ADVERTISEMENT
ಕಾವೇರಿ ನೀರು ಬಿಡುವಂತೆ ಕರ್ನಾಟಕಕ್ಕೆ ಸೂಚಿಸಿ ಎಂದು ಆಗ್ರಹಿಸಿ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.
ಕುರುವೈ ಭತ್ತ ಬೆಳೆಯನ್ನು ಉಳಿಸಿಕೊಳ್ಳುವ ಸಲುವಾಗಿ ಕಾವೇರಿ ನೀರು ಬಿಡುವುದು ಅನಿವಾರ್ಯ ಎಂದು ಸಿಎಂ ಸ್ಟಾಲಿನ್ ಪತ್ರದಲ್ಲಿ ಹೇಳಿದ್ದಾರೆ.
ಜೂನ್ 1ರಿಂದ ಜುಲೈ 31ರವರೆಗೆ ಕರ್ನಾಟಕ ತಮಿಳುನಾಡಿಗೆ ನಿಗದಿಯಂತೆ 40.4 ಟಿಎಂಸಿ ನೀರನ್ನು ಬಿಡುಗಡೆ ಮಾಡಬೇಕಿತ್ತು. ಆದರೆ ಈ ಅವಧಿಯಲ್ಲಿ ಕೇವಲ 11.6 ಟಿಎಂಸಿ ನೀರನ್ನು ಬಿಡುಗಡೆ ಮಾಡಿದೆ.
ಒಟ್ಟು 114.6 ಟಿಎಂಸಿ ಸಾಮರ್ಥ್ಯದ ಕರ್ನಾಟಕದ ಅಣೆಕಟ್ಟಿನಲ್ಲಿ 91 ಟಿಎಂಸಿ ನೀರಿದ್ದರೂ 28.8 ಟಿಎಂಸಿ ನೀರನ್ನು ಬಾಕಿ ಉಳಿಸಿಕೊಳ್ಳಲಾಗಿದೆ.
ಮೆಟ್ಟೂರು ಜಲಾಶಯ ತಮಿಳುನಾಡಿನಲ್ಲಿ ಕಾವೇರಿ ಜಲಾನಯನ ಭಾಗದ ಜೀವನಾಡಿಯಾಗಿದ್ದು, ಕೇವಲ 26.6 ಟಿಎಂಸಿ ನೀರಷ್ಟೇ ಇದೆ. ಈ ಡ್ಯಾಂನಲ್ಲಿರುವ ನೀರನ್ನು 15 ದಿನಗಳ ಮಟ್ಟಿಗಷ್ಟೇ ಬೆಳೆಗೆ ಬಳಸಬಹುದಾಗಿದ್ದು, ಆದರೆ ಭತ್ತದ ಬೆಳೆಗೆ 45 ದಿನಗಳ ನೀರಿನ ಅಗತ್ಯವಿದೆ.
ನಾವು ಈಗಾಗಲೇ ಜುಲೈ 5 ಮತ್ತು ಜುಲೈ 19ರಂದು ಜಲಶಕ್ತಿ ಸಚಿವಾಲಯಕ್ಕೆ ಪತ್ರವನ್ನು ಬರೆದಿದ್ದೇವೆ. ಹೀಗಾಗಿ ನೀವು ಕೂಡಾ ತಮಿಳುನಾಡಿಗೆ ನೀರು ಬಿಡುವ ಸಲುವಾಗಿ ಕರ್ನಾಟಕಕ್ಕೆ ಸೂಚನೆ ನೀಡುವಂತೆ ಜಲಶಕ್ತಿ ಸಚಿವಾಲಯಕ್ಕೆ ಸೂಚಿಸಿ ಎಂದು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದಿರುವ ಪತ್ರದಲ್ಲಿ ಆಗ್ರಹಿಸಿದ್ದಾರೆ.
ADVERTISEMENT