ಭಾರತ ಅಂತರಿಕ್ಷ ಚರಿತ್ರೆಯಲ್ಲಿ ಅತ್ಯಂತ ಕ್ಲಿಷ್ಟವಾದ, ಭಾರೀ ಪ್ರಯೋಗಕ್ಕೆ ಇಸ್ರೋ(Isro) ಸಜ್ಜಾಗುತ್ತಿದೆ. ಚಂದ್ರಯಾನ್-3(Chandrayan3) ಪ್ರಯೋಗ ಜುಲೈ 14ರ ಮಧ್ಯಾಹ್ನ 2.35ಕ್ಕೆ ನಡೆಯಲಿದೆ.
ಶ್ರೀಹರಿಕೋಟಾದಿಂದ ನಭಕ್ಕೆ ಚಿಮ್ಮಲಿರುವ ಚಂದ್ರಯಾನ್-3 ಚಂದ್ರನ ಅಂಗಳ (Moon surface)ತಲುಪಲು 40 ದಿನ ಹಿಡಿಯಲಿದೆ.
ಚಂದ್ರಯಾನ್2 ಪ್ರಯೋಗ ನಡೆದಿದ್ದು 2019ರ ಜುಲೈ 22ರಂದು.. 2019ರ ಸೆಪ್ಟೆಂಬರ್ 6ರಂದು ಚಂದ್ರನ ಮೇಲೆ ಇಳಿಯಲು ವಿಕ್ರಮ್ ಲ್ಯಾಂಡರ್ ಸಜ್ಜಾಯಿತು. ಅಂದರೆ ಚಂದ್ರಯಾನ್-2 ಪ್ರಯೋಗಕ್ಕೆ ಹಿಡಿದಿದ್ದು 48 ದಿನ.
ಚಂದ್ರಯಾನ್-1ರ ಪ್ರಯೋಗ ನಡೆದಿದ್ದು 2008ರ ಆಗಸ್ಟ್ 28ರಂದು.. ಅದರಲ್ಲಿನ ಆರ್ಬಿಟರ್ ಚಂದ್ರನ ಕಕ್ಷೆ ಸೇರಿದ್ದು ಮಾತ್ರ 2008ರ ನವೆಂಬರ್ 8ರಂದು. ಅಂದರೆ ಈ ಪಯಣಕ್ಕೆ ಹಿಡಿದಿದ್ದು 77 ದಿನ.
ನಾಲ್ಕು ದಿನದಲ್ಲಿಯೇ ಚಂದ್ರನನ್ನು ಸೇರಿದ ನಾಸಾ ಬಾಹ್ಯಾಕಾಶಯಾನಿಗಳು
1969ರಲ್ಲಿ ಅಮೆರಿಕಾದ ಅಂತರಿಕ್ಷ ಸಂಸ್ಥೆ ನಾಸಾ (NASA) ಕಳಿಸಿದ ಅಪೋಲೋ 11 (Appolo 11) ಎಂಬ ಮಾನವಸಹಿತ ವ್ಯೋಮನೌಕೆ 4 ದಿನಗಳಲ್ಲಿ ಗಮ್ಯ ಸೇರಿತ್ತು. ಆದರೆ, ಇಸ್ರೋ ಜುಲೈ 14ರಂದು ಕಳಿಸುತ್ತಿರುವ ಚಂದ್ರಯಾನ-3 ಚಂದ್ರನ ಕಕ್ಷೆಯನ್ನು ಸೇರಲು 40 ದಿನ ಹಿಡಿಯಲಿದೆ.
50 ವರ್ಷಗಳ ಹಿಂದೆಯೇ ಅಷ್ಟು ವೇಗವಾಗಿ ಚಂದ್ರನನ್ನು ತಲುಪಲು ಸಾಧ್ಯವಾಗುತ್ತೆ ಎನ್ನುವುದಾದರೇ ಇಸ್ರೋ ಕಳಿಸಿದ ಚಂದ್ರಯಾನ ಇನ್ನಷ್ಟು ವೇಗವಾಗಿ ಚಂದಿರನನ್ನು ತಲುಪಬೇಕಿತ್ತಲ್ಲವೇ.. ಏಕೆ ಈ ವಿಳಂಬ? ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.
ಚಂದ್ರಯಾನ-3ರ ಸುದೀರ್ಘ ಪಯಣದ ಹಿಂದೆ ಸಾಕಷ್ಟು ತಾಂತ್ರಿಕ ಕಾರಣಗಳಿವೆ. 1969ರಲ್ಲಿ ನಾಸಾ ಪ್ರಯೋಗಿಸಿದ ಅಪೊಲೋ 11ರ ರಾಕೆಟ್ ಭಾರ ಇಂಧನವನ್ನು ಸೇರಿಸಿ 2800 ಟನ್. ಆದರೆ, ಇಸ್ರೋ ಪ್ರಯೋಗಿಸಲಿರುವ ಜಿಎಸ್ಎಲ್ವಿ ಮಾರ್ಕ್ 3 ರಾಕೆಟ್ ಭಾರ ಇಂಧನ ಸೇರಿ 640 ಟನ್ ಅಷ್ಟೇ ಇದೆ.
ಇದರಲ್ಲಿ ಚಂದ್ರನ ಮೇಲೆ ಹೋಗುವ ಪ್ರೊಪಲ್ಷನ್ ಮಾಡ್ಯೂಲ್ 2148 ಕೆಜಿ. ಲ್ಯಾಂಡರ್, ರೋವರ್ ಮಾಡ್ಯೂಲ್ಗಳ ತೂಕ 1752 ಕೆಜಿ.
ಅಂದರೆ, ಚಂದ್ರನತ್ತ ತೆರಳಿರುವ ವಸ್ತುಗಳ ಒಟ್ಟು ಭಾರ ಅಂದಾಜು 4ಸಾವಿರ ಟನ್. ಇಸ್ರೋ ಬಳಿ ಇರುವ ರಾಕೆಟ್ಗಳಲ್ಲಿ 4 ಟನ್ ಪೆಲೋಡ್ ತೆಗೆದುಕೊಂಡು ಹೋಗುವ ಸಾಮರ್ಥ್ಯ ಇರೋದು ಜಿಎಸ್ಎಲ್ವಿ ಮಾರ್ಕ್3ಗೆ ಮಾತ್ರ.
ಸಾಮಾನ್ಯವಾಗಿ ಸ್ಯಾಟಲೈಟ್ಗಳನ್ನು ಅಂತರಿಕ್ಷಕ್ಕೆ ತೆಗೆದುಕೊಂಡುಹೋಗುವ ಪಿಎಸ್ಎಲ್ವಿ ರಾಕೆಟ್ಗಳು ಇಷ್ಟು ಭಾರ ಹೊಂದಿರಲ್ಲ. ಏಕೆಂದರೆ ಅವು ಕೇವಲ ಸ್ಯಾಟಲೈಟ್ಗಳನ್ನು ತೆಗೆದುಕೊಂಡು ಹೋಗಿ ಜಿಯೋ ಸಿಂಕ್ರನೈಸ್ಡ್ ಇಲ್ಲವೇ ಜಿಯೋ ಸ್ಟೇಷನರಿ ಆರ್ಬಿಟ್ನಲ್ಲಿ ಬಿಡುತ್ತವೆ.
ಆದರೆ, ಇದಕ್ಕೆ ಚಂದ್ರಯಾನ್ ವಿಭಿನ್ನ. ಏಕೆಂದರೇ ಚಂದ್ರನ ಬಳಿಗೆ ಹೋಗಬೇಕಿರುವ ವಾಹನ ನೌಕೆಯಲ್ಲಿ ಇಂಧನದ ಜೊತೆ ಸಾಕಷ್ಟು ಪರಿಕರಗಳಿವೆ. ಅದಕ್ಕೆ ಇಂತಹ ಪ್ರಯೋಗಗಳಿಗೆ ಶಕ್ತಿಯುತವಾದ ರಾಕೆಟ್ಗಳನ್ನು ಬಳಸುತ್ತಾರೆ.
ಈ ವಿಚಾರದಲ್ಲಿ ನಾಸಾ ಪ್ರಯೋಗಿಸಿದ ರಾಕೆಟ್ಗಳ ಭಾರ ಜಾಸ್ತಿ. ಭೂಕಕ್ಷೆಯನ್ನು ದಾಟಿದ ನಂತರ ಚಂದ್ರನ ಕಡೆ ಪಯಣಿಸಿದ ಅಪೋಲೋ ನೌಕೆಯ ಭಾರ 45.7ಟನ್. ಇದರಲ್ಲಿ ಶೇಕಡಾ 80ರಷ್ಟು ಭಾರ ಇಂಧನದ್ದೇ ಆಗಿತ್ತು.
ಅಂದರೆ ಅಪೋಲೋ 11ನಲ್ಲಿ ಈಗಲ್ ಎಂಬ ಲ್ಯಾಂಡರ್ ಚಂದ್ರನ ಮೇಲೆ ಇಳಿದು, ವ್ಯೋಮಗಾಮಿಗಳು ಅದರ ಚಂದ್ರನ ಮೇಲೆ ಹೆಜ್ಜೆ ಇಟ್ಟು ಸಂಶೋಧನೆ ನಡೆಸಿ, ಮತ್ತೆ ಆ ಲ್ಯಾಂಡ್ ಆರ್ಬಿಟರ್ ಅನ್ನು ಸೇರಿಕೊಂಡು, ಅದು ಭೂಮಿಗೆ ಬರಲು ಇಷ್ಟು ಇಂಧನ ಅಗತ್ಯವಾಯಿತು.
ಅಪೋಲೋ 11 ಪ್ರಯೋಗಕ್ಕೆ ಬಳಸಿದ ರಾಕೆಟ್ ಸಾಟರನ್ ಫೈವ್ ಎಸ್ಎಎಎ 506 ಅತ್ಯಂತ ಶಕ್ತಿಯುತವಾಗಿತ್ತು. ಅಷ್ಟು ಭಾರೀ ಇಂಧನ..ಅಷ್ಟು ಭಾರೀ ಗಾತ್ರದ ರಾಕೆಟ್ ಆದ ಕಾರಣ ಅಪೋಲೋ 11 ಕೇವಲ 4 ದಿನದಲ್ಲಿ ನೇರವಾಗಿ ಪಯಣಿಸಿ ಚಂದ್ರನ ಅಂಗಳ ಸೇರಿತು..
ಮುಂದುವರೆಯುತ್ತದೆ..