ದೇಶವನ್ನು ಕಾಡುತ್ತಿರುವ ನಿರುದ್ಯೋಗ, ಅಗ್ನಿವೀರ್ ಯೋಜನೆ ಜಾರಿ ಬಳಿಕ ಸೇನಾ ನೇಮಕಾತಿಯಲ್ಲಿ ಕೈ ತಪ್ಪಿದ ಅವಕಾಶ, ದಿನೇ ದಿನೇ ಬೆಲೆ ಏರಿಕೆ, ಪ್ರಧಾನಿ ಮೋದಿ ಸರ್ಕಾರದ ರೈತ ವಿರೋಧಿ ಕಾನೂನುಗಳು , ಮಣಿಪುರದಲ್ಲಿ ನಡೆದ ಹಿಂಸಾಚಾರ, ಪ್ರಧಾನಿ ಮೋದಿ ಸರ್ಕಾರದ ಆಡಳಿತ ವೈಖರಿ ವಿರುದ್ಧ ಅಸಮಾಧಾನ..!
ಸಂಸತ್ತಿಗೆ ನುಗ್ಗಿ ಭದ್ರತಾ ಲೋಪ ಎಸಗಿದ ಆರು ಮಂದಿಯ ಕೃತ್ಯದ ಹಿಂದಿನ ಸಾಮಾನ್ಯ ಕಾರಣಗಳು. ಸ್ವಾತಂತ್ರ ಭಾರತದಲ್ಲಿ ಸಂಸತ್ತಿನ ಒಳಗೆ ನುಗ್ಗಿ ಭಾರತೀಯರೇ ಭದ್ರತಾ ಲೋಪ ಎಸಗಿದ ಮೊದಲ ಪ್ರಕರಣ ಇದು,
ತಮ್ಮ ಆಕ್ರೋಶದ ಪ್ರಧಾನಿ ಮೋದಿ ಸರ್ಕಾರಕ್ಕೆ ಎಚ್ಚರಿಸಲು ಮತ್ತು ದೇಶದ ಜನತೆಗೆ ಸಂದೇಶ ರವಾನಿಸಲು ಈ ಆರೂ ಮಂದಿಯೂ ಆಯ್ಕೆ ಮಾಡಿಕೊಂಡಿದ್ದು ಬ್ರಿಟಿಷರ ನಿದ್ದೆಗೆಡಿಸಿದ್ದ ಕ್ರಾಂತಿಕಾರಿ ಹೋರಾಟಗಾರ ಭಗತ್ ಸಿಂಗ್ ಅವರು ಆಯ್ಕೆ ಮಾಡಿಕೊಂಡ ಹಾದಿಯನ್ನೇ.
94 ವರ್ಷಗಳ ಹಿಂದೆ:
ಬ್ರಿಟಿಷರ ಗುಲಾಮಗಿರಿ ಆಡಳಿತವನ್ನು ಬೆಚ್ಚಿಬೀಳಿಸಿದ್ದ ಕ್ರಾಂತಿಕಾರಿ ನಾಯಕ ಭಗತ್ ಸಿಂಗ್.
ಏಪ್ರಿಲ್ 8, 1929. ಅಂದರೆ 94 ವರ್ಷಗಳ ಹಿಂದೆ. ಆಗ ಮಧ್ಯಾಹ್ನ 12.30 ಗಂಟೆಯ ಸಮಯ. (ನಿನ್ನೆ ದಾಳಿಯಾಗಿದ್ದು ಮಧ್ಯಾಹ್ನ 1 ಗಂಟೆಗೆ)
ಆಗ ಕೇಂದ್ರ ಸಭೆ (ಈಗಿನ ಲೋಕಸಭೆಗೆ ಸಮ) ಕಲಾಪ ನಡೆಯುತ್ತಿತ್ತು. ಆಗ ಕೇಂದ್ರ ಸಭೆಯ ಕಲಾಪ ಅಧ್ಯಕ್ಷತೆ ವಹಿಸಿದ್ದವರು (ಅಂದರೆ ಈಗಿನ ಲೋಕಸಭಾ ಸ್ಪೀಕರ್ಗೆ ಸಮ) ವಿಠಲ್ಭಾಯ್ ಪಟೇಲ್. ವಾಣಿಜ್ಯ ವ್ಯಾಜ್ಯ ಮಸೂದೆ ಸಂಬಂಧ ಚರ್ಚೆ ನಡೆಯುತ್ತಿದ್ದಾಗ ಇದಕಿದ್ದಂತೆ ವೀಕ್ಷಕರ ಗ್ಯಾಲರಿಯಿಂದ ಸ್ಫೋಟದೊಂದಿಗೆ ಹೊಗೆ ಹಬ್ಬಲು ಶುರುವಾಯಿತು.
ವೀಕ್ಷಕರ ಗ್ಯಾಲರಿಯಲ್ಲಿದ್ದ ಇಬ್ಬರು ಯುವಕರು ಘೋಷಣೆಗಳನ್ನು ಕೂಗುತ್ತಿದ್ದರು – ಕ್ರಾಂತಿ ಚಿರಾಯುವಾಗಲಿ, ವಿಶ್ವದ ಕಾರ್ಮಿಕರೆಲ್ಲ ಒಂದಾಗಿ, ಸಾಮ್ರಾಜ್ಯಶಾಹಿ ಅಳಿಯಲಿ. ಆ ಇಬ್ಬರು ಕ್ರಾಂತಿಕಾರಿಗಳೇ ಭಾರತದ ಜನಮಾನಸವನ್ನು ಅಚ್ಚಳಿಸದೇ ಪ್ರಭಾವಿಸಿರುವ ಭಗತ್ ಸಿಂಗ್ ಮತ್ತು ಬಟುಕೇಶ್ವರ್ ದತ್. ಅವರಿಬ್ಬರು ಸದನದೊಳಗೆ ಕರಪತ್ರಗಳನ್ನೂ ಎಸೆದರು.
ಕೇಂದ್ರ ಶಾಸನ ಸಭೆ ಬಾಂಬ್ ಪ್ರಕರಣ:
ಕೇಂದ್ರ ಶಾಸನ ಸಭೆ ಬಾಂಬ್ ಪ್ರಕರಣವೆಂದೇ ಕರೆಸಿಕೊಂಡ ಈ ಹೋರಾಟದ ವೇಳೆ ಆ ಇಬ್ಬರು ಕ್ರಾಂತಿಕಾರಿಗಳು ಓಡಿಹೋಗಲಿಲ್ಲ. ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಸಂಘದ ಸದಸ್ಯರಾಗಿದ್ದ ಈ ಇಬ್ಬರೂ ಕ್ರಾಂತಿಕಾರಿಗಳ ಉದ್ದೇಶ ಇದ್ದಿದ್ದು ಯಾರನ್ನೋ ಕೊಲ್ಲುವುದು ಅಥವಾ ಗಾಯಗೊಳಿಸುವುದು ಆಗಿರಲಿಲ್ಲ, ಬದಲಿಗೆ ಕಿವುಡಗಾಗಿ ದುಷ್ಟ ಬ್ರಿಟಿಷ್ ಸರ್ಕಾರವನ್ನು ಎಚ್ಚರಿಸುವುದು.
ಈ ದಾಳಿಯ ರೂವಾರಿ ಆಗಿದ್ದ ಕ್ರಾಂತಿಕ್ರಾತಿ ಭಗತ್ ಸಿಂಗ್ ಅವರಿಗೆ ಫ್ರಾನ್ಸ್ ಹೋರಾಟಗಾರ ಆಗಸ್ಟೇ ವೈಲ್ಯಾಂಟ್ ಪ್ರೇರಣೆಯಾಗಿದ್ದ. ಆಗಸ್ಟೆ ವೈಲ್ಯಾಂಡ್ 1893ರಲ್ಲಿ ಫ್ರೆಂಚ್ ಶಾಸನ ಸಭೆಯಲ್ಲಿ ಬಾಂಬ್ ದಾಳಿ ನಡೆಸಿದ್ದ. ಬಳಿಕ ಆತನನ್ನು ಗಲ್ಲಿಗೇರಿಸಲಾಯಿತು.
ಕ್ರಾಂತಿಕಾರಿ ಭಗತ್ ಸಿಂಗ್ ಮತ್ತು ಬಟುಕೇಶ್ವರ್ ದತ್ ನಡೆಸಿದ್ದ ಆ ದಾಳಿಯಲ್ಲಿ ಯಾರೂ ಪ್ರಾಣ ಕಳೆದುಕೊಳ್ಳಲಿಲ್ಲ.
ದುಷ್ಟ ಬಿಟ್ರಿಷ್ ಸಾಮ್ರಾಜ್ಯಶಾಹಿ, ನಿರುಕುಂಶವಾದಿಗಳ ವಿರುದ್ಧದ ಹೋರಾಟಕ್ಕೆ ಭಾರತದ ಯುವಕರನ್ನು ಪ್ರೇರೆಪಿಸುವುದು ಮತ್ತು ಭಾರತಕ್ಕೆ ಮಾರಕವಾಗಿದ್ದ ಬ್ರಿಟಿಷರು ತರಲು ಹೊರಟ್ಟಿದ್ದ ಕಾನೂನುಗಳ ವಿರುದ್ಧ ಪ್ರತಿಭಟಿಸುವುದು ದಾಳಿಯ ಉದ್ದೇಶವಾಗಿತ್ತು.
ಈ ದಾಳಿಯ ವೇಳೆ ಶಾಸನ ಸಭೆಯ ಕಲಾಪದಲ್ಲಿ ಮೋತಿಲಾಲ್ ನೆಹರು (ಜವಹರಲಾಲ್ ನೆಹರು ಅವರ ತಂದೆ), ಸರ್ದಾರ್ ವಲ್ಲಭಭಾಯ್ ಪಟೇಲ್, ಮಹಮ್ಮದ್ ಅಲಿ ಜಿನ್ನಾ ಮತ್ತು ಮದನ್ ಮೋಹನ್ ಮಾಳವೀಯ, ಸೈಮನ್ ಕಮಿಷನ್ನ ಮುಖ್ಯಸ್ಥ ಜಾನ್ ಸೈಮನ್ ಇದ್ದರು.
ಈ ದಾಳಿಯ ವೇಳೆ ಭಗತ್ ಸಿಂಗ್ ಮತ್ತು ಬಟುಕೇಶ್ವರ್ ದತ್ರನ್ನು ಬಂಧಿಸಲಾಯಿತು. ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ದತ್ ಅವರ ಪರವಾಗಿ ಆಗ ಹಿರಿಯ ವಕೀಲರಾಗಿದ್ದ ಅಸಾಫ್ ಅಲಿ ವಾದಿಸಿದ್ದರೆ, ಭಗತ್ ಸಿಂಗ್ ತಮ್ಮ ವಾದವನ್ನು ತಾವೇ ಮಂಡಿಸಿದರು. ಅದೇ ವರ್ಷ ಜೂನ್ನಲ್ಲಿ ಇಬ್ಬರನ್ನೂ ದೋಷಿಗಳೆಂದು ತೀರ್ಪು ನೀಡಲಾಯಿತು.
ಬ್ರಿಟಿಷ್ ಸರ್ಕಾರದಲ್ಲಿ ಎಎಸ್ಪಿ ಆಗಿದ್ದ ಜಾನ್ ಸೌಂಡರ್ಸ್ ಹತ್ಯೆ ಪ್ರಕರಣದಲ್ಲಿ 1931ರ ಮಾರ್ಚ್ 23ರಂದು ಮೂವರು ಕ್ರಾಂತಿಕಾರಿಗಳಾದ ಭಗತ್ ಸಿಂಗ್, ರಾಜಗುರು, ಸುಖ್ದೇವ್ ಅವರನ್ನು ಗಲ್ಲಿಗೇರಿಸಲಾಯಿತು.
ಇತ್ತ ಜೈಲಿನಿಂದ ಬಿಡುಗಡೆಯಾದ ಬಳಿಕ ದತ್ ಅವರು ಸ್ವಾತಂತ್ರ ಸಂಗ್ರಾಮದಲ್ಲಿ ತಮ್ಮನ್ನು ಮತ್ತಷ್ಟು ತೊಡಗಿಸಿಕೊಂಡರು. ದೀರ್ಘಕಾಲದ ಅನಾರೋಗ್ಯದ ಬಳಿಕ 1965ರಲ್ಲಿ ದತ್ ಅವರು ನಿಧನರಾದರು.