ಬೆಂಗಳೂರು: ನಗರದಲ್ಲಿ ದಿನೇ ದಿನೇ ತಾಪಮಾನ ಕುಸಿಯುತ್ತಿದ್ದು, ಇದರಿಂದಾಗಿ ಚಳಿ ವಾತಾವರಣ ಹಚ್ಚಾಗಿದೆ. ಬೆಂಗಳೂರಿನಲ್ಲಿ ತಾಪಮಾನವು 15ರಿಂದ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಡಿ.20ರಿಂದ ಜ.15ರ ವರೆಗೆ ಉಷ್ಣಾಂಶ ಮತ್ತಷ್ಟು ಕುಸಿಯಲಿದೆ. ಆಗ ಚಳಿ ಪ್ರಭಾವ ಹೆಚ್ಚಿರಲಿದ್ದು ಜನರು ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ತಜ್ಞರು ತಿಳಿಸಿದ್ದಾರೆ. ನಗರದಲ್ಲಿ ತಾಪಮಾನವು 15ರಿಂದ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ತೇವಾಂಶದ ಪ್ರಮಾಣವು ಹೆಚ್ಚಾಗಿದೆ. ಹಗಲು ವೇಳೆಯಲ್ಲಿ ಮೋಡ ಕವಿದ ವಾತಾವರಣ, ಮಧ್ಯದಲ್ಲಿ ಸೂರ್ಯನ ದರ್ಶನದ ನಡುವೆ ಚಳಿ ಅನುಭವ ಉಂಟಾಗುತ್ತಿದೆ.
ನಗರದಲ್ಲಿನ ವಾತಾವರಣವು ಜನರಿಗೆ ಚಳಿ ಎನಿಸುತ್ತಿದೆ. ಬೆಳಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಶೀತಗಾಳಿ ಬೀಸುತ್ತಿದ್ದು ಜನರು ಬಿಸಿ ಪಾನೀಯ ಹಾಗೂ ಬೆಚ್ಚಗಿರುವ ಉಡುಪಿನ ಮೊರೆಹೊಗುತ್ತಿದ್ದಾರೆ. ಹಗಲು ವೇಳೆಯಲ್ಲೂ ಚಳಿ ಕಾಣಿಸುತ್ತಿದೆ. ಮಕ್ಕಳು, ವೃದ್ಧರು, ಯುವತಿಯರು ಟೋಪಿ– ಸ್ವೇಟರ್ ಧರಿಸಿ ಸಂಚರಿಸುತ್ತಿರುವುದು ಸಾಮಾನ್ಯವಾಗಿದೆ.
ಕಳೆದ ವರ್ಷ ನಗರದ ಕೆಲವು ಭಾಗದಲ್ಲಿ ತಾಪಮಾನ ತೀವ್ರವಾಗಿ ಕುಸಿದಿತ್ತು. ಆದರೆ, ಈ ವರ್ಷ ಕನಿಷ್ಠ ತಾಪಮಾನ 14 ಡಿಗ್ರಿಗೆ ಸೆಲ್ಸಿಯಸ್ ವರೆಗೆ ಕುಸಿಯಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಡಿ.31ಕ್ಕೆ ಹಿಂಗಾರು ಅವಧಿ ಮುಕ್ತಾಯವಾಗಲಿದೆ. ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿದೆ. ತಮಿಳುನಾಡಿನ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು ಬೆಂಗಳೂರಿನಲ್ಲೂ ಮೂರು ದಿನಗಳ ಕಾಲ ಮೋಡ ಕವಿದ ವಾತಾವರಣ ಇರಲಿದೆ.
ತಾಪಮಾನ ಕುಸಿದ ಬೆನ್ನಲ್ಲೇ ಶೀತ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಳವಾಗಿದೆ. ನೆಗಡಿ ಕೆಮ್ಮು ಜ್ವರ ಉಸಿರಾಟ ಆಸ್ತಮ ರೋಗಿಗಳು ಆಸ್ಪತ್ರೆಗಳತ್ತ ಬರುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.