ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (2023-25) ಸೈಕಲ್ನಲ್ಲಿ ಟೀಂ ಇಂಡಿಯಾಗೆ ಅದ್ಧೂರಿ ಆರಂಭ ಸಿಕ್ಕಿದೆ.
ಡೊಮಿನಿಕಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಟೆಸ್ಟ್ನಲ್ಲಿ ಟೀಂ ಇಂಡಿಯಾ ಇನ್ನೂ ಎರಡು ದಿನಗಳ ಆಟ ಬಾಕಿ ಇರುವಂತೆಯೆ ವಿಜಯದ ನಗಾರಿ ಬಾರಿಸಿದೆ.
312/2 ಓವರ್ ನೈಟ್ ಸ್ಕೋರ್ನೊಂದಿಗೆ ಮೂರನೇ ದಿನದ ಆಟ ಆರಂಭಿಸಿದ ಭಾರತ. 421/5ಕ್ಕೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಮೊದಲ ಇನ್ನಿಂಗ್ಸ್ನಲ್ಲಿ 271ರನ್ಗಳ ಮುನ್ನಡೆ ಸಂಪಾದಿಸಿತು.
ನಂತರ ಎರಡನೇ ಇನ್ನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ಅಶ್ವಿನ್ ಎಂಬ ಸ್ಪಿನ್ ಮಾಂತ್ರಿಕ (7/71)ನ ಜಾಲದಲ್ಲಿ ಸಿಲುಕಿ ಕೇವಲ 130 ರನ್ಗಳಿಗೆ ಸರ್ವಪತನ ಕಂಡಿತು.
ಇದರೊಂದಿಗೆ ಭಾರತ ಇನ್ನಿಂಗ್ಸ್ ಮತ್ತು 141 ರನ್ಗಳ ಅಂತರದಿಂದ ಭಾರೀ ಗೆಲುವು ಸಾಧಿಸಿತು.
ಮೊದಲ ಇನ್ನಿಂಗ್ಸ್ನಲ್ಲಿ ವಿಂಡೀಸ್ 141 ರನ್ಗಳಿಗೆ ಆಲೌಟ್ ಆಗಿತ್ತು.
ಮೊದಲ ಪಂದ್ಯದಲ್ಲೇ ಭರ್ಜರಿ ಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್ ನಿರೀಕ್ಷೆಯಂತೆಯೇ ಪ್ಲೇಯರ್ ಆಫ್ ದಿ ಮ್ಯಾಚ್ ಆದರು.
ಎರಡನೇ ಟೆಸ್ಟ್ ಜುಲೈ 20ರಿಂದ ಆರಂಭವಾಗಲಿದೆ.
ವಿಂಡೀಸ್ ಪತನ ಹೀಗಾಯ್ತು..
ಮೊದಲ ಇನ್ನಿಂಗ್ಸ್ನಲ್ಲಿ ಐದು ವಿಕೆಟ್ ಪಡೆದಿದ್ದ ಅಶ್ವಿನ್ ಎರಡನೇ ಇನ್ನಿಂಗ್ಸ್ನಲ್ಲಿಯೂ ತಮ್ಮ ಸ್ಪಿನ್ ಮಾಯಾಜಾಲ ಪ್ರದರ್ಶಿಸಿದರು. ಇದರೊಂದಿಗೆ ಕೆರಿಬಿಯನ್ ಬ್ಯಾಟರ್ಗಳು ಪವಿಲಿಯನ್ ಪರೇಡ್ ನಡೆಸಿದರು.
ತ್ಯಾಗ್ನಾರಾಯಣ್ ಚಂದ್ರಪಾಲ್(7)ರನ್ನು ಜಡೇಜಾ ಎಲ್ಬಿ ಮಾಡುವುದರೊಂದಿಗೆ ವಿಂಡೀಸ್ ಪತನ ಶುರುವಾಯಿತು.. ಕೆಲ ಹೊತ್ತಿಗೆಲ್ಲಾ ಕ್ರೆಗ್ ಬ್ರಾತ್ವೈಟ್(7) ಅಶ್ವಿನ್ ಬೌಲಿಂಗ್ನಲ್ಲಿ ಸ್ಲಿಪ್ನಲ್ಲಿದ್ದ ರಹಾನೆ ಕೈಗೆ ಕೈಗೆ ಕ್ಯಾಚಿತ್ತರು. ಟೀ ವಿರಾಮದ ಹೊತ್ತಿಗೆ ವಿಂಡೀಸ್ ಪರಿಸ್ಥಿತಿ 27/2 .
ಕೊನೆಯ ಸೆಷನ್ನಲ್ಲಿ 8 ವಿಕೆಟ್ ಕಳೆದುಕೊಂಡಿತು. ಕೊನೆಯ ಸೆಷನ್ ಆರಂಭ ಆಗುತ್ತಲೇ ಬ್ಲಾಕ್ವುಡ್(5)ರನ್ನು ಅಶ್ವಿನ್ ಪೆವಿಲಿಯನ್ಗೆ ಕಳಿಸಿದರು. ನಂತರ ರಿಫರ್(11) ವಿಕೆಟ್ ಅನ್ನು ಜಡೇಜಾ ಪಡೆದರು. ಸಿರಾಜ್ ಬೌಲಿಂಗ್ನಲ್ಲಿ ದ ಸಿಲ್ವಾ(13) ಎಲ್ಬಿ ಆದರು.
ಕೊನೆಯ ಐದು ವಿಕೆಟ್ಗಳು ಅಶ್ವಿನ್ ಪಾಲಾದವು. ಅಥನೇಜ್(28),ಅಲ್ಜಾರಿ ಜೋಸೆಫ್(13), ರಖೀಮ್ ಕಾರ್ನಿವಾಲ್(4), ಕಿಮರ್ ರೋಚ್(0), ವಾರಿಕನ್(18) ವಿಕೆಟ್ಗಳನ್ನು ಅಶ್ವಿನ್ ಕೊಳ್ಳೆಹೊಡಡೆದರು.
ಯಶಸ್ಸಿನ ಜೈತ್ರಯಾತ್ರೆ ಶುರು ಮಾಡಿದ ಜೈಸ್ವಾಲ್
ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಪದಾರ್ಪಣೆ ಪಂದ್ಯದಲ್ಲಿಯೇ ಶತಕ ಬಾರಿಸಿದರು.
387 ಎಸೆತಗಳಲ್ಲಿ 14 ಫೋರ್, 1 ಸಿಕ್ಸ್ ಸಹಿತ 171 ರನ್ ಗಳಿಸಿ ಮಿಂಚಿದರು. ಇನ್ನು ಎಂಟು ರನ್ ಗಳಿಸಿದ್ದರೆ ಶಿಖರ್ ಧವನ್ ದಾಖಲೆ ಮೀರಿ ನಯಾ ರೆಕಾರ್ಡ್ಗೆ ಜೈಸ್ವಾಲ್ ಪಾತ್ರರಾಗುತ್ತಿದ್ದರು.
ಕ್ಯಾಪ್ಟನ್ ರೋಹಿತ್ ಶರ್ಮಾ 103ರನ್, ವಿರಾಟ್ ಕೊಹ್ಲಿ 76ರನ್, ಜಡೇಜಾ ಔಟಾಗದೇ 37 ರನ್ ಗಳಿಸಿ ಮಿಂಚಿದರು.
ವಿಂಡೀಸ್ ಬೌಲರ್ಗಳ ಪೈಕಿ ಕಿಮರ್ ರೋಚ್, ಅಲ್ಜಾರಿ ಜೋಸೆಫ್, ರಖೀಮ್ ಕಾರ್ನಿವಾಲ್, ವಾರಿಕನ್, ಅಥನೇಜ್ ತಲಾ ಒಂದು ವಿಕೆಟ್ ಪಡೆದರು
ADVERTISEMENT
ADVERTISEMENT