ಮೂರೂವರೆ ವರ್ಷಗಳ ಕಾಲ ಅಡ್ಡಾದಿಡ್ಡಿಯಾಗಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಚುನಾವಣೆಯಲ್ಲಿ ಮುಗ್ಗರಿಸಿತ್ತು. ಈ ಸೋಲಿನ ಆಘಾತದಿಂದ ಬಿಜೆಪಿಯಿನ್ನೂ ಚೇತರಿಸಿಕೊಂಡಿಲ್ಲ.
ಮುಖ್ಯಮಂತ್ರಿಗಾದಿಗೇರಿದ ಸಿದ್ದರಾಮಯ್ಯ ಹಂತ ಹಂತವಾಗಿ ಆಡಳಿತವನ್ನು ಸರಿಯಾದ ಹಳಿಗೆ ತರಲು ಶ್ರಮಿಸುತ್ತಿದ್ದಾರೆ. ಒಂದು ವಾರದ ಅವಧಿಯಲ್ಲಿ ಪೂರ್ಣಪ್ರಮಾಣದ ಸಂಪುಟ ರಚನೆ ಮಾಡಿದ್ದಾರೆ. ಒಂದೆರಡು ದಿನಗಳ ಅಂತರದಲ್ಲಿಯೇ ಖಾತೆ ಹಂಚಿಕೆ ಮಾಡಿದ್ದಾರೆ. ಚುನಾವಣೆ ವೇಳೆ ಘೋಷಿಸಿದ್ದ ಐದು ಗ್ಯಾರಂಟಿಗಳನ್ನು ಜಾರಿ ಮಾಡುವ ಘೋಷಣೆ ಮಾಡಿ, ಅದಕ್ಕೆ ಬೇಕಾದ ಎಲ್ಲಾ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆ.
ಆದರೆ, ಕಾಂಗ್ರೆಸ್ ಪಕ್ಷದಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೂ ವಿರೋಧಪಕ್ಷವಾದ ಬಿಜೆಪಿಯಲ್ಲಿ ಚಲನೆಯೇ ಕಂಡುಬರುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಎದುರಿಸಲು ಸಮರ್ಥವಾದ ನಾಯಕ ಯಾರು ಎಂಬುದನ್ನು ಈವರೆಗೂ ಆಯ್ಕೆ ಮಾಡಿಲ್ಲ. ಏಕೆಂದರೇ, ಸಿದ್ದರಾಮಯ್ಯರನ್ನು ಎದುರಿಸುವ ಸಮರ್ಥರನ್ನು ಬಿಜೆಪಿ ಹೈಕಮಾಂಡ್ ಇನ್ನೂ ಗುರುತಿಸಿಯೇ ಇಲ್ಲ.
ನಾವು ಮಾಡಬೇಕಾಗಿರೋದು ಆತ್ಮಾವಲೋಕನ ಅಲ್ಲ.. ಸೋಲಿಗೆ ಕಾರಣಗಳನ್ನು ಹುಡುಕಿ ಸರಿಪಡಿಸಬೇಕಿದೆ. ಕಾರ್ಯಕರ್ತರಲ್ಲಿ ಧೈರ್ಯ, ಉತ್ಸಾಹ ತುಂಬಬೇಕಿದೆ. ಈ ಸೋಲು ಒಂದು ತಾತ್ಕಾಲಿಕ ಹಿನ್ನಡೆ ಅಷ್ಟೇ..ಸೋಲು ಅರಗಿಸಿಕೊಂಡು ಮತ್ತೆ ಎದ್ದೇಳುವ ಮಾಸ್ಟರ್ ಪ್ಲಾನ್ ಮಾಡಬೇಕು
ಎಂದು ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದಗೌಡ ಸಲಹೆ ನೀಡುತ್ತಾರೆ.
ಫಲಿತಾಂಶದ ನಂತರ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಬಂದು ಹೋದರೂ, ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಬಗ್ಗೆ ಸೊಲ್ಲೆತ್ತಲಿಲ್ಲ. ಸದ್ಯ ವಿರೋಧಪಕ್ಷದ ನಾಯಕರನ್ನಾಗಿ ಯಾರನ್ನು ಆಯ್ಕೆ ಮಾಡಿದರೇ ಬೆಟರ್ ಎಂಬ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಮಂಥನಗಳು ನಡೆದಿವೆ. ಆದರೆ, ಈವರೆಗೂ ರಾಜ್ಯ ನಾಯಕರನ್ನು ದೆಹಲಿಗೆ ಕರೆಯಿಸಿ ಮಾತನಾಡಲು ಇನ್ನೂ ಮನಸ್ಸು ಮಾಡಿಲ್ಲ. ಬಸವರಾಜ ಬೊಮ್ಮಾಯಿ ಮತ್ತು ಅರವಿಂದ್ ಬೆಲ್ಲದ್ ಅವರ ಹೆಸರುಗಳು ಪರಿಶೀಲನೆಯಲ್ಲಿವೆ ಎಂಬ ಸುದ್ದಿ ಹಬ್ಬಿದ್ದರೂ, ಹೈಕಮಾಂಡ್ ಮಟ್ಟದಲ್ಲಿ ಇದೇ.. ಹೀಗೆಯೇ ನಡೆಯುತ್ತಿದೆ ಎಂಬುದು ಯಾರಿಗೂ ಗೊತ್ತಿಲ್ಲ.
ವಿಪಕ್ಷ ನಾಯಕನ ಆಯ್ಕೆ ವಿಳಂಬವಾಗುತ್ತಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಸದಾನಂದಗೌಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಕ್ಷಣ ವಿಪಕ್ಷ ನಾಯಕನ ಆಯ್ಕೆ ಆಗಬೇಕು. ಸಿಎಂ ಆಯ್ಕೆ ಆದ ಎರಡು ಮೂರು ದಿನಗಳಲ್ಲಿ ವಿಪಕ್ಷ ನಾಯಕನ ಆಯ್ಕೆ ಆಗಬೇಕಿತ್ತು.. ಇದು ನಡೆದುಕೊಂಡು ಬಂದ ಸಂಪ್ರದಾಯ.. ಶೀಘ್ರದಲ್ಲೇ ವಿಪಕ್ಷ ನಾಯಕನ ಆಯ್ಕೆ ಆಗಲಿ
ಎಂದು ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದಗೌಡ ಹೇಳಿದ್ದಾರೆ
ಬಿಜೆಪಿ ಹೈಕಮಾಂಡ್ ರಾಷ್ಟ್ರಮಟ್ಟದಲ್ಲಿ ಎಷ್ಟೋ ಸಂಚಲನಾತ್ಮಕ ಮಾರ್ಪಾಡುಗಳನ್ನು, ಪ್ರಯೋಗಗಳನ್ನು ಮಾಡಿದೆ. ಉತ್ತರಪ್ರದೇಶ, ಗುಜರಾತ್ನಲ್ಲಿ ಮಂತ್ರಿಗಳನ್ನೇ ಪಕ್ಕಕ್ಕಿಟ್ಟು ಗೆದ್ದು ತೋರಿಸಿತ್ತು. ಆದರೆ, ಕರ್ನಾಟಕದಲ್ಲಿ ಮಾತ್ರ ಬಿಜೆಪಿ ಹೈಕಮಾಂಡ್ನ ಪ್ರಯೋಗಗಳು ಫಲ ಕೊಡಲಿಲ್ಲ.
ಈ ವಿಧಾನಸಭೆ ಚುನಾವಣೆ ಹಲವು ಪಾಠ ಕಲಿಸಿದೆ.. ನಾಲಿಗೆ ಹರಿಬಿಡುವವರನ್ನು ಸೋಲಿಸಿದೆ.. ಕೇವಲ ಹಣದಿಂದ ಚುನಾವಣೆ ನಡೆಯಲ್ಲ ಅಂತಾ ತೋರಿಸಿದೆ
ಎಂದು ಮಾಜಿ ಸಿಎಂ ಡಿವಿ ಸದಾನಂದಗೌಡರು ಹೇಳಿಕೆ ನೀಡಿರುವುದು ಪಕ್ಷದ ಪಡಸಾಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಆದರೆ, ಯಡಿಯೂರಪ್ಪ ಪ್ರತ್ಯಕ್ಷ ರಾಜಕೀಯದಲ್ಲಿದ್ದಾಗ ವಿರೋಧ ಪಕ್ಷದ ನಾಯಕ ಯಾರು ಎಂಬ ಪ್ರಶ್ನೆಯೇ ಯಾವತ್ತೂ ಕೂಡ ಉದ್ಭವಿಸಿರಲಿಲ್ಲ. ಯಡಿಯೂರಪ್ಪ ಸೈಡ್ಲೈನ್ ಆಗಿರುವ ಕಾರಣ ಪಕ್ಷದ ಹೈಕಮಾಂಡ್ ಈಗ ಆಯೋಮಯದಲ್ಲಿದೆ.
ADVERTISEMENT
ADVERTISEMENT