ADVERTISEMENT
ದೇಶದಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳದೇ ಇರುವ ಯಾವುದಾದರೂ ಒಂದು ಪಕ್ಷವನ್ನು ತೋರಿಸಿ ಎಂದು ಜೆಡಿಎಸ್ ವರಿಷ್ಠ ಮತ್ತು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಸವಾಲು ಹಾಕಿದ್ದಾರೆ.
ಈ ಮೂಲಕ ಲೋಕಸಭಾ ಚುನಾವಣೆಗೆ ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳಬಹುದು ಎಂಬ ಸುಳಿವು ನೀಡಿದ್ದಾರೆ.
ಕರ್ನಾಟಕವೂ ಸೇರಿದಂತೆ ಅನೇಕ ರಾಜ್ಯಗಳಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಅನೇಕರು ಬಿಜೆಪಿ ಜತೆ ಕೈ ಜೋಡಿಸಿರುವುದು ಎಲ್ಲರಿಗೂ ಗೊತ್ತಿರುವ ಸತ್ಯ ಅಲ್ಲವೇ..? ಎಂದು ಮಾಜಿ ಪ್ರಧಾನಿಗಳು ಪ್ರಶ್ನಿಸಿದ್ದಾರೆ.
ಈ ದೇಶದಲ್ಲಿ ಬಿಜೆಪಿ ಜತೆ ಸೇರಿ ರಾಜಕೀಯ ಮಾಡದೇ ಇರುವ ಯಾವುದರೂ ಪಕ್ಷವನ್ನು ತೋರಿಸಿ..? ಮೊದಲು ನನ್ನ ಪ್ರಶ್ನೆಗೆ ಉತ್ತರ ನೀಡಿ. ಆಮೇಲೆ ನಿಮ್ಮ ಪ್ರಶ್ನೆಗೆ ಉತ್ತರ ಕೊಡುತ್ತೇನೆ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು.
ಅನೇಕ ಪಕ್ಷಗಳು ವಿವಿಧ ರಾಜ್ಯಗಳಲ್ಲಿ ಪ್ರತ್ಯಕ್ಷ, ಪರೋಕ್ಷವಾಗಿ ಬಿಜೆಪಿ ಪಕ್ಷದ ಜತೆಗೆ ಕೈಜೋಡಿಸಿವೆ. ಕಾಂಗ್ರೆಸ್ ಪಕ್ಷದ ಅನೇಕರು ನಾಯಕರು ಬಿಜೆಪಿ ಜತೆ ಶಾಮೀಲಾಗಿದ್ದಾರೆ. ಕರ್ನಾಟಕದಲ್ಲಿಯೂ ಅದನ್ನು ಕಾಣಬಹುದು. ಇದರಲ್ಲಿ ಮುಚ್ಚುಮರೆ ಏನಿದೆ..? ಎಂದು ದೇವೇಗೌಡರು ಹೇಳಿದರು.
ಪಕ್ಷವನ್ನು ಸಂಘಟಿಸುತ್ತೇವೆ:
ಈ ಚುನಾವಣೆಯಲ್ಲಿ ನಾವು ಸೋತಿದ್ದೇವೆ. ಅದರಿಂದ ಕುಗ್ಗಬೇಕಿಲ್ಲ. ಅನೇಕ ಚುನಾವಣೆಗಳಲ್ಲಿ ನಾನು ಸೇರಿದಂತೆ ನಾವೆಲ್ಲರೂ ಗೆದಿದ್ದೇವೆ, ಸೋತಿದ್ದೇವೆ. ಆಮೇಲೆ ಪಿನಿಕ್ಸಿನಂತೆ ಮೇಲೆದ್ದು ಬಂದಿದ್ದೇವೆ. ಈಗಲೂ ಅಷ್ಟೇ, ಸೋತಿದ್ದೇವೆ ಎಂದು ಮನೆಯಲ್ಲಿ ಕೂರಲಾರೆ. ಪಕ್ಷಕ್ಕಾಗಿ ಎಷ್ಟು ಕೆಲಸ ಮಾಡಲಿಕ್ಕೂ ನಾನು ತಯಾರಿದ್ದೇನೆ ಎಂದು ಹೇಳಿದರು.
ಮುಂದೆ ನಮ್ಮ ಅನೇಕ ಚುನಾವಣೆಗಳಿವೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ತಾಲ್ಲೂಕು, ಜಿಲ್ಲಾ ಪಂಚಾಯಿತಿ ಸೇರಿ ಹಲವಾರು ಚುನಾವಣೆಗಳಿವೆ. ಈ ಚುನಾವಣೆಗಳಿಗೆ ನಾವು ಸಿದ್ಧತೆ ಮಾಡಿಕೊಳ್ಳಬೇಕು. ಆ ಬಗ್ಗೆ ಪಕ್ಷದಲ್ಲಿ ಸಮಾಲೋಚನೆ ನಡೆಸಲಾಗುತ್ತಿದೆ. ಸಂಘಟನೆ ಕಡೆ ಒತ್ತು ನೀಡಲಾಗುತ್ತಿದೆ.
ಲೋಕಸಭೆ ಚುನಾವಣೆಯಲ್ಲಿ ಎಷ್ಟು ಕ್ಷೇತ್ರಗಳಲ್ಲಿ, ಯಾವ ಯಾವ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಬೇಕು ಎಂಬುದನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಾಜಿ ಪ್ರಧಾನಿಗಳು ತಿಳಿಸಿದರು.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆಯೋ ಇಲ್ಲವೋ ಎಂಬುದನ್ನು ಪಕ್ಷ ತೀರ್ಮಾನ ಮಾಡುತ್ತದೆ ಎಂದು ಮಾಜಿ ಪ್ರಧಾನಿಗಳು ಪ್ರಶ್ನೆಯೊಂದಕ್ಕೆ ಉತ್ತರಿಸಿದರು
ADVERTISEMENT