ADVERTISEMENT
ನಮ್ಮ ಜನ ಬಿಜೆಪಿ ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಮಣಿಪುರ ರಾಜ್ಯದ ಬಿಜೆಪಿ ಶಾಸಕರನ್ನೊಳಗೊಂಡ ನಿಯೋಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ತಿಳಿಸಿದೆ.
ಮಣಿಪುರ ರಾಜ್ಯದ ಚಿನ್-ಕುಕಿ-ಮಿಜೋ-ಝೋಮೊ-ಹ್ಮಾರ್ ಸಮುದಾಯವನ್ನು ಪ್ರತಿನಿಧಿಸುವ 10 ಶಾಸಕರ ತಂಡ ಸಚಿವ ಶಾ ಅವರನ್ನು ಭೇಟಿ ಮಾಡಿತು. ಈ 10 ಶಾಸಕರಲ್ಲಿ ಇಬ್ಬರು ಸಚಿವರೂ ಸೇರಿದಂತೆ ಬಿಜೆಪಿಯ 7 ಮಂದಿ ಶಾಸಕರು, ಕುಕಿ ಜನ ಒಕ್ಕೂಟದ ಇಬ್ಬರು ಶಾಸಕರು ಮತ್ತು ಸ್ವತಂತ್ರ ಶಾಸಕರೊಬ್ಬರು ಇದ್ದರು.
ನಮ್ಮ ಜನ ಬಿಜೆಪಿ ಸರ್ಕಾರದ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ನಾವು ಮತ್ತೆ ಕಣಿವೆಯಲ್ಲಿ ವಾಸಿಸುವ ಬಗ್ಗೆ ಯೋಚಿಸಲು ಸಾಧ್ಯವಿಲ್ಲ. ನಮಗೆ ಪ್ರತ್ಯೇಕ ಆಡಳಿತ ವ್ಯವಸ್ಥೆ ಮಾಡಿ ಎಂದು ಶಾಸಕರ ನಿಯೋಗ ಗೃಹ ಸಚಿವರಿಗೆ ಮನವಿ ಮಾಡಿದೆ.
ಮಣಿಪುರ ಸರ್ಕಾರದ ಮೇಲೆ ನಮಗೆ ನಂಬಿಕೆ ಇಲ್ಲ. ನಮ್ಮವರು ಮತ್ತೆ ಕಣಿವೆಯಲ್ಲಿ ಜೀವನ ಸಾಗಿಸುವ ಬಗ್ಗೆ ಯೋಚನೆ ಮಾಡಲು ಸಾಧ್ಯವಿಲ್ಲ. ಅಲ್ಲಿ ನಮ್ಮ ಬದುಕು ಸುರಕ್ಷಿತವಾಗಿಲ್ಲ. ಮೈತಿಗಳು ನಮ್ಮನ್ನು ದ್ವೇಷಿಸುತ್ತಾರೆ. ಗುಡ್ಡ ಪ್ರದೇಶದಲ್ಲಿ ವಾಸಿಸುತ್ತಿರುವ ನಮಗೆ ಪ್ರತ್ಯೇಕ ಆಡಳಿತ ವ್ಯವಸ್ಥೆಯನ್ನು ಮಾಡಿಕೊಡಿ
ಎಂದು ಬಿಜೆಪಿ ಶಾಸಕರ ನಿಯೋಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬೇಡಿಕೆ ಮುಂದಿಟ್ಟಿದೆ.
ಮಣಿಪುರದಲ್ಲಿ ಮೇ 9ರಂದು ಹಿಂಸಾಚಾರ ಶುರುವಾದ ಬಳಿಕ ಇದುವರೆಗೂ ಯಾವ ಕೇಂದ್ರ ಸಚಿವರೂ ರಾಜ್ಯಕ್ಕೆ ಭೇಟಿ ಕೊಟ್ಟಿಲ್ಲ.
ADVERTISEMENT