ವಿಧಾನಸಭಾ ಚುನಾವಣೆ ಘೋಷಣೆಗೆ ಕೆಲವೇ ದಿನಗಳು ಬಾಕಿ ಇರುವಂತೆ ಮತ್ತೋರ್ವ ಲಿಂಗಾಯತ ಮುಖಂಡ ಬಿಜೆಪಿಯನ್ನು ಬಿಟ್ಟು ಕಾಂಗ್ರೆಸ್ಗೆ ಸೇರ್ಪಡೆ ಆಗುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆಪ್ತ, ಚಿಕ್ಕನಾಯಕನಹಳ್ಳಿ (Chikkanayakanahalli Assembly Constituency) ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ ಎಸ್ ಕಿರಣ್ ಕುಮಾರ್ ಅವರು ಸೋಮವಾರ ಕಾಂಗ್ರೆಸ್ಗೆ ಸೇರ್ಪಡೆ ಆಗಲಿದ್ದಾರೆ.
ರಾಜ್ಯ ಜೈವಿನ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಕಿರಣ್ ಕುಮಾರ್ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರವಾನಿಸಿದ್ದಾರೆ.
ಕಿರಣ್ ಕುಮಾರ್ ಅವರು ಈ ಬಾರಿ ಬಿಜೆಪಿಯಿಂದ ಚಿಕ್ಕನಾಯಕನಹಳ್ಳಿ ಕ್ಷೇತ್ರಕ್ಕೆ ಟಿಕೆಟ್ ಬಯಸಿದ್ದರು. ಆದರೆ ಸಚಿವ ಜೆ ಸಿ ಮಾಧುಸ್ವಾಮಿ ಅವರಿಗೆ ಈ ಬಾರಿ ಮತ್ತೆ ಟಿಕೆಟ್ ಕೊಡುವುದು ಖಚಿತ ಆಗಿರುವ ಪಕ್ಷ ಬದಲಾವಣೆಗೆ ಕಿರಣ್ ಕುಮಾರ್ ನಿರ್ಧರಿಸಿದ್ದಾರೆ.
2008, 2013ರಲ್ಲಿ ಕಿರಣ್ ಕುಮಾರ್ ಬಿಜೆಪಿ ಟಿಕೆಟ್ನಿಂದ ಸ್ಪರ್ಧಿಸಿ ಸೋತಿದ್ದರು. ಆದರೆ 2018ರಲ್ಲಿ ಕೆಜೆಪಿಯಲ್ಲಿದ್ದ ಮಾಧುಸ್ವಾಮಿ ಅವರು ಬಿಜೆಪಿಗೆ ಬಂದಿದ್ದರಿಂದ 2018ರಲ್ಲಿ ಕಿರಣ್ ಕುಮಾರ್ ಅವರಿಗೆ ಟಿಕೆಟ್ ಕೈ ತಪ್ಪಿ ಮಾಧುಸ್ವಾಮಿ ಅವರಿಗೆ ಬಿಜೆಪಿ ಟಿಕೆಟ್ ನೀಡಿತ್ತು.
ಈ ಬಾರಿಯೂ ನಾನೇ ಬಿಜೆಪಿ ಅಭ್ಯರ್ಥಿ ಎಂದು ಸ್ವತಃ ಸಚಿವ ಮಾಧುಸ್ವಾಮಿ ಅವರು ಘೋಷಿಸಿಕೊಂಡಿರುವ ಕಾರಣ ಕಿರಣ್ ಕುಮಾರ್ ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾರೆ. ಕಾಂಗ್ರೆಸ್ನಲ್ಲಿ ಟಿಕೆಟ್ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.