ಬೆಳಗ್ಗೆ ಅವಸರದಲ್ಲಿ ಆಫೀಸ್ ಗೆ ಲಂಚ್ ಬಾಕ್ಸ್ ಗೆ ಏನನ್ನಾದರೂ ರೆಡಿ ಮಾಡಬೇಕು ಅಂದ್ರೆ ಮನೆ ಹೆಂಗಸರಿಗೆ ತಲೆನೋವಿನ ವಿಷಯವೇ ಸರಿ. ಅದರಲ್ಲೂ ದಿನವೂ ಹೊಸ ಅಡುಗೆ ಏನಾದರೂ ಮಾಡಬೇಕು ಎಂದು ಬಯಸುವವರಿಗೆ ಯೋಚನೆ ಇನ್ನಷ್ಟು ಜಾಸ್ತಿ. ನಿತ್ಯ ದೋಸೆ, ಇಡ್ಲಿ, ಉಪ್ಪಿಟ್ಟು ಚಿತ್ರಾನ್ನ ಅಂತ ಮಕ್ಕಳು ಮುಖ ಚಿಕ್ಕದು ಮಾಡೋದು ಉಂಟು. ಮಕ್ಕಳ ಬಾಕ್ಸ್ ಗೆ ಈ ಕ್ಯಾಪ್ಸಿಕಂ ಕರಿ ಜೊತೆ ಜೀರಾ ರೈಸ್ ಮಾಡಿ. ನಿಮ್ಮ ಮಕ್ಕಳು ಮಧ್ಯಾಹ್ನ ಬಾಕ್ಸ್ ಖಾಲಿ ಮಾಡೋದು ಗ್ಯಾರೆಂಟಿ ಅಷ್ಟು ರುಚಿಯಾಗಿದರುತ್ತೆ ಈ ರೆಸಿಪಿ .
– ಕ್ಯಾಪ್ಸಿಕಂ ಕರಿ ಮಾಡಲು ಬೇಕಾಗುವ ಸಾಮಾಗ್ರಿ
- ಎಣ್ಣೆ – 2 ದೊಡ್ಡ ಚಮಚ
- ಸಾಸಿವೆ – 1 ಚಮಚ
- ಜೀರಿಗೆ – 1 ಚಮಚ
- ಈರುಳ್ಳಿ – 1 (ಸಣ್ಣಗೆ ಹೆಚ್ಚಿದ್ದು)
- ಟೊಮೆಟೊ – 2 (ಸಣ್ಣಗೆ ಹೆಚ್ಚಿದ್ದು)
- ಶುಂಠಿ ಬೆಳ್ಳುಳ್ಳಿ ಪೇಸ್ಟ್ – ಅರ್ಧ ದೊಡ್ಡ ಚಮಚ
- ಈರುಳ್ಳಿ – 1 (ದಪ್ಪಗೆ ಹೆಚ್ಚಿದ್ದು)
- ದೊಡ್ಡ ಮೆಣಸಿನಕಾಯಿ – 1 (ದಪ್ಪಗೆ ಹೆಚ್ಚಿದ್ದು)
- ಉಪ್ಪು – ರುಚಿಗೆ ತಕ್ಕಷ್ಟು
- ಜೀರಿಗೆ ಪುಡಿ – ಅರ್ಧ ಚಮಚ
- ಕೊತ್ತಂಬರಿ ಬೀಜದ ಪುಡಿ – ಅರ್ಧ ಚಮಚ
- ಅಚ್ಛ ಖಾರದ ಪುಡಿ – 1 ಚಮಚ
- ಅರಸಿನ ಪುಡಿ – ಕಾಲು ಚಮಚ
- ಹುರಿದ ಕಡ್ಲೆ ಹಿಟ್ಟು – 2 ದೊಡ್ಡ ಚಮಚ
- ತುಪ್ಪ – 1 ದೊಡ್ಡ ಚಮಚ
- ಗರಂ ಮಸಾಲಾ – ಕಾಲು ಚಮಚ
- ಅಚ್ಛ ಖಾರದ ಪುಡಿ – ಅರ್ಧ ಚಮಚ
- ಕೊತ್ತಂಬರಿ ಸೊಪ್ಪು – ಸ್ವಲ್ಪ
- ನಿಂಬೆ ರಸ – ಅರ್ಧ ಚಮಚ
ಜೀರಾ ರೈಸ್ ಮಾಡಲು ಬೇಕಾಗುವ ಸಾಮಾಗ್ರಿಗಳು:
ಎಣ್ಣೆ – 2 ದೊಡ್ಡ ಚಮಚ, ಚಕ್ಕೆ – 2 ರಿಂದ 3, ಲವಂಗ – 2 ರಿಂದ 3, ಪಲಾವ್ ಎಲೆ – 2, ಜೀರಿಗೆ – 2 ದೊಡ್ಡ ಚಮಚ, ನೆನೆಸಿದ ಬಾಸುಮತಿ ಅಕ್ಕಿ – 1 ಕಪ್
ಕರಿ ಮಾಡುವ ವಿಧಾನ:
ಒಂದು ಬಾಣಲೆಗೆ 2 ದೊಡ್ಡ ಚಮಚ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದ ಬಳಿಕ 1 ಚಮಚ ಸಾಸಿವೆ ಹಾಕಿ. ಸಾಸಿವೆ ಸಿಡಿದ ನಂತರ 1 ಚಮಚ ಜೀರಿಗೆ, 1 ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಹುರಿಯಿರಿ. ನಂತರ ಇದಕ್ಕೆ 2 ಸಣ್ಣಗೆ ಹೆಚ್ಚಿದ ಟೊಮೆಟೊ ಹಾಕಿ ಹುರಿಯಿರಿ. ಈಗ ಇದಕ್ಕೆ ಅರ್ಧ ದೊಡ್ಡ ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಕಲಸಿ.
ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ ಮೆತ್ತಗಾಗುವವರೆಗೂ ಬೇಯಿಸಿ.ಇದಕ್ಕೆ 1 ದಪ್ಪಗೆ ಹೆಚ್ಚಿದ ಈರುಳ್ಳಿ, 1 ದಪ್ಪಗೆ ಹೆಚ್ಚಿದ ದೊಡ್ಡ ಮೆಣಸಿನಕಾಯಿ ಹಾಕಿ ಚೆನ್ನಾಗಿ ಕಲಸಿ.ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲಸಿ, ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 5 ನಿಮಿಷ ಬೇಯಿಸಿ. ಈಗ ಇದಕ್ಕೆ ಅರ್ಧ ಚಮಚ ಜೀರಿಗೆ ಪುಡಿ, ಅರ್ಧ ಚಮಚ ಕೊತ್ತಂಬರಿ ಬೀಜದ ಪುಡಿ, 1 ಚಮಚ ಅಚ್ಛ ಖಾರದ ಪುಡಿ, ಕಾಲು ಚಮಚ ಅರಸಿನ ಪುಡಿ ಹಾಕಿ ಚೆನ್ನಾಗಿ ಕಲಸಿ.
ನಂತರ ಇದಕ್ಕೆ 2 ದೊಡ್ಡ ಚಮಚ ಹುರಿದ ಕಡಲೆ ಹಿಟ್ಟು ಹಾಕಿ ಚೆನ್ನಾಗಿ ಕಲಸಿ. ಇದಕ್ಕೆ 3 ಕಪ್ ನೀರು ಹಾಕಿ ಚೆನ್ನಾಗಿ ಕಲಸಿ, ಬೇಕೆನಿಸಿದರೆ ಸ್ವಲ್ಪ ಉಪ್ಪು ಹಾಕಿ ಪುನಃ ಕಲಸಿ.
ಮುಚ್ಚಳ ಮುಚ್ಚಿ 5 ನಿಮಿಷ ಮಧ್ಯಮ ಉರಿಯಲ್ಲಿ ಬೇಯಿಸಿ.ಒಗ್ಗರಣೆಗೆ ಒಂದು ಚಿಕ್ಕ ಬಾಣಲೆಗೆ 1 ದೊಡ್ಡ ಚಮಚ ತುಪ್ಪ ಹಾಕಿ, ತುಪ್ಪ ಬಿಸಿಯಾದ ನಂತರ ಕಾಲು ಚಮಚ ಗರಂ ಮಸಾಲಾ, ಅರ್ಧ ಚಮಚ ಅಚ್ಛ ಖಾರದ ಪುಡಿ ಹಾಕಿ ಕಲಸಿ.
ಇದನ್ನು ಕರಿಗೆ ಹಾಕಿ ಮೇಲೆ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಗೂ ಅರ್ಧ ಚಮಚ ನಿಂಬೆ ರಸ ಹಾಕಿ ಕಲಸಿದರೆ ದೊಡ್ಡ ಮೆಣಸಿನಕಾಯಿ ಕರಿ ಸಿದ್ಧ.
ಜೀರಾ ರೈಸ್ ಮಾಡುವ ವಿಧಾನ:
ಒಂದು ಕುಕ್ಕರಿಗೆ 2 ಚಮಚ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದ ಬಳಿಕ ಇದಕ್ಕೆ 2 ರಿಂದ 3 ಚಕ್ಕೆ, 2 ರಿಂದ 3 ಲವಂಗ, 2 ಪಲಾವ್ ಎಲೆ ಹಾಕಿ ಹುರಿಯಿರಿ.ಈಗ ಇದಕ್ಕೆ 2 ದೊಡ್ಡ ಚಮಚ ಜೀರಿಗೆ ಹಾಕಿ ಚೆನ್ನಾಗಿ ಹುರಿಯಿರಿ.ನಂತರ ಇದಕ್ಕೆ 1 ಕಪ್ ನೆನೆಸಿದ ಬಾಸುಮತಿ ಅಕ್ಕಿ ಹಾಕಿ 1 ನಿಮಿಷ ಹುರಿಯಿರಿ.
ಇದಕ್ಕೆ ಒಂದು ಮುಕ್ಕಾಲು ಕಪ್ ನೀರು ಹಾಕಿ ಕಲಸಿ.
ದೊಡ್ಡ ಉರಿಯಲ್ಲಿ 2 ಕೂಗು ಬರುವವರೆಗು ಕೂಗಿಸಿ. ರುಚಿಯಾದ ಜೀರಾ ರೈಸ್ ತಿನ್ನಲು ಸಿದ್ಧ.