ಗುಜರಾತ್ ಮೂಲದ ಉದ್ಯಮಿ ಗೌತಮ್ ಅದಾನಿ ಮಾಲೀಕತ್ವದ ಅದಾನಿ ಕಂಪನಿಗಳ ಬಗ್ಗೆ ಹಿಂಡನ್ಬರ್ಗ್ ಪ್ರಕಟಿಸಿರುವ ವರದಿ ಸಂಬಂಧ ತನಿಖೆಗೆ ಸುಪ್ರೀಂಕೋರ್ಟ್ ಆದೇಶ ನೀಡಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರಿದ್ದ ಮೂವರು ನ್ಯಾಯಮೂರ್ತಿಗಳ ಪೀಠ ತನಿಖೆಗೆ ಆದೇಶ ನೀಡಿದೆ.
ಭಾರತೀಯ ಷೇರು ನಿಯಂತ್ರಣ ಮಂಡಳಿ (SEBI) ಎರಡು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ ಮುಚ್ಚಿದ ಲಕೋಟೆಯಲ್ಲಿ ವರದಿಯನ್ನು ಸುಪ್ರೀಂಕೋರ್ಟ್ ಸಲ್ಲಿಸುವಂತೆ ಆದೇಶಿಸಲಾಗಿದೆ.
ತನಿಖೆ ಸಂಬಂಧ ಸುಪ್ರೀಂಕೋರ್ಟ್ ಆರು ಮಂದಿ ಸದಸ್ಯರ ಸಮಿತಿಯನ್ನೂ ರಚಿಸಿದೆ.
ನಿವೃತ್ತ ನ್ಯಾಯಮೂರ್ತಿ ಅಭಯ್ ಮನೋಹರ್ ಸಪ್ರೆ ನೇತೃತ್ವದ ಸಮಿತಿಯಲ್ಲಿ ಓ ಪಿ ಭಟ್, ನ್ಯಾಯಮೂರ್ತಿ ಜೆ ಪಿ ದೇವದತ್, ಎಂ ವಿ ಕಾಮತ್, ನಂದನ್ ನಿಲೇಕಣಿ, ಸೋಮಶೇಖರನ್ ಸುಂದರನ್ ಸಮಿತಿಯ ಸದಸ್ಯರು.
ಈ ಸಮಿತಿ ಅದಾನಿ ವಿವಾದ ಬಗ್ಗೆ ತನಿಖೆ ನಡೆಸುವುದರ ಜೊತೆಗೆ ಷೇರು ಮಾರುಕಟ್ಟೆ ನಿಯಮಗಳನ್ನು ಬಲಗೊಳಿಸುವುದರ ಬಗ್ಗೆಯೂ ಸಲಹೆ ನೀಡುವಂತೆ ಸೂಚಿಸಲಾಗಿದೆ.