ಬೆಳಗಾವಿ ಜಿಲ್ಲೆಯ ವಂಟಮೂರಿಯಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸುವ ಕೃತ್ಯದ ವೇಳೆ ಸುಮ್ಮನಿದ್ದು ಗುಂಪಲ್ಲಿ ನಿಂತು ನೋಡುತ್ತಿದ್ದ ಗ್ರಾಮಸ್ಥರ ವರ್ತನೆ ಬಗ್ಗೆ ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಮಹಿಳೆಯ ರಕ್ಷಣೆ ಧಾವಿಸದೇ ಮೂಕಪ್ರೇಕ್ಷಕರಾಗಿ ನೋಡುತ್ತಿದ್ದ ಗ್ರಾಮಸ್ಥರ ಮೇಲೆ ಸಮಗ್ರ ಹೊಣೆಗಾರಿಕೆಯಡಿಯಲ್ಲಿ ಕ್ರಮಕೈಗೊಳ್ಳಬೇಕು ಎಂದು ಭಾರತದಲ್ಲಿ ಬ್ರಿಟಿಷ್ ಆಡಳಿತದಲ್ಲಿದ್ದ ಅಧಿಕಾರಿ ಕೈಗೊಂಡಿದ್ದ ಕ್ರಮ ಉಲ್ಲೇಖಿಸಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಪಿ ವರಳೆ ಮತ್ತು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.
ಸಮಗ್ರ ಹೊಣೆಗಾರಿಕೆಗಾಗಿ ಕ್ರಮಕೈಗೊಳ್ಳಬೇಕಾದ ಅಗತ್ಯವಿದೆ. ಕೃತ್ಯದ ವೇಳೆ ಮಹಿಳೆಯನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸಿಸಲಾಗಿದೆ ಮತ್ತು ಆ ಕೃತ್ಯದ ವೇಳೆ ಕೆಲವು ಗ್ರಾಮಸ್ಥರು ಮೂಕಪ್ರೇಕ್ಷಕರಂತೆ ನೋಡುತ್ತಿದ್ದರು.
ಆ ಗ್ರಾಮದಲ್ಲಿ 8 ಸಾವಿರದಷ್ಟು ಜನಸಂಖ್ಯೆ ಇದೆ. ಕೃತ್ಯದ ವೇಳೆ ಅಲ್ಲಿ 13 ಮಂದಿ ಹಲ್ಲೆಕೋರರು ಮಾತ್ರವಲ್ಲದೇ 50 ರಿಂದ 60 ಮಂದಿ ಗ್ರಾಮಸ್ಥರೂ ಸೇರಿದ್ದರು. ಆದರೆ ಅವರಲ್ಲಿದ್ದ ಜಹಂಗೀರ್ ಎಂಬ ವ್ಯಕ್ತಿಯಷ್ಟೇ ಸಂತ್ರಸ್ಥ ಮಹಿಳೆಯ ನೆರವಿಗೆ ಧಾವಿಸುವ ಧೈರ್ಯವನ್ನು ತೋರಿಸಿದ ಮತ್ತು ಹಲ್ಲೆಕೋರರಿಂದ ಮಹಿಳೆಯನ್ನು ರಕ್ಷಿಸುವ ಪ್ರಯತ್ನ ಮಾಡಿದ.
ಆ ವೇಳೆ ಆತನ ಮೇಲೂ ಹಲ್ಲೆ ನಡೆಸಲಾಯಿತು. ಅಲ್ಲಿ ನೆರೆದಿದ್ದ 50ರಿಂದ 60 ಮಂದಿಯಲ್ಲಿ ಕೇವಲ ಒಬ್ಬ ವ್ಯಕ್ಯಿಯಷ್ಟೇ ಧೈರ್ಯವನ್ನು ತೋರಿ ಆ ಮಹಿಳೆಯ ರಕ್ಷಣೆಗೆ ಧಾವಿಸಿದ ಮತ್ತು ಅಲ್ಲಿದ್ದ ಉಳಿದವರು ಮೂಕಪ್ರೇಕ್ಷಕರಾಗಿ ನಿಂತು ನೋಡುತ್ತಿದ್ದರು.
ಆ ಸ್ಥಳದಲ್ಲಿ ಮೂಕಪ್ರೇಕ್ಷಕರಾಗಿ ನಿಂತು ಏನೂ ಮಾಡದೇ ಕೃತ್ಯ ನೋಡಿ ಮೌನವಾಗಿರುವುದು ಕೂಡಾ ಕೃತ್ಯಕ್ಕೆ ಪ್ರಚೋದನೆ ನೀಡದಂತೆ ಎನ್ನುವುದು ನಮ್ಮ ಅಭಿಪ್ರಾಯ.
ಸಮಗ್ರ ಹೊಣೆಗಾರಿಕೆಯನ್ನು ಹೇರುವ ಸಲುವಾಗಿ ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕಿದೆ. ಇಲ್ಲದೇ ಹೋದರೆ ಇಂತಹ ಕೃತ್ಯಗಳನ್ನು ತಡೆಯಲು ಸಾಧ್ಯವಿಲ್ಲ.
ಇಂತಹ ಕೃತ್ಯಗಳಾದಾಗ ಜನ ಸುಮ್ಮನಿರಲು ಸಾಧ್ಯವಿಲ್ಲ. ಕೃತ್ಯ ನಡೆದಾಗ ಕೇವಲ ಗ್ರಾಮ ಪಂಚಾಯತ್ ಅಧ್ಯಕ್ಷರಷ್ಟೇ ಆ ಸ್ಥಳಕ್ಕೆ ದೌಡಾಯಿಸಿದರು. ಆದರೆ ಮಹಿಳೆಯನ್ನು ಬೆತ್ತಲೆಗೊಳಿಸುವಾಗ 50-60 ಮಂದಿ ಸುಮ್ಮನೆ ನಿಂತು ನೋಡುತ್ತಿದ್ದರು.
ಬ್ರಿಟಿಷರ ಅವಧಿಯಲ್ಲಿ ಭಾರತದಲ್ಲಿ ಇಂತಹ ಕೃತ್ಯಗಳಾದಾಗ ಲಾರ್ಡ್ ವಿಲಿಯಂ ಬೆಂಟಿಂಕ್ ತೆಗೆದುಕೊಂಡ ಕ್ರಮದಂತೆ ಈಗಲೂ ಕ್ರಮಗಳಾಗಬೇಕು. ಕೃತ್ಯ ಎಸಗಿದವರ ಕೃತ್ಯಕ್ಕಿಂತಲೂ ಆ ಕೃತ್ಯವನ್ನು ಸುಮ್ಮನೆ ನೋಡುತ್ತ ನಿಂತವರ ವರ್ತನೆ ಅತ್ಯಂತ ಅಪಾಯಕಾರಿ. ಇವರು ಸಮ್ಮನೆ ನಿಂತು ನೋಡಿದ್ದರಿಂದಲೇ ಹಲ್ಲೆಕೋರ ಹೀರೋ ಅಗ್ತಾನೆ.
ನಾಗರಿಕ ಸಮಾಜ ಎಲ್ಲಿದೆ ಮತ್ತು ಇದು ಅದರ ಹೇಡಿತನ, ಸಮಾಜದ ಒಟ್ಟಾರೆ ಹೇಡಿತನ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಅಥವಾ ಅವರ ಜೊತೆಗೆ ನಿಲ್ಲುವುದು ತಪ್ಪಲ್ಲ ಎನ್ನುವುದನ್ನು ನಾವು ಮಕ್ಕಳಿಗೆ ಹೇಳಿಕೊಡಬೇಕಿದೆ.ಹೆಣ್ಮಕ್ಕಳನ್ನು ಉಳಿಸಲು ಬೇಟಿ ಬಚಾವೋ ಬೇಟಿ ಪಡಾವೋ ಅಲ್ಲ, ಬೇಟ ಪಡಾವೋ ಆಗಬೇಕು. ಇದನ್ನು ಗಂಡು ಮಗುವಿಗೆ ಹೇಳದೇ ಹೋದರೆ ಏನೂ ಸಾಧಿಸಲು ಸಾಧ್ಯವಿಲ್ಲ. ಮಹಿಳೆಯನ್ನು ಗೌರವಿಸಬೇಕು ಮತ್ತು ಆಕೆಯನ್ನು ರಕ್ಷಿಸಬೇಕು ಎನ್ನುವುದನ್ನು ನಾವು ಗಂಡು ಮಕ್ಕಳಿಗೆ ಹೇಳಿಕೊಡಬೇಕಿದೆ. ಸಹೋದರಿಯನ್ನು ರಕ್ಷಣೆ ಮಾಡಿದಂತೆ ಬೇರೆ ಮಹಿಳೆಯನ್ನು ರಕ್ಷಣೆ ಮಾಡಲ್ವಾ..? ರೋಮನ್ ಸಾಮ್ರಾಜ್ಯದ ಪತನದ ಬಗ್ಗೆ ಓದಿ. ಒಂದೊಳ್ಳೆ ಸಮಾಜ ಕಟ್ಟದೇ ದೇಶ ಕಟ್ಟಲು ಸಾಧ್ಯವಿಲ್ಲ. ಮುಂದಿನ ತಲೆಮಾರಲ್ಲಿ ಮೌಲ್ಯಗಳನ್ನು ತುಂಬದೇ ಹೋದರೆ ಏನೂ ಆಗಲ್ಲ. ಜಡ್ಜ್ಗಳು ಬರಬಹುದು, ನ್ಯಾಯವಾದಿಗಳು ಬರಬಹುದು…ಆದರೆ ಇಂಥದ್ದು ನಡೆಯುತ್ತಲೇ ಇರುತ್ತದೆ..