ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಶಿವಮೊಗ್ಗ ನಗರ ಕ್ಷೇತ್ರದಿಂದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರಿಗೇ ಟಿಕೆಟ್ ನೀಡಲು ಬಿಜೆಪಿ ತೀರ್ಮಾನಿಸಿದೆ.
ಮೂಲಗಳ ಮಾಹಿತಿ ಪ್ರಕಾರ ಶಿವಮೊಗ್ಗ ನಗರದಲ್ಲಿ ಮತ್ತೆ ಚುನಾವಣೆಗೆ ನಿಲ್ಲಲು ಸಿದ್ಧತೆ ಚುರುಕುಗೊಳಿಸುವಂತೆ ಪಕ್ಷದ ರಾಷ್ಟ್ರೀಯ ನಾಯಕರು ಈಶ್ವರಪ್ಪ ಅವರಿಗೆ ಸೂಚಿಸಿದ್ದಾರೆ.
ಶಿವಮೊಗ್ಗ ನಗರದಲ್ಲಿ ಈ ಬಾರಿ ಈಶ್ವರಪ್ಪಗೆ ಟಿಕೆಟ್ ಸಿಗಲಾರದು ಎಂದು ವರದಿಯಾಗಿತ್ತು. ಎಂಎಲ್ಸಿ ಆಯನೂರು ಮಂಜುನಾಥ್ ಮತ್ತು ಖ್ಯಾತ ವೈದ್ಯ ಡಾ ಧನಂಜಯ್ ಸರ್ಜಿ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದರು.
ಆದರೆ ಈಶ್ವರಪ್ಪ ಅವರಿಗೆ ಈ ಬಾರಿಯೂ ಟಿಕೆಟ್ ನೀಡುವುದಕ್ಕೆ ಪಕ್ಷದ ರಾಷ್ಟ್ರೀಯ ನಾಯಕರು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚನ್ನಗಿರಿಯಿಂದ ಧನಂಜಯ್ ಸರ್ಜಿಗೆ ಟಿಕೆಟ್..?
ಚನ್ನಗಿರಿಯಿಂದ ಡಾ ಧನಂಜಯ್ ಸರ್ಜಿ ಅವರಿಗೆ ಬಿಜೆಪಿ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿದೆ.
ಮಾಡಾಳ್ ವಿರೂಪಾಕ್ಷಪ್ಪ ಮತ್ತು ಪುತ್ರ ಪ್ರಶಾಂತ್ ಮಾಡಾಳ್ ವಿರುದ್ಧ ಲಂಚ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಈ ಬಾರಿ ಮಾಡಾಳ್ ವಿರೂಪಾಕ್ಷಪ್ಪಗಾಗಲೀ ಅವರ ಪುತ್ರ ಮಾಡಾಳ್ ಮಲ್ಲಿಕಾರ್ಜುನ್ಗಾಗಲೀ ಟಿಕೆಟ್ ನೀಡದೇ ಇರಲು ಬಿಜೆಪಿ ತೀರ್ಮಾನಿಸಿದೆ.
ಈ ಹಿನ್ನೆಲೆಯಲ್ಲಿ ಚನ್ನಗಿರಿ ಮೂಲದವರೇ ಆದ ಧನಂಜಯ್ ಸರ್ಜಿ ಅವರಿಗೆ ಟಿಕೆಟ್ ನೀಡಿದರೆ ಒಳ್ಳೆಯದು ಎಂಬ ತೀರ್ಮಾನಕ್ಕೆ ಬಿಜೆಪಿ ನಾಯಕರು ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಧನಂಜಯ್ ಸರ್ಜಿ ಮೂಲತಃ ಚನ್ನಗಿರಿಯವರು ಮತ್ತು ಲಿಂಗಾಯತ ಸಮುದಾಯದವರು. ಚನ್ನಗಿರಿಯಲ್ಲಿ ಲಿಂಗಾಯತ ಸಮುದಾಯದ ಮತಗಳು ಅಧಿಕ ಇರುವ ಹಿನ್ನೆಲೆಯಲ್ಲಿ ಮತ್ತು ಡಾ ಸರ್ಜಿ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡು ಚಿರಪರಿಚಿತರಾಗಿರುವ ಕಾರಣ ಸರ್ಜಿ ಅವರಿಗೆ ಟಿಕೆಟ್ ಬಹುತೇಕ ಖಚಿತ ಎಂದು ಮೂಲಗಳು ತಿಳಿಸಿವೆ.
ADVERTISEMENT
ADVERTISEMENT