ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹರವರ ಅವಹೇಳನಕಾರಿ ಪೋಸ್ಟರ್ ಹಿಡಿದು ಪ್ರತಿಭಟನೆ ನಡೆಸಿದ್ದನ್ನು ಖಂಡಿಸಿರುವ ಬಿಜೆಪಿ, ಪ್ರಕರಣ ದಾಖಲಿಸಿದೆ.
ಸಂಸತ್ ನಲ್ಲಿ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಗಿತ್ತು. ಪ್ರತಿಭಟನಾಕಾರರು ಪ್ರತಾಪ್ ಸಿಂಹ ಅವರನ್ನು ಅಲ್ಪಸಂಖ್ಯಾತ ಮುಸಲ್ಮಾನರಂತೆ ಬಿಂಬಿಸುವ ರೀತಿಯಲ್ಲಿ ಪೋಸ್ಟರ್ ಅಳವಡಿಸುವ ಮೂಲಕ ಪ್ರತಿಭಟನೆ ನಡೆಸಿದ್ದರು.ಇದನ್ನು ತೀವ್ರ ಖಂಡಿಸಿರುವ ಬಿಜೆಪಿ ಯುವ ಮೋರ್ಚಾ, ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಹಿಂದುಳಿದ ಜಾಗೃತ ವೇದಿಕೆ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಅಂತ ಒತ್ತಾಯಿಸಿದೆ.
ಸಂಸದ ಪ್ರತಾಪ್ ಸಿಂಹ ಅವರ ಭಾವಚಿತ್ರಕ್ಕೆ ಅವಹೇಳನ ಮಾಡುವುದಲ್ಲದೇ ದೇಶದ್ರೋಹಿ ಎಂದು ಫ್ಲೆಕ್ಸ್ನಲ್ಲಿ ಬರೆದಿದ್ದಾರೆ. ಅದೇ ರೀತಿ ಕೋಮುವಾದಿ ದೇಶದ್ರೋಹಿ ಎಂದು ಘೋಷಣೆಗಳನ್ನು ಕೂಗಿ ಪ್ರತಿಭಟಿಸಿರುವುದು ಕಾನೂನಾತ್ಮಕ ಅಪರಾಧ ಎಂದು ಖಂಡಿಸಿರುವ ಬಿಜೆಪಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದೆ.