ಬಗರ್ಹುಕುಂ ಭೂಮಿಯನ್ನು ಸಕ್ರಮಗೊಳಿಸುವ ಸಂಬಂಧ ಅರ್ಹ ಅರ್ಜಿಗಳನ್ನು ಪುರಸ್ಕರಿಸಲು ಕಂದಾಯ ಇಲಾಖೆ ಮಾರ್ಗಸೂಚಿ ಹೊರಡಿಸಿದೆ.
ಮಾರ್ಗಸೂಚಿ:
೧. ಅರ್ಜಿದಾರರ ಎಲ್ಲೆಲ್ಲಿ ಅರ್ಜಿ ಹಾಕಿದ್ದಾನೆ ಎಂಬುದನ್ನು ಪರಿಶೀಲಿಸಲು ಆಧಾರ್ ಸಂಖ್ಯೆ ಜೋಡಣೆ ಮಾಡುವುದರ ಜೊತೆಗೆ ಆಧಾರ್ ದೃಢೀಕರಣ ಮಾಡಲಾಗುವುದು. ಪ್ರತಿ ತಾಲೂಕಿನಲ್ಲೂ ತಹಶೀಲ್ದಾರರು ಆಧಾರ್ ಜೋಡಣೆ ಬಗ್ಗೆ ಪರಿಶೀಲನೆ ನಡೆಸಬೇಕು.
೨. ಸಾಗುವಳಿ ಆರಂಭಿಸಿದ ದಿನಾಂಕಕ್ಕೆ ಅರ್ಜಿದಾರನ ವಯಸ್ಸು ೧೮ ವರ್ಷ ಆಗಿತ್ತಾ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು.
೩. ಬಗರ್ಹುಕುಂ ಸಕ್ರಮಕ್ಕಾಗಿ ಯಾವ ಜಮೀನಿಗೆ ಅರ್ಜಿ ಹಾಕಿದ್ದಾರೋ ಆ ಜಮೀನು ೨೦೧೦, ೨೦೧೧, ೨೦೧೨ ಈ ಮೂರು ವರ್ಷಗಳಲ್ಲಿ ಹೇಗಿತ್ತು ಎಂಬ ಬಗ್ಗೆ ಉಪಗ್ರಹ ಚಿತ್ರವನ್ನು ತೆಗೆಸಿ ತಹಶೀಲ್ದಾರ್ಗೆ ನೀಡಲಾಗುವುದು.
೪. ಈ ಉಪಗ್ರಹ ಚಿತ್ರವನ್ನು ಆಧರಿಸಿ ಈ ಜಮೀನಿನಲ್ಲಿ ಸಾಗುವಳಿ ಆಗಿತ್ತೇ ಇಲ್ಲವೇ ಎಂಬುದನ್ನು ದೃಢಪಡಿಸಿಕೊಳ್ಳಲಾಗುತ್ತದೆ.
೫. ತಹಶೀಲ್ದಾರ್ ಅವರು ಮಹಜರ್ ಮಾಡಿ ಸಾಗುವಳಿ ಮಾಡುತ್ತಿದ್ದಾರೋ ಇಲ್ಲವೋ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು
ರಾಜ್ಯದಲ್ಲಿ ೫೦ ಲಕ್ಷ ಎಕರೆ ಸರ್ಕಾರಿ ಭೂಮಿಯನ್ನು ಸಕ್ರಮಗೊಳಿಸುವಂತೆ ೯ ಲಕ್ಷದ ೨೯,೫೧೨ ಅರ್ಜಿಗಳು ಬಂದಿವೆ.
೧೫ ವರ್ಷಗಳಿಂದ ಸರ್ಕಾರಿ ಭೂಮಿಯಲ್ಲಿ ನಿರಂತರವಾಗಿ ಸಾಗುವಳಿ ಮಾಡಿಕೊಂಡು ಬಂದಿದ್ದರೆ ಆ ಭೂಮಿಯನ್ನು ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗುತ್ತದೆ.
ಕಂದಾಯ ಸಚಿವ ಕೃಷ್ಣಬೈರೇಗೌಡ ಅವರ ಪ್ರಕಾರ ಬಗರ್ಹುಕುಂಗೆ ಬಂದಿರುವ ಬಹುತೇಕ ಅರ್ಜಿಗಳೇ ಅನರ್ಹ. ಒಬ್ಬ ವ್ಯಕ್ತಿ ೨೫ಕ್ಕಿಂತ ಅರ್ಜಿ ಸಲ್ಲಿಸಿದ್ದಾನೆ, ನೂರಾರು ಕೃಷಿ ಭೂಮಿ ಹೊಂದಿರುವವರು, ಕೃಷಿಯನ್ನೇ ಮಾಡದವರೂ ಬಗರ್ಹುಕುಂ ಸಕ್ರಮಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.
ಬಗರ್ಹುಕುಂ ಅಕ್ರಮ ಸಕ್ರಮ ಯೋಜನೆಯಡಿಯಲ್ಲಿ ಗರಿಷ್ಠ ೪ ಎಕರೆ ೩೮ ಸೆಂಟ್ಸ್ ಭೂಮಿಯನ್ನು ಸಕ್ರಮಗೊಳಿಸಿಕೊಳ್ಳಲು ಅವಕಾಶವಿದೆ.
ಆದರೆ ಈ ಸರ್ಕಾರಿ ಭೂಮಿಯಲ್ಲಿ ೨೦೦೪ರ ಮೊದಲಿನಿಂದಲೂ ಬೇಸಾಯ ಮಾಡುತ್ತಿರಬೇಕು. ೨೦೦೪ರ ವೇಳೆಗೆ ಅರ್ಜಿದಾರರು ಕನಿಷ್ಠ ೧೮ ವರ್ಷ ತುಂಬಿರಬೇಕು.
ಅಕ್ರಮ ಸಕ್ರಮ ಯೋಜನೆಯ ಮುಖ್ಯ ಉದ್ದೇಶವೇ ಭೂಮಿ ಇಲ್ಲದವರಿಗೆ ಭೂಮಿ ಮಂಜೂರು ಮಾಡುವುದು.