ಒಲಂಪಿಕ್ ಸೇರಿ ಅಂತಾಷ್ಟ್ರೀಯ ವೇದಿಕೆಗಳಲ್ಲಿ ದೇಶದ ಹಿರಿಮೆ/ಗರಿಮೆ ಎತ್ತಿ ಹಿಡಿದಿದ್ದ ಕುಸ್ತಿಪಟುಗಳು ಇಂದು ದೆಹಲಿಯ ನಡುಬೀದಿಯಲ್ಲಿ ಕಣ್ಣೀರಿಡುತ್ತಿದ್ದಾರೆ. ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷರಾಗಿದ್ದ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ನಡೆಸಿದ ಲೈಂಗಿಕ ದೌರ್ಜನ್ಯಗಳ ವಿರುದ್ಧ ದನಿ ಎತ್ತಿರುವ ಕುಸ್ತಿಪಟುಗಳು ಕಳೆದ ಎರಡು ವಾರಗಳಿಂದ ದೆಹಲಿಯ ಜಂತರ್ ಮಂತರ್ನಲ್ಲಿ ನ್ಯಾಯ ಕೋರಿ ಶಾಂತಿಯುತವಾಗಿ ಧರಣಿ ನಡೆಸುತ್ತಿದ್ದಾರೆ. ಆದರೆ, ಈ ಬಗ್ಗೆ ಕಿಂಚಿತ್ತೂ ಕಿವಿಗೊಡದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕರ್ನಾಟಕ ಚುನಾವಣೆಯಲ್ಲಿ ಕಮಲ ಅರಳಿಸಲು ಅಹರ್ನಿಶಿ ಶ್ರಮಿಸುತ್ತಿದೆ.
ಆರೋಪಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಬೆಂಬಲಕ್ಕೆ ನಿಂತಿರುವ ಕೇಂದ್ರ ಸರ್ಕಾರ ಕುಸ್ತಿಪಟುಗಳ ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನಿಸಿದೆ. ಕಳೆದ ರಾತ್ರಿ ಜಂತರ್ ಮಂತರ್ಗೆ ಧಾವಿಸಿದ ದೆಹಲಿ ಪೊಲೀಸರು, ಧರಣಿನಿರತ ಕುಸ್ತಿಪಟುಗಳನ್ನು ಬಲವಂತವಾಗಿ ಹೊರದಬ್ಬಲು ನೋಡಿದ್ದಾರೆ. ಒಲಂಪಿಕ್ ತಾರೆಯರ ಮೇಲೆ ಹಲ್ಲೆ ಮಾಡಿದ್ದಾರೆ. ಒಲಂಪಿಕ್ ತಾರೆ ಸಾಕ್ಷಿ ಮಲಿಕ್ ಕಳೆದ ರಾತ್ರಿ ಪೊಲೀಸ್ ದೌರ್ಜನ್ಯದಿಂದ ಬೆಚ್ಚಿ ಕಣ್ಣೀರಿಟಿಟ್ದಿದ್ದಾರೆ.
ಮದ್ಯದ ಅಮಲಿನಲ್ಲಿದ್ದ ಪೊಲೀಸರು ನನ್ನ ಸಹೋದರನ ಮೇಲೆ ಹಲ್ಲೆ ನಡೆಸಿದರು ಎಂದು ಕುಸ್ತಿಪಟು ವಿನೇಶಾ ಪೋಗಟ್ ಆರೋಪ ಮಾಡಿದ್ದಾರೆ. ನಮಗೆ ಈ ರೀತಿಯ ಕಿರುಕುಳ ನೀಡುತ್ತಾರೆ ಎಂದಾದರೇ ಇನ್ಯಾರಿಗೆ ರಕ್ಷಣೆ ಇದೆ.. ದೇಶಕ್ಕಾಗಿ ಪದಕ ಗೆದ್ದವರನ್ನು ನಡೆಸಿಕೊಳ್ಳುವ ರೀತಿ ಇದೇನಾ? ಇದೆಲ್ಲವನ್ನು ನೋಡಿದರೇ, ದೇಶಕ್ಕಾಗಿ ಯಾರು ಪದಕ ಗೆಲ್ಲಲೇಬಾರದು ಎಂದೆನಿಸುತ್ತಿದೆ ಎಂದು ವಿನೇಶಾ ಫೋಗಟ್ ಆಕ್ರೋಶ ಹೊರಹಾಕಿದ್ದಾರೆ.
ಮಳೆ ಬಂದು ಭೂಮಿ ನೆಂದಿದ್ದ ಕಾರಣ ಧರಣಿ ಸ್ಥಳಕ್ಕೆ ಮಂಚಗಳನ್ನು ತರುತ್ತಿದ್ದಾಗ, ಪೊಲೀಸರು ಅತ್ಯಂತ ಕೆಟ್ಟ ಪದಗಳಲ್ಲಿ ನಮ್ಮನ್ನು ನಿಂದಿಸಿದ್ದಾರೆ.. ಇದು ದೇಶದ ದೇಶದ ಹೆಣ್ಮಕ್ಕಳಿಗೆ ನೀಡುತ್ತಿರುವ ಗೌರವ ಎಂದು ಮತ್ತೋರ್ವ ಮೆಡಲಿಸ್ಟ್ ಭಜರಂಗ್ ಪೂನಿಯಾ ಕಿಡಿಕಾರಿದ್ದಾರೆ
ಈ ಘಟನೆ ಬಗ್ಗೆ ಪೊಲೀಸರು ಹೇಳುವುದೇ ಬೇರೆ.. ನಮ್ಮ ಪೊಲೀಸರು ಮದ್ಯ ಸೇವನೆ ಮಾಡಿರಲಿಲ್ಲ. ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಿಲ್ಲ ಎಂದು ಪೊಲೀಸರು ಸ್ಪಷ್ಟೀಕರಣ ನೀಡಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಐದಾರು ಮಂಚ ತೆಗೆದುಕೊಂಡು ಯುವಕರು ಬಂದರು. ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ.. ಅವರೇ ಪೊಲೀಸರ ಮೇಲೆ ಮುಗಿಬಿದ್ದರು. ಈಗ ನೋಡಿದರೇ ಪೊಲೀಸರು ಮದ್ಯ ಸೇವನೆ ಮಾಡಿ ಬಂದು ಹಲ್ಲೆ ನಡೆಸಿದ್ದಾರೆ ಎಂದು ಹೇಳುತ್ತಿದ್ದಾರೆ. ಇದೆಲ್ಲ ಸುಳ್ಳು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.