ADVERTISEMENT
ರೈಲು ದುರಂತ ಹಿನ್ನೆಲೆಯಲ್ಲಿ ಒಡಿಶಾದಲ್ಲಿ ಸಿಲುಕಿರುವ ರಾಜ್ಯದ ಜಾನಪದ ಕಲಾವಿದರ ತಂಡವನ್ನು ವಿಮಾನ ಮೂಲಕ ಬೆಂಗಳೂರಿಗೆ ವಾಪಸ್ ಕರೆದುಕೊಂಡು ಬರುವ ವ್ಯವಸ್ಥೆ ಮಾಡಲಾಗಿದೆ.
ಒಡಿಶಾದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗಾಗಿ ತೆರಳಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಒಡಿಶಾದ ಪುರಿಯಲ್ಲಿ ನಡೆದ ಜಾನಪದ ಜಾತ್ರೆಯಲ್ಲಿ ಭಾಗವಹಿಸಲು ತೆರಳಿದ್ದ ರಾಜ್ಯದ 17 ಜನರ ಕಲಾವಿದರ ತಂಡ ರೈಲು ದುರಂತದ ಹಿನ್ನೆಲೆಯಲ್ಲಿ ಹಿಂದಿರುಗಿ ಬರಲಾರದೇ ಅತಂತ್ರ ಸ್ಥಿತಿಯಲ್ಲಿದ್ದರು. ಈ ಕಲಾತಂಡವನ್ನು ಕ್ಷೇಮವಾಗಿ ಕರೆತರಲು ವಿಮಾನ ಪ್ರಯಾಣ ವ್ಯವಸ್ಥೆ ಮಾಡಲಾಗಿದೆ.
ಎಂದು ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ಜೂನಿಯರ್ ವಾಲಿಬಾಲ್ ಕ್ರೀಡಾಕೂಟಕ್ಕಾಗಿ ಕರ್ನಾಟಕದ 32 ಮಂದಿಯನ್ನೂ ವಿಮಾನ ಮೂಲಕ ಬೆಂಗಳೂರಿಗೆ ಕರೆ ತರುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಕೋಲ್ಕತಾಗೆ ತೆರಳಿದ್ದ ರಾಜ್ಯದ ಕ್ರೀಡಾಪಟುಗಳು & ಅವರ ತರಬೇತುದಾರರು ಸೇರಿದಂತೆ ಒಟ್ಟು 32 ಜನರಿಗೆ ವಿಮಾನ ಪ್ರಯಾಣದ ವ್ಯವಸ್ಥೆ ಮಾಡಲಾಗಿದೆ.
ರೈಲು ದುರಂತದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣಾ ಕಾರ್ಯಾಚರಣೆ ನಿರಂತರವಾಗಿ ಸಾಗಿದೆ. ಬಾಲಾಸೂರ್ ನ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ವೈದ್ಯಾಧಿಕಾರಿಗಳಿಂದ ರಾಜ್ಯದ ಗಾಯಾಳುಗಳ ಬಗ್ಗೆ ಸಚಿವ ಸಂತೋಷ್ ಲಾಡ್ ಅವರು ಮಾಹಿತಿ ಪಡೆದಿದ್ದಾರೆ.
ರೈಲು ದುರ್ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ, ಕೇಂದ್ರ ರೈಲ್ವೇ ಸಚಿವ ಅಶ್ವಿನ್ ವೈಷ್ಣವ್ ಅವರನ್ನು ಭೇಟಿಯಾಗಿ ದುರ್ಘಟನೆ ಕುರಿತು ಹಾಗೂ ಕನ್ನಡಿಗ ಪ್ರಯಾಣಿಕರ ರಕ್ಷಣೆ ಬಗ್ಗೆಯೂ ಸಚಿವ ಲಾಡ್ ಚರ್ಚಿಸಿದರು.
ರೈಲುಗಳಲ್ಲಿ ಪ್ರಯಾಣಿಸುತ್ತಿದ್ದ ಬಹುತೇಕ ಕನ್ನಡಿಗರು ಸುರಕ್ಷಿತವಾಗಿದ್ದು, ಇನ್ನೂ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಸಚಿವ ಸಂತೋಷ್ ಲಾಡ್ ಮಾಹಿತಿ ನೀಡಿದ್ದಾರೆ.
ADVERTISEMENT