ಅಂಗಡಿಗಳು ಮತ್ತು ವಾಣಿಜ್ಯ ಮಳಿಗೆಗಳಲ್ಲಿ ಕನ್ನಡ ಕಡ್ಡಾಯಗೊಳಿಸಿ ಫೆಬ್ರವರಿ 28ರ ಗಡುವು ನೀಡಲು ಸುಗ್ರೀವಾಜ್ಞೆ ಹೊರಡಿಸುವುದಕ್ಕೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಅಂಗಡಿ ಮುಂಗಟ್ಟುಗಳು ವಾಣಿಜ್ಯ ಮಳಿಗೆಗಳಲ್ಲಿ ನಾಮಫಲಕಗಳನ್ನು ಅಳವಡಿಸುವ ಬಗ್ಗೆ ಉನ್ನತ ಮಟ್ಟದ ಸಭೆ ನಡೆಯಿತು.
ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022ರ ಸೆಕ್ಷನ್ 17 (6) ರ ಪ್ರಕಾರ ಸರ್ಕಾರದ ಅಥವಾ ಸ್ಥಳೀಯ ಪ್ರಾಧಿಕಾರದ ಅನುಮೋದನೆಯೊಂದಿಗೆ ನಡೆಸುತ್ತಿರುವ ವಾಣಿಜ್ಯ ಕೈಗಾರಿಕೆ, ವ್ಯಾಪಾರ ಸಂಸ್ಥೆ, ನ್ಯಾಸಗಳು, ಸಮಾಲೋಚನಾ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನೋರಂಜನಾ ಕೇಂದ್ರಗಳು ಮತ್ತು ಹೋಟೆಲ್ ಮುಂತಾದವುಗಳ ಹೆಸರನ್ನು ಪ್ರದರ್ಶಿಸುವ ಫಲಕಗಳ ಮೇಲಿನ ಅರ್ಧ ಭಾಗವು ಕನ್ನಡದಲ್ಲಿ ಇರತಕ್ಕದ್ದು ಎಂದು ತಿಳಿಸಲಾಗಿದೆ
ಇದಕ್ಕೂ ಮೊದಲು 2018 ರಲ್ಲಿ ಹೊರಡಿಸಿದ ಸುತ್ತೋಲೆಯಲ್ಲಿ ನಾಮಫಲಕದಲ್ಲಿ ಶೇ. 60 ಕನ್ನಡ ಭಾಷೆ ಹಾಗೂ ಶೇ. 40 ರಷ್ಟು ಇತರ ಭಾಷೆಯಲ್ಲಿರಬಹುದು ಎಂದು ತಿಳಿಸಲಾಗಿದೆ. ಇದರಂತೆಯೇ ಸುಗ್ರೀವಾಜ್ಞೆ ಹೊರಡಿಸಿ, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022ರ ಸೆಕ್ಷನ್ 17 (6)ಕ್ಕೆ ತಿದ್ದುಪಡಿ ತಂದು 2024ರ ಫೆಬ್ರುವರಿ 28 ರೊಳಗೆ ವಾಣಿಜ್ಯ ಮಳಿಗೆಗಳು ಅನುಷ್ಠಾನಗೊಳಿಸಲು ಗಡುವು ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕಾಯ್ದೆಯ ನಿಯಮ 17(8) ರಲ್ಲಿ ರಾಜ್ಯದಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾದ ಜಾಹೀರಾತು ಮತ್ತು ಸೂಚನೆಗಳನ್ನು ಪ್ರದರ್ಶಿಸುವ ಎಲ್ಲ ಫಲಕಗಳಲಿ ವಿಷಯಗಳ ನಿಗದಿತ ಶೇಕಡಾವಾರು ಪ್ರಮಾಣವು ಕನ್ನಡ ಭಾಷೆಯಲ್ಲಿರತಕ್ಕದ್ದು
ಜಾಹೀರಾತುಗಳ ವರ್ಗೀಕರಣ ಮತ್ತು ಕನ್ನಡದಲ್ಲಿ ಪ್ರದರ್ಶಿಸಬೇಕಾದ ಜಾಹೀರಾತು ವಿಷಯಗಳ ಶೇಕಡಾವಾರು ಪ್ರಮಾಣವು ರಾಜ್ಯ ಸರ್ಕಾರದಿಂದ ನಿಯಮಿಸಲಾದಂತೆ ಇರತಕ್ಕದ್ದು ಎಂದು ತಿಳಿಸಲಾಗಿದೆ ಇದನ್ನು ಸಹ ಅನುಷ್ಠಾನಗೊಳಿಸಲಾಗುವುದು. ಈ ಕಾಯ್ದೆಯ ಅಧಿಸೂಚನೆ ಹೊರಡಿಸಲು ಹಾಗೂ ನಿಯಮಗಳನ್ನು ರೂಪಿಸಲು ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.