನ್ನು ಗೆಲ್ಲುವ ನಿರೀಕ್ಷೆ ಇದೆ. ಈ ಭಾಗದಲ್ಲೇ ರೆಡ್ಡಿ ರಾಜಕೀಯ ಪ್ರಭಾವಿತವಾದರೆ ಆಗ ಅದರ ನಷ್ಟ ಕಾಂಗ್ರೆಸ್ಗೇ ಆಗಬಹುದು.
ಪಕ್ಷದ ಹೆಸರು:
ಜನಾರ್ದನ ರೆಡ್ಡಿ ತಮ್ಮ ಹೊಸ ಪಕ್ಷಕ್ಕೆ ಕಲ್ಯಾಣ ಕರ್ನಾಟಕ ಪಕ್ಷ ಎಂದು ನಾಮಕರಣ ಮಾಡಲಿದ್ದಾರೆ.
ಜಗನ್ ರೆಡ್ಡಿ ಜೊತೆ:
ತಮ್ಮ ಹೊಸ ಪಕ್ಷ ಸ್ಥಾಪನೆಗೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಅವರ ಜೊತೆಗೆ ಈಗಾಗಲೇ ಜನಾರ್ದನ ರೆಡ್ಡಿ ಎರಡು ಸುತ್ತಿನ ಮಾತುಕತೆ ನಡೆಸಿದ್ದಾರೆ. ಮೂಲಗಳ ಪ್ರಕಾರ ಜಗನ್ ಪಕ್ಷ ವೈಎಸ್ಆರ್ ಕಾಂಗ್ರೆಸ್ನ ಚಿಹ್ನೆಯನ್ನೇ ರೆಡ್ಡಿ ತಮ್ಮ ಹೊಸ ಪಕ್ಷದ ಚಿಹ್ನೆಯಾಗಿ ಕರ್ನಾಟಕದಲ್ಲಿ ಬಳಸಿಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.
2018ರಲ್ಲಿ ಆಂಧ್ರದಲ್ಲಿ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿ ಪರವೇ ವಾಲಿರುವ, ಸಿಬಿಐ ದಾಖಲಿಸಿರುವ ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿರುವ ಜಗನ್ ರೆಡ್ಡಿ ಕರ್ನಾಟಕದಲ್ಲಿ ತಮ್ಮ ಆಪ್ತ ಜನಾರ್ದನ ರೆಡ್ಡಿ ಸ್ಥಾಪಿಸುವ ಹೊಸ ಪಕ್ಷ ಬಿಜೆಪಿ ವಿರುದ್ಧವಾಗಿದ್ದರೆ ಹೇಗೆ ಸಹಕಾರ ಕೊಡುತ್ತಾರೆ ಎನ್ನುವುದೇ ಪ್ರಶ್ನೆ.
ADVERTISEMENT
ADVERTISEMENT