ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಚಳಿ ಹೆಚ್ಚಾಗಿದ್ದು, ಉರಿ ಬಿಸಿಲಿಂದ ಕೂಡಿರುತ್ತಿದ್ದ ಉತ್ತರ ಕರ್ನಾಟಕ ಕೂಡ ಚಳಿಗೆ ಗಡಗಡ ನಡುಗುತ್ತಿದೆ. ಆ ಮಟ್ಟಿಗೆ ಚಳಿ ಹೆಚ್ಚಿದೆ. ಇದೀಗ ಹೊಸ ವರ್ಷಕ್ಕೆ ರಾಜ್ಯಾದ್ಯಂತ ಭಾರೀ ವರ್ಷಧಾರೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಐಎಂಡಿ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಡಿಸೆಂಬರ್ 31 ರಿಂದ ಎರಡು ದಿನಗಳ ಕಾಲ ಮಳೆಯಾಗಲಿದ್ದು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಭಾರೀ ಮಳೆಯಾಗಲಿದೆ ಎಂದು ತಿಳಿಸಿದೆ. ಅಲ್ಲದೆ, ಬೆಳಗಾವಿ, ಹಾವೇರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೋಲಾರ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರಿನಲ್ಲಿ ಮಳೆಯಾಗಲಿದೆ.
ಉತ್ತರ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಕಡೆ ಚಳಿ ಮುಂದುವರೆದಿದೆ, ಒಣಹವೆ ಇದೆ. ವಿಜಯಪುರದಲ್ಲಿ 10.5 ಡಿಗ್ರಿ ಸೆಲ್ಸಿಯಸ್ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿರಲಿದೆ.