ಅಕ್ಷಯ್ ಕುಮಾರ್ ಯು, ಮುಖ್ಯ ಸಂಪಾದಕರು
ರಾಜ್ಯ ಸರ್ಕಾರಿ ನೌಕರರು ಮತ್ತೆ ಹೋರಾಟಕ್ಕೆ ಧುಮುಕಿದ್ದಾರೆ.
ಫೆಬ್ರವರಿ 17ರಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ತಮ್ಮ ಸರ್ಕಾರದ ಕೊನೆಯ ಆಯವ್ಯಯದಲ್ಲಿ ಏಳನೇ ವೇತನ ಆಯೋಗದ ಬಗ್ಗೆಯಾಗಲೀ, ಹಳೆ ಪಿಂಚಣಿ ಯೋಜನೆ ಮರು ಜಾರಿಯ ಬಗ್ಗೆಯಾಗಲೀ ಉಲ್ಲೇಖ ಮಾಡಿಲ್ಲ.
ಇದರಿಂದ ಆಕ್ರೋಶಿತ ರಾಜ್ಯ ಸರ್ಕಾರಿ ನೌಕರರು ಫೆಬ್ರವರಿ 23ರಂದು ಬೆಂಗಳೂರಲ್ಲಿ ಸಭೆ ಸೇರಿ ಮಾರ್ಚ್ 1ರಿಂದ ಅನಿರ್ದಿಷ್ಟಾವಧಿ ಮುಷ್ಕರದ ನಿರ್ಧಾರ ಕೈಗೊಂಡಿದ್ದಾರೆ.
ಬಜೆಟ್ನಲ್ಲಿ ಘೋಷಣೆ ಮಾಡದೇ ಹೋದರೂ ಸರ್ಕಾರಿ ನೌರರ ಬೇಡಿಕೆ ಈಡೇರಿಸುವಂತೆ ತಮ್ಮ ರಾಜಕೀಯ ಜೀವನದ ಕೊನೆಯ ವಿಧಾನಸಭಾ ಅಧಿವೇಶನದಲ್ಲಿ ಭಾಗವಹಿಸಿದ ಯಡಿಯೂರಪ್ಪನವರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ ಎನ್ನುವುದು ರಾಜಕೀಯ ಪರಿಣಾಮಗಳ ಆತಂಕವೂ ಆಗಿರಬಹುದು.
ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಹೋರಾಟ ರಾಜಕೀಯವಾಗಿ ಅತ್ಯಂತ ಮಹತ್ವದ್ದು.
ರಾಜ್ಯ ಸರ್ಕಾರಿ ನೌಕರರು ಎರಡು ಪ್ರಮುಖ ಬೇಡಿಕೆಗಳೊಂದಿಗೆ ಮತ್ತೆ ಸಂಘರ್ಷಕ್ಕೆ ಮುಂದಾಗಿದ್ದಾರೆ.
1. ಏಳನೇ ವೇತನ ಆಯೋಗದ ಶಿಫಾರಸ್ಸು ಜಾರಿ
2. ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆಯನ್ನೇ ಮತ್ತೆ ಜಾರಿಗೊಳಿಸಬೇಕು.
ಸರ್ಕಾರಿ ನೌಕರರ ಸಂಖ್ಯಾ ಬಲ:
ರಾಜ್ಯ ಸರ್ಕಾರಿ ನೌಕರರ ಸಂಘದ ಮಾಹಿತಿಯ ಪ್ರಕಾರ:
6 ಲಕ್ಷ ಮಂದಿ ಸರ್ಕಾರಿ ನೌಕರರು, ನಿಗಮ, ಮಂಡಳಿ, ಪ್ರಾಧಿಕಾರಗಳ 3 ಲಕ್ಷ ಮಂದಿ ನೌಕರರು ಒಟ್ಟು ಸೇರಿ 9 ಲಕ್ಷ ಮಂದಿ ನೌಕರರಿದ್ದಾರೆ. ಜೊತೆಗೆ 5 ಲಕ್ಷ ಮಂದಿ ನಿವೃತ್ತ ಸರ್ಕಾರಿ ನೌಕರರಿದ್ದಾರೆ.
ಸೇವೆಯಲ್ಲಿರುವ ಮತ್ತು ನಿವೃತ್ತ ನೌಕರರನ್ನು ಸೇರಿಸಿ ಒಟ್ಟು 15 ಲಕ್ಷ ಮಂದಿ.
ಸರ್ಕಾರಿ ನೌಕರರಿಂದ ದೇಣಿಗೆ:
ರಾಜ್ಯ ಸರ್ಕಾರಿ ನೌಕರರು ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ತಮ್ಮ ಒಂದು ದಿನದ ವೇತನವನ್ನು ಕೋವಿಡ್ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ್ದರು. ಅದರ ಮೊತ್ತ 200 ಕೋಟಿ ರೂಪಾಯಿ.
ಜೊತೆಗೆ ಕೋವಿಡ್ ಸಂಕಷ್ಟದಲ್ಲಿ 18 ತಿಂಗಳ ತುಟ್ಟಿಭತ್ಯೆ ವ್ಯತ್ಯಾಸದ ಮೊತ್ತವನ್ನು ಕೋವಿಡ್ ನಿರ್ವಹಣೆಗೆ ಬಿಟ್ಟುಕೊಟ್ಟಿದ್ದಾರೆ. ಅದರ ಮೊತ್ತ 4 ಸಾವಿರ ಕೋಟಿ ರೂಪಾಯಿ.
ಬಿಜೆಪಿ ಸರ್ಕಾರ ಆರಂಭಿಸಿದ್ದ ದನಗಳನ್ನು ದತ್ತು ಪಡೆಯುವ ಯೋಜನೆ ಪುಣ್ಯ ಕೋಟಿಗೆ 40 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ:
ಕರ್ನಾಟಕದಲ್ಲಿ 6ನೇ ವೇತನ ಆಯೋಗ ರಚನೆ ಆಗಿದ್ದು ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ. ಜೂನ್ 6, 2017ರಲ್ಲಿ. ಆಯೋಗ ಜನವರಿ 31, 2018ರಲ್ಲಿ ವರದಿ ನೀಡಿತ್ತಾದರೂ 2017ರ ಜುಲೈ 1ರಿಂದಲೇ ಆರನೇ ವೇತನ ಆಯೋಗದ ಶಿಫಾರಸ್ಸು ಪೂರ್ವಾನ್ವಯವಾಗುವಂತೆ ಆಗಿನ ಕಾಂಗ್ರೆಸ್ ಸರ್ಕಾರ 2018ರ ಜನವರಿ 3ರಂದು ಆದೇಶಿಸಿತ್ತು.
ಏಳನೇ ವೇತನ ಆಯೋಗ:
ಏಳನೇ ವೇತನ ಆಯೋಗವನ್ನು ಬಿಜೆಪಿ ಸರ್ಕಾರ ರಚಿಸಿದ್ದು ಕಳೆದ ವರ್ಷದ ನವೆಂಬರ್ 11. ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಕಾರ ಕಳೆದ ವರ್ಷದ ಜುಲೈ 1ರಿಂದಲೇ ಅಂದರೆ 8 ವರ್ಷ ವಿಳಂಬವಾಗಿದೆ.
ಕೆಲವು ಲೆಕ್ಕಗಳು:
ರಾಜ್ಯದಲ್ಲಿ 4 ಕೋಟಿ ಜನಸಂಖ್ಯೆ ಇದ್ದಾಗ ರಾಜ್ಯದಲ್ಲಿದ್ದ ಹುದ್ದೆಗಳು 7 ಲಕ್ಷದ 63 ಸಾವಿರ. ಈಗ 6.5 ಕೋಟಿ ಜನಸಂಖ್ಯೆಗೆ 5 ಲಕ್ಷದ 20 ಸಾವಿರ ಮಂದಿ ನೌಕರರು ಕಾರ್ಯನಿರ್ವಹಿಸ್ತಿದ್ದಾರೆ. ಸರ್ಕಾರದಲ್ಲಿ ಶೇಕಡಾ 39ರಷ್ಟು ಹುದ್ದೆಗಳು ಖಾಲಿ ಇದ್ದು ವರ್ಷಕ್ಕೆ 10 ಸಾವಿರ ಕೋಟಿ ರೂಪಾಯಿ ಉಳಿತಾಯ ಆಗುತ್ತಿದೆ.
ಚುನಾವಣಾ ಪರಿಣಾಮಗಳನ್ನು ಬೀರಬಲ್ಲರೇ..?
ಏಳನೇ ವೇತನ ಆಯೋಗದ ಶಿಫಾರಸ್ಸು ಜಾರಿ ಜೊತೆಗೆ ಹಳೆ ಪಿಂಚಣಿ ಯೋಜನೆ ಮರು ಜಾರಿ ರಾಜ್ಯ ಸರ್ಕಾರಿ ನೌಕರರ ಹೋರಾಟದ ಪ್ರಮುಖ ಭಾಗ.
ಒಪಿಎಸ್ ಜಾರಿಗಾಗಿ ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಸರ್ಕಾರಿ ನೌಕರರು ಒಟ್ಟಾಗಿ ಪ್ರತಿಭಟನೆ ನಡೆಸಿದ್ದರೂ ಸಿಎಂ ಬೊಮ್ಮಾಯಿ ಸರ್ಕಾರ ಮಾತ್ರ ಹಳೆ ಪಿಂಚಣಿ ಯೋಜನೆ ಮರು ಜಾರಿ ಅಸಾಧ್ಯ ಎಂದು ವಿಧಾನಮಂಡಲದ ಅಧಿವೇಶನದಲ್ಲೇ ಸ್ಪಷ್ಟಪಡಿಸಿದ್ದಾರೆ.
ಸೇವೆಯಲ್ಲಿರುವ ಮತ್ತು ನಿವೃತ್ತ ನೌಕರರು ಒಟ್ಟು 14 ಲಕ್ಷ ಮಂದಿ. ಇವರೆಲ್ಲರ ವಾದದ ಪ್ರಕಾರ ಕುಟುಂಬದ ಅವಲಂಬಿತರು ಸೇರಿದಂತೆ 60 ಲಕ್ಷದಷ್ಟು ಮತದಾರರು ಆಗುತ್ತಾರೆ. ಅಂದರೆ ನಾವು ಮನಸ್ಸು ಮಾಡಿದರೆ ಚುನಾವಣಾ ಪರಿಣಾಮಗಳನ್ನು ಬದಲಿಸಿ ಬಿಡಬಲ್ಲವು ಎನ್ನುವುದು ಇವರ ವಾದ.
ಹಿಮಾಚಲಪ್ರದೇಶದಲ್ಲಿ ಸರ್ಕಾರಿ ನೌಕರರನ್ನು ಕಡೆಗಣಿಸಿದ್ದು ಆಡಳಿತದಲ್ಲಿದ್ದ ಬಿಜೆಪಿಗೆ ದುಬಾರಿ ಆಯಿತು, ಸೋಲ ಬೇಕಾಯಿತು. ಅಧಿಕಾರಕ್ಕೆ ಬಂದ ಕಾಂಗ್ರೆಸ್ ತನ್ನ ಮೊದಲ ಸಂಪುಟ ಸಭೆಯಲ್ಲೇ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿತು.
ಮಹಾರಾಷ್ಟ್ರದಲ್ಲಿ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಹಳೆ ಪಿಂಚಣಿ ಯೋಜನೆ ಮರು ಜಾರಿಗಾಗಿ ನಡೆಯುತ್ತಿರುವ ಹೋರಾಟ ದುಬಾರಿ ಆಯಿತು. ಬಿಜೆಪಿ ಕೇವಲ 1ರಲ್ಲಿ ಗೆದ್ದು ನಾಲ್ಕರಲ್ಲಿ ಸೋಲ್ತು.
ಹಲವು ರಾಜ್ಯಗಳಲ್ಲಿ ಹೋರಾಟ:
ಛತ್ತೀಸ್ಗಢ, ರಾಜಸ್ಥಾನದಲ್ಲಿರುವ ಕಾಂಗ್ರೆಸ್ ಸರ್ಕಾರಗಳು NPS ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಿವೆ. ಪಂಜಾಬ್ನಲ್ಲಿರುವ ಆಮ್ ಆದ್ಮಿ ಪಕ್ಷದ ಸರ್ಕಾರ ಕೂಡಾ OPS ಮರು ಜಾರಿಗೊಳಿಸಿದೆ.
ಈಗ ಬಿಜೆಪಿ-ಜೆಜೆಪಿ ಸಮ್ಮಿಶ್ರ ಸರ್ಕಾರ ಆಡಳಿತದಲ್ಲಿರುವ ಹರಿಯಾಣದಲ್ಲೂ ರಾಜ್ಯ ಸರ್ಕಾರಿ ನೌಕರರು ಹಳೆ ಪಿಂಚಣಿ ಯೋಜನೆಗಾಗಿ ದೊಡ್ಡ ಹೋರಾಟ ನಡೆಸುತ್ತಿದ್ದಾರೆ.
ಹಿಮಾಚಲ ಪ್ರದೇಶದಲ್ಲಾದ ಚುನಾವಣಾ ಪರಿಣಾಮಗಳ ಬಳಿಕ ಹಳೆ ಪಿಂಚಣಿ ಯೋಜನೆ ಹೋರಾಟದಲ್ಲಿ ಸರ್ಕಾರಿ ನೌಕರರ ಸ್ಥೈರ್ಯ ಇಮ್ಮಡಿ ಆಗಿದೆ.
ಹಳೆ ಪಿಂಚಣಿ ಯೋಜನೆಗೆ ಬಿಜೆಪಿ ವಿರೋಧ:
ಹಳೆ ಪಿಂಚಣಿ ಯೋಜನೆ ಮರು ಜಾರಿ ಸೂಕ್ತವಲ್ಲ ಎಂದು ಇಂಗ್ಲೀಷ್ ಸುದ್ದಿವಾಹಿನಿ ನ್ಯೂಸ್18ಗೆ ನೀಡಿದ ಸಂದರ್ಶನದಲ್ಲಿ ಸಚಿವರು ಹೇಳಿದ್ದಾರೆ.
ಭವಿಷ್ಯದ ಜನಾಂಗದ ಮೇಲೆ ಹೊರೆಯನ್ನು ಹಾಕಿ ಪ್ರಸ್ತುತ ಇರುವ ಪಿಂಚಣಿದಾರರಿಗೆ ಹಳೆ ಪಿಂಚಣಿ ಯೋಜನೆಯಂತೆ ಪಿಂಚಣಿ ನೀಡುವುದು ಸರಿಯಲ್ಲ
ಎಂದು ಹಣಕಾಸು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ತಾರ್ಕಿಕ ಸಮತೋಲನ ಮತ್ತು ಮುಂದಿನ ಜನಾಂಗಕ್ಕೆ ನಾವು ಏನು ಬಿಟ್ಟು ಹೋಗಲಿದ್ದೇವೆ ಎಂಬ ಬಗ್ಗೆ ನಾವು ಯೋಚನೆ ಮಾಡಬೇಕು. ಆರ್ಥಿಕತೆಗಾಗಿ ಸಾಲ ಎತ್ತುವುದು ಅಗತ್ಯ, ಆದರೆ ಇವತ್ತಿನ ಬಗ್ಗೆಯಲ್ಲ, ಭವಿಷ್ಯದ ದಶಕಗಳ ರಾಜ್ಯದ ಆರ್ಥಿಕ ಆರೋಗ್ಯದ ಬಗ್ಗೆ ಸಂಪೂರ್ಣ ತಿಳುವಳಿಕೆ ಇಲ್ಲದ ಹೊರತು ಆತುರದಿಂದ ನಿರ್ಧಾರಕ್ಕೆ ಬರುವುದು ಸರಿಯಲ್ಲ.
ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಹಳೆ ಪಿಂಚಣಿ ಮರು ಜಾರಿಯಿಂದ ಕೆಲವು ರಾಜ್ಯಗಳ ಆರ್ಥಿಕತೆ ಮೇಲೆ ಅಪಾಯ ಕಾಡುತ್ತಿದೆ. ಪ್ರಸ್ತುತ ವೆಚ್ಚಗಳನ್ನು ಭವಿಷ್ಯತ್ತಿಗೆ ಮುಂದೂಡುವ ಮೂಲಕ ರಾಜ್ಯಗಳು ಮುಂದಿನ ವರ್ಷಗಳಲ್ಲಿ ನಿಧಿ ಇಲ್ಲದ ಪಿಂಚಣಿ ಹೊರೆಯನ್ನು ಅನುಭವಿಸಲಿವೆ
ಎಂದು ಆರ್ಬಿಐ ವರದಿಯೂ ಹೇಳಿತ್ತು.
ಹಳೆ ಪಿಂಚಣಿ ಯೋಜನೆಯಿಂದ ಭಾರತ ದಿವಾಳಿ:
ಹಳೆ ಪಿಂಚಣಿ ಯೋಜನೆ ಮರು ಜಾರಿಯಾದರೆ 2030ರ ವೇಳೆಗೆ ಭಾರತ ದಿವಾಳಿ ಆಗಲಿದೆ ಎಂದು ಹರಿಯಾಣ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಹೇಳಿದ್ದಾರೆ. ತಮ್ಮ ವಾದ ಸಮರ್ಥನೆಗೆ ಅವರು ತಮ್ಮ ವಾಟ್ಸಾಪ್ನಲ್ಲಿ ಬಂದ ಸಂದೇಶವನ್ನು ಉಲ್ಲೇಖಿಸಿದ್ದಾರೆ.
ನಾನು ನಿನ್ನೆ ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ವಾಟ್ಸಾಪ್ನಲ್ಲಿ ಕಳುಹಿಸಿದ್ದ ಸಂದೇಶ ನೋಡಿದೆ. ಆ ಅಧಿಕಾರಿ ಹೇಳುವಂತೆ ಒಂದು ವೇಳೆ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿದರೆ 2030ರೊಳಗೆ ದೇಶ ದಿವಾಳಿ ಆಗಲಿದೆ
ಎಂದು ಸಿಎಂ ಮನೋಹರ್ ಲಾಲ್ ಕಟ್ಟರ್ ಹೇಳಿದ್ದರು.
ಮನಮೋಹನ್ ಸಿಂಗ್ ಖ್ಯಾತ ಅರ್ಥಶಾಸ್ತ್ರಜ್ಱರು ಮತ್ತು ಹಳೆ ಪಿಂಚಣಿ ಯೋಜನೆ ಜಾರಿಯಿಂದ ಭಾರತ ಹಿಂದುಳಿಯಲಿದೆ ಎಂದು 2006ರಲ್ಲಿ ಅವರು ಹೇಳಿದ್ದರು
ಎಂದು ಮನೋಹರ್ ಲಾಲ್ ಕಟ್ಟರ್ ಹಳೆ ಪಿಂಚಣಿ ಯೋಜೆ ಜಾರಿಗೆ ವಿರೋಧಿಸಿದ್ದರು.
ADVERTISEMENT
ADVERTISEMENT