ADVERTISEMENT
ಲೇಖನ: ಅಕ್ಷಯ್ ಕುಮಾರ್
ಪ್ರಧಾನಿ ನರೇಂದ್ರ ಮೋದಿ ಅಪಶಕುನವೇ..? ಮೋದಿ ವಿಶ್ವಕಪ್ ನೋಡಲು ಹೋಗಿದ್ದರಿಂದ ಭಾರತ ಮೂರನೇ ಬಾರಿ ವಿಶ್ವಕಪ್ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿತೇ..?
ವಿಶ್ವಕಪ್ನಲ್ಲಿ ಸೆಮಿಫೈನಲ್ವರೆಗೆ ಒಂದೇ ಒಂದು ಪಂದ್ಯವನ್ನೂ ಸೋಲದೇ ಅಜೇಯವಾಗಿ ಉಳಿದಿದ್ದ ಭಾರತ ಫೈನಲ್ನಲ್ಲಿ ಮೋದಿ ಕಾಲ್ಗುಣದ ಕಾರಣದಿಂದ ಸೋಲಿತೇ..?
ನಮ್ಮ ಹುಡುಗರು ವಿಶ್ವಕಪ್ ಗೆಲ್ಲುತ್ತಿದ್ದರು, ಆದರೆ ಆ ಒಬ್ಬರು ಅಪಶಕುನದ ವ್ಯಕ್ತಿ ಬಂದು ಎಲ್ಲವನ್ನೂ ಹಾಳು ಮಾಡಿದರು
ಎಂದು ರಾಜಸ್ಥಾನ ಜಲೋರ್ನಲ್ಲಿ ಚುನಾವಣಾ ಭಾಷಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನೂ ಉಲ್ಲೇಖಿಸದೇ ಮೊಟಕಿದ್ದಾರೆ.
ಮೋದಿ ಸ್ಟೇಡಿಯಂ ಎಂದು ಮರು ನಾಮಕರಣ:
೨೦೨೧ರಲ್ಲಿ ಅಹಮದಾಬಾದ್ನಲ್ಲಿರುವ ಸರ್ದಾರ್ ವಲ್ಲಭಾಯ್ ಪಟೇಲ್ ಸ್ಟೇಡಿಯಂನ್ನು ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರು ನಾಮಕರಣ ಮಾಡಲಾಯಿತು.
ಈ ವಿಶ್ವಕಪ್ನ ಉದ್ಘಾಟನಾ ಪಂದ್ಯ ಮತ್ತು ಕೊನೆಯ ಪಂದ್ಯ ನಡೆದಿದ್ದು ಮೋದಿ ಸ್ಟೇಡಿಯಂನಲ್ಲೇ.
ಕಾಂಗ್ರೆಸ್ ಅವಧಿಯಲ್ಲೇ ಅಧಿಕ ಕಪ್:
ಮೋದಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ವಿಶ್ಬಕಪ್ ಸೋತ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರತ ಇದುವರೆಗೆ ಗೆದ್ದಿರುವ ಐಸಿಸಿ ಆಯೋಜಿಸಿರುವ ಟ್ರೋಫಿಗಳು, ಅವುಗಳಲ್ಲಿ ಭಾರತ ಗೆದ್ದಿದ್ದೆಷ್ಟು..? ಯಾವ ವಷ..? ಮತ್ತು ಆ ಅವಧಿಯಲ್ಲಿ ದೇಶದಲ್ಲಿ ಯಾರ ಸರ್ಕಾರ ಅಧಿಕಾರದಲ್ಲಿತ್ತು ಎಂಬ ಚಚೆ ನಡೆದಿದೆ.
ವಿಶ್ವಕಪ್ ರಾಜಕೀಯ:
ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯದಲ್ಲೇ ಇರುವ ಮೋದಿ ಸ್ಟೇಡಿಯಂನಲ್ಲೇ ಫೈನಲ್ ನಡೆಯುವುದರಿಂದ ಮತ್ತು ಮೋದಿಯವರೇ ಖುದ್ದು ಪಂದ್ಯ ವೀಕ್ಷಣೆ ಮಾಡಲಿರುವುದರಿಂದ ಭಾರತ ವಿಶ್ವಕಪ್ ಗೆದ್ದು ವಿಶ್ವಗುರು ಆಗಲಿದೆ ಎಂದು ಬಿಜೆಪಿ ಮತ್ತು ಮೋದಿ ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾಗಳಲ್ಲಿ ವಾದಿಸಿದ್ದರು.
ಭಾರತ ಗೆದ್ದ ಐಸಿಸಿ ಟ್ರೋಫಿಗಳು ಮತ್ತು ಆಗ ಪ್ರಧಾನಿ ಆಗಿದ್ದವರು:
೧೯೮೩ರಲ್ಲಿ ಭಾರತ ಮೊದಲ ಬಾರಿಗೆ ವಿಶ್ವಕಪ್ ಗೆದ್ದುಕೊಂಡಿತು. ಆಗ ಕಪಿಲ್ ದೇವ್ ಅವರು ಭಾರತ ತಂಡದ ನಾಯಕರಾಗಿದ್ದರು. ಭಾರತದಲ್ಲಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಇತ್ತು.
ಇದಾದ ೨೮ ವರ್ಷಗಳ ಬಳಿಕ ೨೦೧೧ರಲ್ಲಿ ಎರಡನೇ ಬಾರಿಗೆ ಭಾರತ ಏಕದಿನ ವಿಶ್ವಕಪ್ ಗೆದ್ದುಕೊಂಡಿತು. ಆಗ ಮಹೇಂದ್ರ ಸಿಂಗ್ ಧೋನಿ ನಾಯಕರಾಗಿದ್ದರು. ಭಾರತದಲ್ಲಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಇತ್ತು.
೨೦೦೭ರಲ್ಲಿ ಭಾರತ ತಂಡ ಟಿ-ಟ್ವೆಂಟಿ ವಿಶ್ವಕಪ್ ಗೆದ್ದುಕೊಂಡಿತ್ತು. ೨೦೦೨ ಮತ್ತು ೨೦೧೩ರಲ್ಲಿ ಭಾರತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿತ್ತು.
೨೦೦೪ರಿಂದ ೨೦೧೪ರ ಆರಂಭದವರೆಗೆ ಕಾಂಗ್ರೆಸ್ ನೇತೃತ್ವದ ಯಪಿಎ ಸರ್ಕಾರ ಇತ್ತು. ರಾಜಕೀಯ ಹಿನ್ನೆಲೆಯಲ್ಲಿ ನೋಡುವುದಾದರೆ ಭಾರತ ಎರಡು ಬಾರಿ ವಿಶ್ವಕಪ್ ಗೆದ್ದಿದ್ದೂ ಕಾಂಗ್ರೆಸ್ ಆಡಳಿತ ಇದ್ದಾಗಲೇ. ಮೊದಲ ಟಿ-ಟ್ವೆಂಟಿ ವಿಶ್ವಕಪ್ ಗೆದ್ದಿದ್ದೂ ಕಾಂಗ್ರೆಸ್ ಅವಧಿಯಲ್ಲೇ.
ಸೋಲಿನ ಲೆಕ್ಕ:
೨೦೦೩ರಲ್ಲಿ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಭಾರತ ಸೋಲು ಕಂಡಿತ್ತು (ಆಗ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಇತ್ತು). ೨೦ ವರ್ಷದ ಬಳಿಕ ಅದೇ ಆಸ್ಟ್ರೇಲಿಯಾ ವಿರುದ್ಧ ಭಾರತ ವಿಶ್ವಕಪ್ ಫೈನಲ್ನಲ್ಲಿ ಸೋತಿದೆ.
೨೦೧೪ರಲ್ಲಿ ಟಿ-ಟ್ವೆಂಟಿ ವಿಶ್ವಕಪ್ ಫೈನಲ್ನಲ್ಲಿ ಭಾರತಕ್ಕೆ ಸೋಲು, ೨೦೦೦ ಮತ್ತು ೨೦೧೭ರಲ್ಲಿ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಸೋಲು, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ೨೦೨೧, ೨೦೨೩ರಲ್ಲಿ ಭಾರತ ಸೋತಿದೆ (ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ)
ಲಕ್ನೋದಲ್ಲಿ ನಡೆದಿದ್ದರೆ:
ಗುಜರಾತ್ ಬದಲು ಲಕ್ನೋದಲ್ಲಿ ವಿಶ್ವಕಪ್ ಫೈನಲ್ ಪಂದ್ಯ ನಡೆದಿದ್ದರೆ ಆಗ ಭಾರತ ವಿಶ್ವಕಪ್ ಗೆಲ್ತಿತ್ತು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಸಿಂಗ್ ಯಾದವ್ ಹೇಳಿದ್ದಾರೆ.
ಒಂದು ವೇಳೆ ಗುಜರಾತ್ ಬದಲು ಲಕ್ನೋದಲ್ಲಿ ಫೈನಲ್ ಪಂದ್ಯ ನಡೆದಿದ್ದರೆ ಆಗ ಟೀಂ ಇಂಡಿಯಾಕ್ಕೆ ಹಲವರ ಆರ್ಶಿವಾದ ಸಿಗುತ್ತಿತ್ತು, ವಿಷ್ಣು ದೇವರು ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಆರ್ಶೀವಾದವೂ ಸಿಗುತ್ತಿತ್ತು
ಎಂದು ಅಖಿಲೇಶ್ ಸಿಂಗ್ ಯಾದವ್ ಹೇಳಿದ್ದಾರೆ.
ಮೋದಿ ಅಪಶಕುನವೇ..?
ಪ್ರಧಾನಿ ನರೇಂದ್ರ ಮೋದಿಯವರ ಕಾಲ್ಗುಣ ಸರಿ ಇಲ್ಲ ಎಂದು ಹೇಳುವವರು ಎರಡನೇ ಚಂದ್ರಯಾನ ಉಡಾವಣೆ ವಿಫಲವಾಗಿದ್ದು ಮತ್ತು ಅಮೆರಿಕ ಅಧ್ಯಕ್ಷರಾಗಿದ್ದ ಡೋನಾಲ್ಡ್ ಟ್ರಂಪ್ ಸೋತ ಉದಾಹರಣೆ ಕೊಡುತ್ತಾರೆ.
ಜುಲೈ ೨೨, ೨೦೧೯ರಲ್ಲಿ ಎರಡನೇ ಚಂದ್ರಯಾನ ಉಡಾವಣೆ ವೇಳೆ ಇಸ್ರೋ ಮುಖ್ಯ ಕಚೇರಿಯಲ್ಲಿ ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ವೀಕ್ಷಕರಾಗಿದ್ದರು. ಆದರೆ ಆ ಉಡಾವಣೆ ವಿಫಲವಾಯಿತು.
ಆದರೆ ಈ ವರ್ಷದ ಜುಲೈ ೧೪ರಂದು ನಡೆದ ಮೂರನೇ ಚಂದ್ರಯಾನ ಯಶಸ್ವಿ ಆಯಿತು. ಈ ವೇಳೆ ಪ್ರಧಾನಿ ಮೋದಿಯವರು ವಿದೇಶ ಪ್ರವಾಸದಲ್ಲಿದ್ದರು.
ಅಮೆರಿಕದಲ್ಲಿ ಮತ್ತೊಮ್ಮೆ ಡೋನಾಲ್ಡ್ ಟ್ರಂಪ್ ಅಧ್ಯಕ್ಷರಾಗುತ್ತಾರೆ ಎಂದು ಅನಿವಾಸಿ ಭಾರತೀಯರ ಸಮಾವೇಶದಲ್ಲಿ ಪ್ರಧಾನಿ ಮೋದಿಯವರು ಭಾಷಣ ಮಾಡಿದ್ದರು, ಆದರೆ ಟ್ರಂಪ್ ಸೋತರು.
ADVERTISEMENT