ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿಯವರ ಜೊತೆ ತಮ್ಮ ಮೊದಲ ಪರಿಚಯ, ಭೇಟಿಯ ದಿನಗಳನ್ನು ಸುಧಾಮೂರ್ತಿಯವರು ಮೆಲುಕು ಹಾಕಿದ್ದಾರೆ.
ಬಾಲಿವುಡ್ ಪ್ರಮುಖ ಟಾಕ್ ಶೋ ಕಪಿಲ್ ಶರ್ಮಾ ಶೋನಲ್ಲಿ ಪಾಲ್ಗೊಂಡ ಸುಧಾಮೂರ್ತಿ, ತಮ್ಮ ವೈವಾಹಿಕ, ವ್ಯಯಕ್ತಿಕ ಜೀವನದ ಬಗ್ಗೆ ಹಲವು ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ಟೀಸರ್ ರಿಲೀಸ್ ಆಗಿದೆ.
ನನಗೆ ಪ್ರಸನ್ನ ಎಂಬ ಗೆಳತಿ ಇದ್ದಳು. ಆಕೆ ನಿತ್ಯವೂ ಒಂದು ಪುಸ್ತಕವನ್ನು ಹೊತ್ತು ತರುತ್ತಿದ್ದರು. ಅದರ ಮೊದಲ ಪುಟದಲ್ಲಿ ನಾರಾಯಣಮೂರ್ತಿ ಹೆಸರಿನ ಜೊತೆಗೆ ಹಲವು ದೇಶಗಳ ಹೆಸರು ಇರುತ್ತಿದ್ದವು.
ಮೂರ್ತಿ ಹೆಸರಿನ ಪಕ್ಕದಲ್ಲಿ ಇಸ್ತಾಂಬುಲ್, ಪೇಶಾವರದಂತಹ ಹೆಸರುಗಳು ಇರುತ್ತಿದ್ದವು. ಅದನ್ನು ನೋಡಿದ ನಾನು, ನಾರಾಯಣಮೂರ್ತಿ ಅಂತಾರಾಷ್ಟ್ರೀಯ ಬಸ್ ಕಂಡಕ್ಟರ್ ಆಗಿದ್ದಾರಾ ಅಂತಾ ಅಂದುಕೊಂಡಿದ್ದೆ.
ಒಂದು ದಿನ ನಾರಾಯಣಮೂರ್ತಿಯನ್ನು ಭೇಟಿ ಮಾಡಲು ತೆರಳಿದೆ. ನಾರಾಯಣಮೂರ್ತಿಯವರನ್ನು ನೋಡುವ ಮೊದಲು ಅವರು ಹೀರೋ ರೀತಿ ಇರ್ತಾರೆ ಎಂದು ಭಾವಿಸಿದ್ದೆ. ಆದರೆ ಡೋರ್ ತೆಗೆದ ಕೂಡಲೇ ಅವರನ್ನು ನೋಡಿ, ಯಾರಿವನು ಚಿಕ್ಕ ಹುಡುಗ ಎಂದು ಮನಸ್ಸಲ್ಲಿ ಗೊಣಗಿಕೊಂಡೆ..
ಎಂದು ಸುಧಾಮೂರ್ತಿ ನೆನಪಿನಂಗಳಕ್ಕೆ ಜಾರಿದರು.
ಇದನ್ನು ಕೇಳಿದ ಕೂಡಲೇ ಸುಧಾ ಮೂರ್ತಿ ಪಕ್ಕದಲ್ಲೇ ಇದ್ದ ರವೀನಾ ಟಂಡನ್, ಕಪಿಲ್ ಶರ್ಮಾ, ಗುನೀತ್ ಗೊಳ್ಳೆಂದು ನಕ್ಕಿದರು..
ಈ ಎಪಿಸೋಡ್ ಈ ವಾರಾಂತ್ಯದಲ್ಲಿ ಪ್ರಸಾರವಾಗಲಿದೆ.