ಹೌದು.. ಕೆಸಿಆರ್ ಸಾರ್ ಬದಲಾಗಿದ್ದಾರೆ. ಎಷ್ಟರ ಮಟ್ಟಿಗೆ ಎಂದರೇ ಇವರು ತೆಲಂಗಾಣ ಮುಖ್ಯಮಂತ್ರಿಯೇನಾ ಎಂಬಷ್ಟು? ಇವರೇನು ಇದ್ದಕ್ಕಿದ್ದಂತೆ ಬದಲಾಗಿದ್ದಾರೆ ಎಂದು ತೆಲಂಗಾಣ ಜನತೆಗೆ ಅದರಲ್ಲೂ ಬಿಆರ್ಎಸ್ ಕಾರ್ಯಕರ್ತರಿಗೆ ಎನಿಸಿದ್ದು ಸುಳ್ಳಲ್ಲ.
ತೆಲಂಗಾಣದ ನಿರ್ಮಲ್ನಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಆಡಿದ ಮಾತು ಕೇವಲ ತೆಲಂಗಾಣದಲ್ಲಿ ಅಷ್ಟೇ ಅಲ್ಲ.. ದೇಶವ್ಯಾಪಿ ಚರ್ಚೆಗೆ ಕಾರಣವಾಗಿದೆ.
ನಿನ್ನೆ ಮೊನ್ನೆಯವರೆಗೂ ಹೀಗೆ
ತೆಲಂಗಾಣ ಸಿಎಂ ಕೆಸಿಆರ್ ಯಾವಾಗ ಮೀಡಿಯಾ ಮುಂದೆ ಮಾತನಾಡಿದರೂ, ಬಹಿರಂಗಸಭೆಗಳನ್ನು ಉದ್ದೇಶಿಸಿ ಮಾತನಾಡಿದರೂ ಬಿಜೆಪಿಯನ್ನು ಟಾರ್ಗೆಟ್ ಮಾಡುತ್ತಿದ್ದರು. ಕೇಂದ್ರದಲ್ಲಿ ಬಿಜೆಪಿ ಸರ್ಕಾರವನ್ನು ಗದ್ದುಗೆಯಿಂದ ಇಳಿಸಬೇಕು ಎಂಬ ಗುರಿಯೊಂದಿಗೆ ಕೆಆರ್ಎಸ್ ಅನ್ನು ಬಿಆರ್ಎಸ್ ಎಂದು ಬದಲಿಸಿದರು. ಮಹಾರಾಷ್ಟ್ರದಲ್ಲಿ ಬೃಹತ್ ಸಮಾವೇಶದ ಮೂಲಕ ಘರ್ಜಿಸಿದರು. ಅದನ್ನು ದೇಶವ್ಯಾಪಿ ವಿಸ್ತರಿಸಲು ಯೋಜನೆ ಮೇಲೆ ಯೋಜನೆಗಳನ್ನು ರೂಪಿಸಿದ್ದರು.ಅಬ್ ಕಿ ಬಾರ್, ಕಿಸಾನ್ ಸರ್ಕಾರ್ ಎಂಬ ನಿನಾದವನ್ನು ಹೊರಡಿಸಿದ್ದರು. ಮೊನ್ನೆ ಮೊನ್ನೆಯಷ್ಟೇ ದೆಹಲಿಯ ಆಡಳಿತ ಸೇವೆಗಳ ಮೇಲೆ ನಿಯಂತ್ರಣದ ವಿಚಾರಕ್ಕೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪರವಾಗಿ ಅಬ್ಬರಿಸಿದ್ದರು. ಕೇಂದ್ರ ಸರ್ಕಾರದ ಆರ್ಡಿನೆನ್ಸ್ ವಿರುದ್ಧ ಜೊತೆ ಜೊತೆಯಲಿ ಘರ್ಜಿಸಿದ್ದರು
ಆದರೆ, ಇಂದು..?
ಕೆಸಿಆರ್-ಕೇಜ್ರಿವಾಲ್ ಭೇಟಿ ನಡೆದು ಸರಿಯಾಗಿ 10 ದಿನ ಕೂಡ ಕಳೆದಿಲ್ಲ. ಈ ಅವಧಿಯಲ್ಲಿಯೇ ಕೆಸಿಆರ್ ಸಾರ್ ಬದಲಾಗಿ ಹೋಗಿದ್ದಾರೆ. ಭಾನುವಾರ ನಿರ್ಮಲ್ನಲ್ಲಿ ಡಿಸಿ ಕಚೇರಿ ಉದ್ಘಾಟಿಸಿ, ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಎಂದಿನಂತೆ ಕೆಸಿಆರ್ಸಾರ್ ಬಿಜೆಪಿಯನ್ನು ಟಾರ್ಗೆಟ್ ಮಾಡುತ್ತಾರೆ. ಬೆಂಕಿಯುಂಡೆಯಂತಹ ಮಾತುಗಳು ಹೊರಬೀಳುತ್ತವೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಕೆಸಿಆರ್ ಮಾತಿನ ವರಸೆ ಸಡನ್ ಆಗಿ ಬದಲಾಗಿ ಹೋಗಿತ್ತು. ಎಲ್ಲಿಯೂ ಬಿಜೆಪಿ ಬಗ್ಗೆ ಉಸಿರೇ ಎತ್ತಲಿಲ್ಲ. ಬದಲಾಗಿ ಕೆಸಿಆರ್ ಟಾರ್ಗೆಟ್ ಮಾಡಿದ್ದು ನೇರವಾಗಿ ಕಾಂಗ್ರೆಸ್ ಪಕ್ಷವನ್ನು.. ಯಾವ ರೇಂಜಿಗೆ ಕಾಂಗ್ರೆಸ್ ವಿರುದ್ಧ ಕೆಸಿಆರ್ ಮುಗಿಬಿದ್ದರು ಎಂದರೇ, ಕಾಂಗ್ರೆಸ್ ಪಕ್ಷವನ್ನು ಎತ್ತಿ ಸಮುದ್ರಕ್ಕೆ ಒಗೆಯಬೇಕು ಎನ್ನುವಷ್ಟರ ಮಟ್ಟಿಗೆ ಕೆಸಿಆರ್ ಬೆಂಕಿಯುಗುಳಿದರು. 50 ವರ್ಷದ ಕಾಂಗ್ರೆಸ್ ಆಳ್ವಿಕೆಯಲ್ಲಿ ಕನಿಷ್ಠ ಪಕ್ಷ ಕುಡಿಯುವ ನೀರು ಕೊಡಲಿಲ್ಲ. ಕಾಂಗ್ರೆಸ್ ಮತ್ತೇನಾದ್ರೂ ಅಧಿಕಾರಕ್ಕೆ ಬಂದಲ್ಲಿ ರೈತಬಂಧು ಯೋಜನೆಗೆ ಎಳ್ಳು ನೀರು ಬಿಡುತ್ತಾರೆ ಎಂಬ ಗುಮ್ಮವನ್ನು ತೋರಿಸಲು ಕೆಸಿಆರ್ ಪ್ರಯತ್ನಿಸಿದರು.
ಸಡನ್ ಯೂಟರ್ನ್ ಏಕೋ?
ತೆಲಂಗಾಣ ಚುನಾವಣೆಗೆ ಇನ್ನು ಆರು ತಿಂಗಳಷ್ಟೇ ಉಳಿದಿದೆ. ಇಷ್ಟು ದಿನ ಕೆಸಿಆರ್ ವರ್ಸಸ್ ಬಿಜೆಪಿ ಎಂಬಂತಿದ್ದ ಪರಿಸ್ಥಿತಿಗಳು ಸಡನ್ ಆಗಿ ಈಗ ಬದಲಾಗಿವೆ. ಕೆಸಿಆರ್ ವರ್ಸಸ್ ಕಾಂಗ್ರೆಸ್ ಎಂಬಂತಾಗಿ ಬಿಟ್ಟಿದೆ. ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶದ ಪರಿಣಾಮಗಳು ತೆಲಂಗಾಣ ಮೇಲೆಯೂ ಆಗಬಹುದು.. ಕಾಂಗ್ರೆಸ್ನತ್ತ ಗಾಳಿ ಬೀಸಬಹುದು ಎಂಬ ಸುಳಿವನ್ನು ಕೆಸಿಆರ್ ಅರಿತವರಂತೆ ಕಾಣುತ್ತಿದೆ. ಇದಕ್ಕಾಗಿಯೇ ಬಿಜೆಪಿಯನ್ನು ಬಿಟ್ಟು ತಮ್ಮ ಸಮೀಪ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷವನ್ನು ಕೆಸಿಆರ್ ಟಾರ್ಗೆಟ್ ಮಾಡಲು ಶುರು ಮಾಡಿದ್ದಾರೆ ಎಂಬ ವಿಶ್ಲೇಷಣೆ ಕೇಳಿಬರುತ್ತಿದೆ.
ಇದರ ಜೊತೆಗೆ, ದೆಹಲಿ ಲಿಕ್ಕರ್ ಹಗರಣದಲ್ಲಿ ಸಿಲುಕಿರುವ ತಮ್ಮ ಪುತ್ರಿ ಕವಿತಾರನ್ನು ರಕ್ಷಣೆ ಮಾಡಲು ಸಿಎಂ ಕೆಸಿಆರ್ ಬಿಜೆಪಿ ಜೊತೆ ಕೈಜೋಡಿಸಿರಬಹುದು ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರತೊಡಗಿವೆ. ಯಾವುದು ನಿಜವೋ?
ADVERTISEMENT
ADVERTISEMENT