ಐದು ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ರೂಪಾಯಿ ವೆಚ್ಚ ತಗುಲಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಎಂದು ಘೋಷಿಸಿದ್ದಾರೆ.
ಐದು ಗ್ಯಾರಂಟಿ ಯೋಜನೆಗಳಿಗೆ ಸಂಪನ್ಮೂಲವನ್ನು ಜನರಿಗೆ ಹೊರೆಯಾಗದಂತೆ ಹೊಂದಿಸಲಾಗುತ್ತದೆ ಎಂದು ಸಿಎಂ ಹೇಳಿದ್ದಾರೆ.
ನಮ್ಮ ಐದು ಗ್ಯಾರಂಟಿ ಯೋಜನೆಗಳಿಂದಾಗಿ ಒಂದು ವರ್ಷದಲ್ಲಿ ಸುಮಾರು 52,000 ಕೋಟಿ ರೂ.ಗಳನ್ನು ಅಂದಾಜು 1.30 ಕೋಟಿ ಕುಟುಂಬಗಳಿಗೆ ತಲುಪಿಸುವುದರಿಂದ ಪ್ರತೀ ಕುಟುಂಬಕ್ಕೆ ಮಾಸಿಕ 4,000 ರಿಂದ 5,000 ರೂ.ಗಳಷ್ಟು, ಅಂದರೆ, ವಾರ್ಷಿಕವಾಗಿ ಸರಾಸರಿ 48,000 ದಿಂದ 60,000 ರೂ.ಗಳಷ್ಟು ಹೆಚ್ಚುವರಿ ಆರ್ಥಿಕ ನೆರವು ನೀಡಿದಂತಾಗುತ್ತದೆ.
ಇದು ಸಾರ್ವತ್ರಿಕ ಮೂಲ ಆದಾಯ (Universal basic income) ಎಂಬ ಪರಿಕಲ್ಪನೆಯನ್ನು ದೇಶದಲ್ಲಿಯೇ ಪ್ರಥಮ ಬಾರಿಗೆ ಅನುಷ್ಠಾನಗೊಳಿಸಿ ಅಭಿವೃದ್ಧಿಯ ಹೊಸ ಮಾದರಿಯನ್ನು ರೂಪಿಸುವ ಉದ್ದೇಶ ಹೊಂದಿದೆ.
ಬಡವರ ಕೈಗೆ ಹೆಚ್ಚಿನ ಹಣ ನೀಡುವುದರ ಹಿಂದಿರುವ ಪ್ರಬಲ ಆರ್ಥಿಕ ತರ್ಕವನ್ನು ಸದನದ ಗೌರವಾನ್ವಿತ ಸದಸ್ಯರು ಗಮನಿಸಬಹುದಾಗಿದೆ. ಜಿ.ಎಸ್.ಟಿ. ಯ ಬಹುಪಾಲು ಮೊತ್ತವು ಸಮಾಜದ ತಳಹಂತದ ಶೇ.60 ರಷ್ಟು ಜನರಿಂದ ಸಂಗ್ರಹವಾಗುತ್ತಿದ್ದರೂ ಆರ್ಥಿಕ ವ್ಯವಸ್ಥೆಯ ಹೆಚ್ಚಿನ ಲಾಭವು ಸಮಾಜದ ಮೇಲ್ಮಟ್ಟದ ಶೇ.10 ರಷ್ಟು ಜನರಿಗೆ ತಲುಪುತ್ತಿದೆ.
ಆದ್ದರಿಂದ ಬಡವರಿಗೆ ಸಂಪತ್ತನ್ನು ಮರುಹಂಚಿಕೆ ಮಾಡುವ ನೀತಿಗಳನ್ನು ಜನಪರ ಸರ್ಕಾರಗಳು ಅನುಸರಿಸಬೇಕು. ನಮ್ಮ ಗ್ಯಾರಂಟಿ ಯೋಜನೆಗಳು ಈ ಕೆಲಸವನ್ನು ಮಾಡುತ್ತವೆ.
ʻನಡೆಯ ಚೆನ್ನ ನುಡಿದು ತೋರಿ, ನುಡಿಯ ಚೆನ್ನ ನಡೆದು ತೋರಿʼ ಎಂಬ ಬಸವಣ್ಣನವರ ವಚನದಂತೆ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಚಾಲನೆ ನೀಡುವ ಮೂಲಕ ನುಡಿದಂತೆ ನಡೆಯುವ ನಮ್ಮ ಸರ್ಕಾರದ ಬದ್ಧತೆಯನ್ನು ಮತ್ತೊಮ್ಮೆ ಪ್ರದರ್ಶಿಸಿದ್ದೇವೆ.
ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ರಾಜ್ಯದ ಜನತೆ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದೆ. ಕೋವಿಡ್ 19 ರಿಂದಾಗಿ ಹಾಗೂ ಈ ಸಾಂಕ್ರಾಮಿಕದ ಸಂದರ್ಭದಲ್ಲಿ ಹಿಂದಿನ ಸರ್ಕಾರದ ಸಂವೇದನಾರಹಿತ ಕಾರ್ಯನಿರ್ವಹಣೆಯ ಪರಿಣಾಮ, ಒಪ್ಪತ್ತಿನ ಊಟಕ್ಕೂ ಸಂಚಕಾರ ಒದಗಿದ್ದು ಸುಳ್ಳಲ್ಲ.
ದುಡಿಯುವ ಕೈಗಳಿಗೆ ಕೆಲಸ ತಪ್ಪಿದ್ದೂ ನೋಡಿದ್ದೇವೆ. ಉದ್ಯಮಗಳು ಮುಚ್ಚಿದ್ದರಿಂದ ಸಾವಿರಾರು ಕಾರ್ಮಿಕರು ನೌಕರಿ ಕಳೆದುಕೊಂಡು ಬೀದಿ ಪಾಲಾಗಬೇಕಾಯಿತು. ತಮ್ಮ ಅರ್ಹತೆಗಿಂತ ಕಡಿಮೆ ಮಟ್ಟದ ನೌಕರಿ ನೆಚ್ಚಿಕೊಂಡವರು ಅದೆಷ್ಟೋ? ಒಂದೆಡೆ ಸಾಂಕ್ರಾಮಿಕದ ಭೀತಿ;
ಮತ್ತೊಂದೆಡೆ ಹೊಟ್ಟೆಪಾಡಿನ ಚಿಂತೆ. ಸಂಕಷ್ಟಗಳ ಸರಮಾಲೆಗೆ ಬೆಲೆ ಏರಿಕೆಯ ಸೇರ್ಪಡೆಯಿಂದ, ಬಡಜನರ ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಸಾಮಾನ್ಯ ವರ್ಗದ ಜನರ ಬದುಕು ಮೂರಾಬಟ್ಟೆಯಾಗಿ ಸಂಕಟ ಅನುಭವಿಸಿದ್ದು ನಾವೆಲ್ಲರೂ ಕಂಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ಹೇಳಿದ್ದಾರೆ.