ಈ ವರ್ಷ ಕರ್ನಾಟಕದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆ ಆಗಿದ್ಯಾ..? ವಿಧಾನಸಭಾ ಚುನಾವಣೆ ಘೋಷಣೆ ಆಗಿದೆ ಮತ್ತು ಮತದಾನ ಹಾಗೂ ಫಲಿತಾಂಶದ ದಿನಾಂಕವನ್ನು ಚುನಾವಣಾ ಆಯೋಗ ಪ್ರಕಟಿಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ವೊಂದು ಹಬ್ಬುತ್ತಿದೆ.
ಆ ಪೋಸ್ಟ್ನಲ್ಲಿ ಏನಿದೆ..?
ಕರ್ನಾಟಕ ವಿಧಾನಸೌಧದ ಚಿತ್ರವಿರುವ ಆ ಪೋಸ್ಟ್ನಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ -2023 ಎಂಬ ಒಕ್ಕಣೆಯನ್ನು ಬರೆಯಲಾಗಿದೆ. ಚುನಾವಣಾ ವೇಳಾಪಟ್ಟಿ ಎಂದೂ ನಮೂದಿಸಲಾಗಿದೆ.
ಅದರ ಕೆಳಗೆ ಚುನಾವಣಾ ಪ್ರಕ್ರಿಯೆಗಳ ದಿನಾಂಕವನ್ನು ಮುದ್ರಿಸಲಾಗಿದೆ.
ಮಾರ್ಚ್ 27: ನೀತಿ ಸಂಹಿತೆ ಜಾರಿ
ಏಪ್ರಿಲ್ 17: ಚುನಾವಣಾ ಅಧಿಸೂಚನೆ ಪ್ರಕಟ
ಏಪ್ರಿಲ್ 24: ನಾಮಪತ್ರ ಸಲ್ಲಿಸಲು ಕೊನೆಯ ದಿನ
ಏಪ್ರಿಲ್ 25: ನಾಮಪತ್ರಗಳ ಪರಿಶೀಲನೆ
ಏಪ್ರಿಲ್ 27: ನಾಮಪತ್ರ ಹಿಂಪಡೆಯಲು ಕೊನೆಯ ದಿನ
ಮೇ 12: ಮತದಾನ
ಮೇ 15: ಮತ ಎಣಿಕೆ
ಈ ಪೋಸ್ಟ್ನಲ್ಲಿ ಮತದಾನದ ದಿನ ಮತ್ತು ಮತ ಎಣಿಕೆಯ ದಿನಾಂಕದ ಮಾಹಿತಿ ಕಳೆದ ಬಾರಿ ಅಂದರೆ 2018ರಲ್ಲಿ ನಡೆದ ವಿಧಾನಸಭಾ ಚುನಾವಣಾ ವೇಳಾಪಟ್ಟಿಯದ್ದು.
ಸತ್ಯಾಂಶ ಏನು..?
ಈ ವರ್ಷ ಕರ್ನಾಟಕದಲ್ಲಿ ನಡೆಯುವ ವಿಧಾನಸಭಾ ಚುನಾವಣೆಗೆ ಚುನಾವಣಾ ಆಯೋಗ ಇನ್ನೂ ವೇಳಾಪಟ್ಟಿ ಪ್ರಕಟಿಸಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕರ್ನಾಟಕ ವಿಧಾನಸಭಾ ಚುನಾವಣಾ ವೇಳಾಪಟ್ಟಿ ಸುಳ್ಳು.
ಫೆಬ್ರವರಿ 17ರಂದು ಸಿಎಂ ಬಸವರಾಜ್ ಬೊಮ್ಮಾಯಿ ಸರ್ಕಾರದ ಬಜೆಟ್ ಮಂಡನೆ ಇರುವ ಕಾರಣ ಚುನಾವಣಾ ಘೋಷಣೆ ಏನಿದ್ದರೂ ಬಜೆಟ್ ಮಂಡನೆ ಬಳಿಕವಷ್ಟೇ.
ಜೊತೆಗೆ ಮಾರ್ಚ್ 31ರಿಂದ ಏಪ್ರಿಲ್ 15ವರೆಗೆ ಕರ್ನಾಟಕದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯುವ ಕಾರಣ ಈ ಅವಧಿಯಲ್ಲಿ ಚುನಾವಣೆ ನಡೆಯುವ ಸಾಧ್ಯತೆಗಳಿಲ್ಲ.