ಅಘಾತದ ಮೇಲೆ ಅಘಾತ.. ಇತ್ತೀಚೆಗಷ್ಟೇ ಹಠಾತ್ ಹೃದಯಾಘಾತದಿಂದ ಮಾಜಿ ಸಂಸದ ಧ್ರುವನಾರಾಯಣ ಇಹಲೋಕ ತ್ಯಜಿಸಿದ್ದರು. ಇದನ್ನು ಅರಗಿಸಿಕೊಳ್ಳಲಾಗದ ಸ್ಥಿತಿಯಲ್ಲಿ ಇರುವಾಗಲೆ ಮತ್ತೊಂದು ಆಘಾತ ಎದುರಾಗಿದೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಧ್ರುವನಾರಾಯಣ್ ಧರ್ಮಪತ್ನಿ ವೀಣಾ ಅವರು ಇದೀಗ ಇಹಲೋಕ ತ್ಯಜಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ 55ವರ್ಷದ ವೀಣಾ ಅವರು ಸಾವಪ್ಪಿದ್ದಾರೆ.
ಪತಿ ಧ್ರುವನಾರಾಯಣ ಸಾವಿನಿಂದ ತೀವ್ರ ಆಘಾತಕ್ಕೆ ವೀಣಾ ಒಳಗಾಗಿದ್ದರು. ವೀಣಾ ಅವರ ಆರೋಗ್ಯದಲ್ಲಿ ಮತ್ತೆ ಏರುಪೆರು ಉಂಟಾಗಿತ್ತು. ಪತಿಯ ಸಾವಿನ ಅಘಾತದಿಂದ ಚೇತರಿಸಿಕೊಳ್ಳದ ಅವರು, ಇದೀಗ ಸಾವನ್ನಪ್ಪಿದ್ದಾರೆ.
ಮೈಸೂರಿನ ವಿಜಯನಗರದ ನಿವಾಸದಲ್ಲಿ ವೀಣಾ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಧ್ರುವನಾರಾಯಣ್ ಅಭಿಮಾನಿಗಳು, ಬೆಂಬಲಿಗರು ಕಂಬನಿ ಮಿಡಿದಿದ್ದಾರೆ.
ಮಾರ್ಚ್ 11ರ ಮುಂಜಾನೆ ಧ್ರುವನಾರಾಯಣ್ ಸಾವನ್ನಪ್ಪಿದ್ದರು. ಒಂದು ತಿಂಗಳು ಪೂರ್ಣಗೊಳ್ಳುವ ಮೊದಲೇ ಪತಿಯನ್ನು ವೀಣಾ ಅವರು ಅನುಸರಿಸಿದ್ದಾರೆ.
27 ವರ್ಷದ ದರ್ಶನ್ ಧ್ರುವನಾರಾಯಣ್ ಗೆ ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಟಿಕೆಟ್ ನೀಡಿತ್ತು. ನಂಜನಗೂಡಿನಿಂದ ದರ್ಶನ್ ಸ್ಪರ್ಧೆ ಮಾಡುತ್ತಿದ್ದಾರೆ.
ಇದಕ್ಕೂ ಮೊದಲು ಧ್ರುವನಾರಾಯಣ್ ಮನೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಮಂತ್ರಿ ಹೆಚ್ ಸಿ ಮಹದೇವಪ್ಪ ಭೇಟಿ ನೀಡಿದ್ದ ಸಂದರ್ಭದಲ್ಲಿ ತಾಯಿ ವೀಣಾ ಅವರ ಅನಾರೋಗ್ಯದ ಬಗ್ಗೆ ದರ್ಶನ್ ನೋವು ವ್ಯಕ್ತಪಡಿಸಿದ್ದರು. ತಾಯಿಗೆ ಪರಿಸ್ಥಿತಿ ಹೀಗಿರುವಾಗ ಅವರ ಆರೈಕೆ ಮಾಡುವುದು ಮುಖ್ಯ ಆಗುತ್ತದೆ. ನಾನು ರಾಜಕೀಯಕ್ಕೆ ಬರಲ್ಲ ಎಂದು ದರ್ಶನ್ ಧ್ರುವನಾರಾಯಣ್ ಹೇಳಿಕೊಂಡಿದ್ದರು. ಆದರೇ, ತಂದೆಯ ಆಶಯಗಳನ್ನು ಪೂರ್ಣಗೊಳಿಸಲು ನೀವು ರಾಜಕೀಯಕ್ಕೆ ಬರಲೇಬೇಕೆಂದು ಹೇಳಿದ್ದ ಸಿದ್ದರಾಮಯ್ಯ, ದರ್ಶನ್ ರನ್ನು ಚುನಾವಣೆಗೆ ಸ್ಪರ್ಧೆ ಮಾಡುವುದಕ್ಕೆ ಒಪ್ಪಿಸಿದ್ದರು.