ಆರೋಗ್ಯಕರ ಜೀವನಶೈಲಿ ಮತ್ತು ಆಹಾರ ಪದ್ಧತಿಯನ್ನು ಪಾಲಿಸುವ ಮೂಲಕ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಬಹುದು. ಹೀಗಿದ್ದರೂ ನಮಗೆ ಗೊತ್ತಿಲ್ಲದೆ ಮಾಡುವ ಕೆಲವೊಂದು ಸಣ್ಣಪುಟ್ಟ ತಪ್ಪುಗಳಿಂದ ಆರೋಗ್ಯ ಹದಗೆಡಬಹುದು. ಅಂತಹ ತಪ್ಪುಗಳಲ್ಲಿ ರಾತ್ರಿ ಊಟವಾದ ತಕ್ಷಣ ಮಲಗುವುದು ಕೂಡ ಒಂದಾಗಿದೆ. ಹೌದು ಹೆಚ್ಚಿನವರು ಊಟವಾದ ತಕ್ಷಣ ಮಲಗುತ್ತಾರೆ ಇಲ್ಲವೇ ಕುಳಿತುಕೊಂಡು ಟಿ.ವಿ, ಮೊಬೈಲ್ ನೋಡುತ್ತಾ ಸಮಯ ಕಳೆಯುತ್ತಾರೆ. ಖಂಡಿತವಾಗಿಯೂ ಈ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದಲ್ಲ. ಊಟವಾದ ತಕ್ಷಣ ಮಲಗಿಕೊಳ್ಳುವುದರಿಂದ ತಿಂದಂತಹ ಆಹಾರವು ಸರಿಯಾಗಿ ಜೀರ್ಣವಾಗುವುದಿಲ್ಲ. ಇದರಿಂದ ಸ್ಥೂಲಕಾಯತೆ, ಮಧುಮೇಹದಂತಹ ಕಾಯಿಲೆಗಳು ಬಾಧಿಸಬಹುದು. ಅದಕ್ಕಾಗಿಯೇ ಆರೋಗ್ಯದ ದೃಷ್ಟಿಯಿಂದ ಊಟದ ಬಳಿಕ ಸ್ವಲ್ಪ ನಡೆದಾಡಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಊಟದ ಬಳಿಕ ಎಷ್ಟು ಸಮಯಗಳ ಕಾಲ ನಡೆಯಬೇಕು? ನಡಿಗೆಯ ಆರೋಗ್ಯ ಪ್ರಯೋಜನಗಳೇನು ಎಂಬುದನ್ನು ನೋಡೋಣ.
ಊಟದ ನಂತರ ಎಷ್ಟು ಹೊತ್ತು ವಾಕಿಂಗ್ ಮಾಡಬೇಕು?
ಅನೇಕ ಜನರು ಊಟವಾದ ಬಳಿಕ ಆರಾಮವಾಗಿ ಮಲಗಿಕೊಂಡು ವಿಶ್ರಾಂತಿ ಪಡೆದುಕೊಳ್ಳುತ್ತಾರೆ, ಇದು ಆರೋಗ್ಯಕ್ಕೆ ಖಂಡಿತವಾಗಿಯೂ ಒಳ್ಳೆಯದಲ್ಲಿ ಇದರಿಂಗಾಗಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ಸಮಸ್ಯೆಗಳು ಬಾರದಂತೆ ನೋಡಿಕೊಳ್ಳಲು ಪ್ರತಿರಾತ್ರಿ ಊಟವಾದ ಬಳಿಕ ಕನಿಷ್ಟ 10 ರಿಂದ 20 ನಿಮಿಷಗಳ ಕಾಲ ವಾಕಿಂಗ್ ಮಾಡಬೇಕು. ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸಲು ಸಹಕಾರಿ ಮಾತ್ರವಲ್ಲದೆ ಆಯಾಸವನ್ನು ಕಡಿಮೆ ಮಾಡುತ್ತದೆ.
ಊಟದ ಬಳಿಕ ವಾಕಿಂಗ್ ಮಾಡುವುದರಿಂದ ದೊರೆಯುವ ಆರೋಗ್ಯ ಪ್ರಯೋಜನಗಳು:
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ:
ಹೆಚ್ಚಿನವರು ತಿಂದ ತಕ್ಷಣ ಮಲಗುತ್ತಾರೆ. ಇದರಿಂದ ಆಹಾರ ಸರಿಯಾಗಿ ಜೀರ್ಣವಾಗದೆ ಮಲಬದ್ಧತೆ, ಗ್ಯಾಸ್, ಅಸಿಡಿಟಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಮತ್ತು ಜೀರ್ಣಕ್ರಿಯೆಯು ಹದಗೆಡುತ್ತದೆ. ಆದ್ದರಿಂದ ಊಟ ಮಾಡಿದ ನಂತರ ವಾಕಿಂಗ್ ಹೋಗುವ ಮೂಲಕ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಟ್ಟುಕೊಳ್ಳಬಹುದು.
ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ:
ಊಟ ಮಾಡಿದ ನಂತರ ನಡೆಯುವುದು ಹೃದಯದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ದೇಹದಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಅಲ್ಲದೆ ಇದು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ.
ಉತ್ತಮ ನಿದ್ರೆಗೆ ಸಹಕಾರಿ:
ಊಟದ ನಂತರ ವಾಕಿಂಗ್ ಹೋಗುವುದರಿಂದ ಉತ್ತಮ ಗುಣಮಟ್ಟದ ನಿದ್ರೆಯನ್ನು ಪಡೆಯಲು ಸಹಕಾರಿಯಾಗಿದೆ. ನಡೆಯುವುದರಿಂದ ದೇಹವು ಎಂಡಾರ್ಫಿನ್ ಎಂಬ ಹಾರ್ಮೋನನ್ನು ಬಿಡುಗಡೆ ಮಾಡುತ್ತದೆ, ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಉತ್ತಮ ನಿದ್ರೆಯನ್ನು ಪಡೆಯಲು ಸಹಾಯ ಮಾಡುತ್ತದೆ.
ತೂಕ ನಿಯಂತ್ರಣದಲ್ಲಿರುತ್ತದೆ:
ತೂಕ ನಷ್ಟಕ್ಕೆ ವಾಕಿಂಗ್ ಉತ್ತಮ ವ್ಯಾಯಾಮವಾಗಿದೆ. ಅದರಲ್ಲೂ ರಾತ್ರಿಯ ಊಟದ ನಂತರ ಸಣ್ಣ ನಡಿಗೆಯನ್ನು ಅಭ್ಯಾಸ ಮಾಡುವುದರಿಂದ ತೂಕವನ್ನು ನಿಯಂತ್ರಣದಲ್ಲಿಡಬಹುದು. ಇದು ಚಯಾಪಚಯಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ನಿಮ್ಮ ಕ್ಯಾಲೋರಿಗಳನ್ನು ಸುಡುವಲ್ಲಿ ಸಹಾಯ ಮಾಡುತ್ತದೆ.
ಮಾನಸಿಕ ಆರೋಗ್ಯವನ್ನು ವೃದ್ಧಿಸುತ್ತದೆ:
ನಡಿಗೆಯಿಂದ ಮಾನಸಿಕ ಆರೋಗ್ಯವೂ ಉತ್ತಮವಾಗಿರುತ್ತದೆ. ವಾಕಿಂಗ್ ಕಾರ್ಟಿಸೋಲ್ ಮತ್ತು ಆಡ್ರಿನಾಲಿನ್ ಸೇರಿದಂತೆ ಒತ್ತಡದ ಹಾರ್ಮೋನುಗಳನ್ನು ಕಡಿಮೆ ಮಾಡುತ್ತದೆ. ಮತ್ತು ಎಂಡಾರ್ಫಿನ್ ಹಾರ್ಮೋನುಗಳನ್ನು ಹೆಚ್ಚಾಗಿ ಬಿಡುಗಡೆ ಮಾಡುತ್ತದೆ. ಈ ಹಾರ್ಮೋನು ನೈಸರ್ಗಿಕ ನೋವು ನಿವಾರಕವಾಗಿದ್ದು, ಇದು ಒತ್ತಡವನ್ನು ಕಡಿಮೆ ಮಾಡಲು ಮತ್ತು ಮನಸ್ಥಿತಿಯನ್ನು ಸುಧಾರಿಸಲು ಸಹಕಾರಿಯಾಗಿದೆ.