2016ರಿಂದ ಅದಾನಿ ಗ್ರೂಪ್ ನಲ್ಲಿ ನಡೆದಿರುವ ಚಟವಟಿಕೆಗಳ ಬಗ್ಗೆ ತನಿಖೆ ಮಾಡುತ್ತಿರುವುದಾಗಿ ಕೇಳಿಬಂದ ಸುದ್ದಿಯಲ್ಲಿ ಸತ್ಯಾಂಶ ಇಲ್ಲ ಎಂದು ಸುಪ್ರೀಂಕೋರ್ಟ್ ಗೆ ಸೆಬಿ ವಿವರಣೆ ನೀಡಿರುವುದು ಹೊಸ ವಿವಾದಕ್ಕೆ ನಾಂದಿ ಹಾಡಿದೆ. 2021ರಲ್ಲಿ ಸಂಸತ್ ಗೆ ಆರ್ಥಿಕ ಇಲಾಖೆ ನೀಡಿದ ಲಿಖಿತ ಉತ್ತರದಲ್ಲಿ ಅದಾನಿ ಗ್ರೂಪ್ ವಿರುದ್ಧ ಕೇಳಿಬಂದ ಆರೋಪಗಳಿಗೆ ಸಂಬಂಧಿಸಿ 2016ರಿಂದ ಈವರೆಗಿನ ಬೆಳವಣಿಗೆಗಳ ಬಗ್ಗೆ ಸೆಬಿ ತನಿಖೆ ನಡೆಸುತ್ತದೆ ಎಂದು ಭರವಸೆ ನೀಡಿತ್ತು. ಆದರೆ, ಈಗ ಇದಕ್ಕೆ ಭಿನ್ನವಾಗಿ ಸೆಬಿ ಸುಪ್ರೀಂಕೋರ್ಟ್ಗೆ ಅಫಿಡವಿಟ್ ಸಲ್ಲಿಸಿರುವುದು ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ವಿತ್ತ ಸಚಿವಾಲಯ ಮಾತ್ರ ತಮ್ಮ ಅಧಿಕೃತ ಹೇಳಿಕೆಗೆ ಬದ್ಧರಾಗಿರುವುದಾಗಿ ತಿಳಿಸಿದೆ.
ಗ್ರೂಪ್ ಕಂಪನಿಗಳ ಸ್ಟಾಕ್ ದರಗಳನ್ನು ಕೃತಕವಾಗಿ ಹೆಚ್ಚಿಸಲು ಅದಾನಿ ಗ್ರೂಪ್ ಗೋಲ್ಮಾಲ್ ಮಾಡಿದೆ ಎಂದು ಹಿಂಡನ್ ಬರ್ಗ್ ರಿಸರ್ಚ್ ಕಂಪನಿ ಮಾಡಿದ ಆರೋಪಗಳ ಬಗೆಗಿನ ತನಿಖೆ ಪೂರ್ಣಗೊಳಿಸಲು ಮತ್ತೆ ಆರು ತಿಂಗಳ ಸಮಯ ಬೇಕೆಂದು ಸುಪ್ರೀಂಕೋರ್ಟ್ಗೆ ಸೆಬಿ ಮನವಿ ಮಾಡಿಕೊಂಡಿದೆ.
ಕೆಲವು ದೂರುದಾರರು ಹೇಳುವಂತೆ 2016ರಿಂದ ಅದಾನಿ ಗ್ರೂಪ್ಗೆ ಸಂಬಂಧಿಸಿ ತನಿಖೆ ನಡೆಸಿಲ್ಲ ಎಂದು ಸೆಬಿ ರಿಜಾಯಿಂಡರ್ ಅಫಿಡವಿಟ್ ಸಲ್ಲಿಸಿದೆ. ಹಿಂಡನ್ ಬರ್ಗ್ ವರದಿಯಲ್ಲಿ ತಿಳಿಸಿರುವ ಅಂಶಗಳಲ್ಲಿ ಒಂದಕ್ಕೊಂದು ಹೊಂದಿಕೆ ಆಗುತ್ತಿಲ್ಲ ಆಗುತ್ತಿಲ್ಲ ಎಂದು ಸೆಬಿ ತಿಳಿಸಿದೆ. ತಾವು ವಿಚಾರಣೆ ನಡೆಸಿದ 51 ಭಾರತೀಯ ಲಿಸ್ಟೆಡ್ ಕಂಪನಿಗಳು ಗ್ಲೋಬಲ್ ಡಿಪಾಸಿಟರಿ ರಸೀದಿಗಳ ಜಾರಿಗೆ ಸಂಬಂಧಿಸಿದ್ದಾಗಿವೆ ಎಂದು ಸೆಬಿ ತಿಳಿಸಿದೆ. ಇದರಲ್ಲಿ ಅದಾನಿ ಗ್ರೂಪ್ಗೆ ಸಂಬಂಧಿಸಿದ ಯಾವುದೇ ಲಿಸ್ಟೆಡ್ ಕಂಪನಿ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಆದರೆ, ಸೆಬಿಯ ಈ ಅಫಿಡವಿಟ್ಗೆ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಆಕ್ಷೇಪಣೆ ಸಲ್ಲಿಸಿದ್ದಾರೆ.
ಇಷ್ಟು ಮುಖ್ಯವಾದ ಪ್ರಕರಣದಲ್ಲಿ ಸೆಬಿ ಪರವಾಗಿ 22 ವರ್ಷದ ಜೂನಿಯರ್ ಉದ್ಯೋಗಿಯೊಬ್ಬರು ಸುಪ್ರೀಂಕೋರ್ಟ್ಗೆ ಅಫಿಡವಿಟ್ ಸಲ್ಲಿಕೆ ಮಾಡಿರುವುದನ್ನು ನೋಡಿದರೆ, ಸೆಬಿ ಈ ಪ್ರಕರಣವನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದೆ ಎನ್ನುವುದು ಗೊತ್ತಾಗುತ್ತದೆ ಎಂದು ವಿರೋಧ ಪಕ್ಷಗಳು ಟೀಕೆ ಮಾಡಿವೆ.
ಅದಾನಿ ಗ್ರೂಪ್ ರಕ್ಷಣೆ ಮಾಡಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಕೇಂದ್ರ ಸರ್ಕಾರ ಮತ್ತು ಸೆಬಿ ಮಾಡುತ್ತಿವೆ ಎಂದು ಆರೋಪಿಸಿವೆ. ಕೇಂದ್ರ ಸರ್ಕಾರ ಸಂಸತ್ಗೆ ನೀಡಿರುವ ಭರವಸೆಯೇ ಒಂದು.. ಸೆಬಿ ಸುಪ್ರೀಂಕೋರ್ಟ್ಗೆ ನೀಡಿರುವ ಮಾಹಿತಿಯೇ ಇನ್ನೊಂದು.. ಈ ಬಗ್ಗೆ ವಿತ್ತ ಸಚಿವಾಲಯ ಸ್ಪಷ್ಟನೆ ನೀಡಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿವೆ.
ಇದಕ್ಕೆ ಸ್ಪಂದಿಸಿರುವ ವಿತ್ತ ಸಚಿವಾಲಯ, ತಮ್ಮ ಅಧಿಕೃತ ನಿರ್ಣಯ, ಭರವಸೆಗಳಿಗೆ ಬದ್ಧವಾಗಿರುವುದಾಗಿ ತಿಳಿಸಿದೆ. ಆದರೆ, ಸೆಬಿ ಅಫಿಡವಿಟ್ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ