ADVERTISEMENT
ಮಾನನಷ್ಟ ಮೊಕದ್ದಮೆಯಲ್ಲಿ ಗುಜರಾತ್ ಉಚ್ಛ ನ್ಯಾಯಾಲಯದ ಆದೇಶದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸರ್ವೋಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.
ಈ ಮೇಲ್ಮನವಿಯಲ್ಲಿ ರಾಹುಲ್ ಅವರು ಎರಡು ಮನವಿಗಳನ್ನು ಮಾಡಿದ್ದಾರೆ.
ದೋಷಿ ಎಂದು ಘೋಷಿಸಿ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ ಸೂರತ್ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದು ಮೇಲ್ಮನವಿಯನ್ನು ವಜಾಗೊಳಿಸಿದ್ದ ಗುಜರಾತ್ ಉಚ್ಛ ನ್ಯಾಯಾಲಯದ ಆದೇಶವನ್ನು ತಡೆ ಹಿಡಿಯಬೇಕು.
ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ವಿಚಾರಣೆ ಮುಗಿಯುವರೆಗೆ ಗುಜರಾತ್ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಮತ್ತು ದೋಷಿ ಎಂದು ನೀಡಲಾಗಿರುವ ಆದೇಶಕ್ಕೆ ತಡೆ ನೀಡಬೇಕು.
ಉಪ ಚುನಾವಣೆ ಘೋಷಿಸಬಹುದು:
ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡು 112 ದಿನಗಳಾಗಿವೆ ಮತ್ತು ಯಾವುದೇ ಕ್ಷಣದಲ್ಲಾದರೂ ಚುನಾವಣಾ ಆಯೋಗ ವಯನಾಡು ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಿಸಬಹುದು. ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 20ರಿಂದ ಆರಂಭವಾಗಲಿದೆ ಮತ್ತು ಮಧ್ಯಂತರ ಪರಿಹಾರ ಸಿಗದೇ ಹೋದರೆ ಆ ಕಲಾಪಗಳಲ್ಲಿ ಭಾಗವಹಿಸುವ ಮತ್ತು ನನ್ನ ಪಕ್ಷ ಮತ್ತು ಕ್ಷೇತ್ರವನ್ನು ಪ್ರತಿನಿಧಿಸುವ ಅವಕಾಶದಿಂದ ವಂಚಿತನಾಗುತ್ತೇನೆ
ಎಂದು ಸುಪ್ರೀಂಕೋರ್ಟ್ಗೆ ಸಲ್ಲಿಸಿರುವ ಮೇಲ್ಮನವಿಯಲ್ಲಿ ರಾಹುಲ್ ಗಾಂಧಿ ವಾದಿಸಿದ್ದಾರೆ.
ಉಪ ಚುನಾವಣೆ ಯಾವಾಗ..?
ಜನಪ್ರತಿನಿಧಿ ಕಾಯ್ದೆಯ ಕಲಂ 151ಎ ಅಡಿಯಲ್ಲಿ ಖಾಲಿ ಆಗಿರುವ ಲೋಕಸಭಾ ಅಥವಾ ರಾಜ್ಯಸಭಾ ಮತ್ತು ವಿಧಾನಸಭೆ ಅಥವಾ ವಿಧಾಪರಿಷತ್ ಸ್ಥಾನಗಳಿಗೆ ಅವುಗಳು ಖಾಲಿ ಆದ ದಿನದಿಂದ 6 ತಿಂಗಳೊಳಗೆ ಉಪ ಚುನಾವಣೆ ನಡೆಸಬೇಕು.
ಸಂಸದ ಅಥವಾ ಶಾಸಕ ಅಥವಾ ಎಂಎಲ್ಸಿಗಳ ರಾಜೀನಾಮೆ, ಮರಣ ಅಥವಾ ಅನರ್ಹತೆ ಕಾರಣದಿಂದ ಸದಸ್ಯತ್ವ ಖಾಲಿಯಾದರೆ ಉಪ ಚುನಾವಣೆ ನಡೆಯುತ್ತದೆ.
ಸದಸ್ಯ ಸ್ಥಾನ ಖಾಲಿ ಆದ ದಿನದಿಂದ ಒಂದು ವೇಳೆ ಲೋಕಸಭೆ ಅಥವಾ ವಿಧಾನಸಭೆಯ ಅವಧಿ ಮುಗಿಯಲು 1 ವರ್ಷಕ್ಕಿಂತ ಹೆಚ್ಚು ಸಮಯ ಇದ್ದರೆ ಉಪ ಚುನಾವಣೆ ನಡೆಸಬೇಕಾಗುತ್ತದೆ.
ವಯನಾಡು ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಾ..?
ರಾಹುಲ್ ಗಾಂಧಿ ಅವರು ಲೋಕಸಭಾ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದು ಮಾರ್ಚ್ 23. ಈಗಾಗಲೇ 113 ದಿನಗಳಾಗಿವೆ.
17ನೇ ಲೋಕಸಭೆಯ ಅವಧಿ ಮುಗಿಯುವುದು ಮುಂದಿನ ವರ್ಷದ ಅಂದರೆ 2024ರ ಜೂನ್ 16ರಂದು. ಅಂದರೆ ರಾಹುಲ್ ಅವರ ಅನರ್ಹತೆ ಮತ್ತು ಹಾಲಿ ಲೋಕಸಭೆಯ ಅವಧಿ ಮುಕ್ತಾಯದ ನಡುವೆ ಕನಿಷ್ಠ 15 ತಿಂಗಳ ಅಂತರವಿದೆ.
ಉಪ ಚುನಾವಣೆ ಘೋಷಿಸಿ ಅಧಿಸೂಚನೆ ಹೊರಡಿಸುವ ದಿನಾಂಕದಿಂದ ಚುನಾವಣಾ ಪ್ರಕ್ರಿಯೆ ಮುಗಿಸಲು ಚುನಾವಣಾ ಆಯೋಗಕ್ಕೆ 1 ತಿಂಗಳು ಕಾಲಾವಕಾಶ ಬೇಕಾಗುತ್ತದೆ.
ಹೀಗಾಗಿ ಒಂದು ವೇಳೆ ರಾಹುಲ್ ಗಾಂಧಿ ಅವರ ಅರ್ಜಿ ಪರಿಗಣಿಸಿ ದೋಷಿ ಎಂಬ ತೀರ್ಪಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡದೇ ಇದ್ದರೆ ಆಗ ಚುನಾವಣಾ ಆಯೋಗ ಉಪ ಚುನಾವಣೆ ಘೋಷಿಸಿದರೂ ಅಚ್ಚರಿಯೇನಿಲ್ಲ.
ADVERTISEMENT