ಬೆಂಗಳೂರು: ಅತ್ಯಾಚಾರ ಅಥವಾ ಪೋಕೋ (POCSO) ಕಾಯ್ದೆ ಅಡಿ ಪ್ರಕರಣ ದಾಖಲಿಸಿದ ತಕ್ಷಣ ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆಯನ್ನು ಕಡ್ಡಾಯವಾಗಿ ನಡೆಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.
17 ವರ್ಷದ ಬಾಲಕಿಯ 24 ವಾರಗಳ ಗರ್ಭಪಾತ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಪೀಠವು ಈ ನಿರ್ದೇಶನ ನೀಡಿದೆ. ಅತ್ಯಾಚಾರ ಸಂತ್ರಸ್ತೆಗೆ ಮುಂಚಿತವಾಗಿ ಗರ್ಭಪಾತ ಹಕ್ಕುಗಳ ಕುರಿತು ಮೊದಲೇ ತಿಳಿಸಿದ್ದರೆ ಆಕೆಯ ತಂದೆ ಹೈಕೋರ್ಟ್ ಮೆಟ್ಟಿಲೇರುತ್ತಿರಲಿಲ್ಲ ಎಂದು ಹೈಕೋರ್ಟ್ ಚಾಟಿ ಬೀಸಿದೆ.
ಇನ್ನು ಅತ್ಯಾಚಾರದಿಂದ ಗರ್ಭ ಧರಿಸಿದರೆ ಅವರಿಗೆ ಇರುವ ಹಕ್ಕುಗಳ ಕುರಿತು ಸಂತ್ರಸ್ತರಿಗೆ ತಿಳಿಸಬೇಕು. ಇದರಿಂದ ಸಂತ್ರಸ್ತೆ ಮತ್ತು ಆಕೆಯ ಕುಟುಂಬದವರು ತಡವಾದ ಮೇಲೆ ಗರ್ಭಪಾತಕ್ಕೆ ಅನುಮತಿ ಕೋರಿ ನ್ಯಾಯಾಲಯದ ಮೊರೆ ಹೋಗುವುದು ತಪ್ಪುತ್ತದೆ. ತಡವಾಗಿ ಗರ್ಭಪಾತಕ್ಕೆ ಅನುಮತಿ ಕೋರುವಾಗ ಸಂತ್ರಸ್ತೆ ಮತ್ತು ಆಕೆಯ ಕುಟುಂಬಸ್ಥರು ಮಾನಸಿಕ ಯಾತನೆ ಅನುಭವಿಸಬೇಕಾಗುತ್ತದೆ. ಸಂತ್ರಸ್ತೆ ಮತ್ತುಆಕೆಯ ಕುಟುಂಬದವರಿಗೆ ಎಫ್ಐಆರ್ (FIR) ದಾಖಲಿಸುವ ಸಂದರ್ಭದಲ್ಲೇ ವೈದ್ಯಕೀಯ ಗರ್ಭಪಾತದ ಸಾಧ್ಯತೆಗಳ ಕುರಿತು ತಿಳಿಸಿದರೆ ಸಂತ್ರಸ್ತೆ ಮತ್ತು ಆಕೆಯ ಕುಟುಂಬಸ್ಥರಿಗೆ ಆಗುವ ಮಾನಸಿಕ ಯಾತನೆಯನ್ನು ತಪ್ಪಿಸಬಹುದು ಎಂದು ನ್ಯಾಯಾಲಯ ಹೇಳಿದೆ.
ಸಂತ್ರಸ್ತೆ ಗರ್ಭಿಣಿ ಎಂದು ಕಂಡುಬಂದಲ್ಲಿ ಮಕ್ಕಳ ಕಲ್ಯಾಣ ಸಮಿತಿ (CWC) ಅಥವಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ತನಿಖಾ ಅಧಿಕಾರಿ ತಿಳಿಸಬೇಕು. ಅವರು ಸಂತ್ರಸ್ತರಿಗೆ ಗರ್ಭಾವಸ್ಥೆಯ ಮುಂದುವರಿಕೆ, ಪರಿಣಾಮಗಳು, ಗರ್ಭಾವಸ್ಥೆಯ ಮುಕ್ತಾಯ, ಪ್ರಕ್ರಿಯೆ, ಕಾರ್ಯವಿಧಾನ ಮತ್ತು ಪರಿಣಾಮಗಳು ಇತ್ಯಾದಿಗಳಂತಹ ಕಾನೂನುಗಳ ಬಗ್ಗೆ ತಿಳಿಸಿಕೊಡಬೇಕು ಎಂದು ನಿರ್ದೇಶಿಸಿದೆ.