ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹೊಸ ರೂಪಾಂತರಿ ಜೆಎನ್. 1 (JN 1) ಪ್ರಕರಣ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಶೇ.50ಕ್ಕೂ ಹೆಚ್ಚು ಒಮಿಕ್ರಾನ್ ರೂಪಾಂತರಿ JN.1 ಕಾಣಿಸಿಕೊಳ್ಳುತ್ತಿದೆ. ಈ ಹಿನ್ನೆಲೆ ಜನವರಿ 2ರಿಂದ ರಾಜ್ಯದಲ್ಲಿ ಮತ್ತೆ ಕೋವಿಡ್ ವ್ಯಾಕ್ಸಿನ್ ಅಭಿಯಾನ ಶುರು ಮಾಡಲು ಸರ್ಕಾರ ಮುಂದಾಗಿದೆ.
ರಾಜ್ಯಾದ್ಯಂತ ಉಚಿತ ಕೋರ್ಬಿವ್ಯಾಕ್ಸ್ (Corbevax) ಲಸಿಕೆ ನೀಡಲು ಸರ್ಕಾರ ನಿರ್ಧರಿಸಿದೆ. ಈಗಾಗಲೇ ರಾಜ್ಯದಲ್ಲಿ ಮೊದಲ ಮತ್ತು ಎರಡನೇ ಡೋಸ್ 100% ವ್ಯಾಕ್ಸಿನೇಶನ್ ಮಾಡಲಾಗಿದೆ. ಆದರೆ ಪ್ರಿಕಾಶನರಿ ಮುನ್ನೆಚ್ಚರಿಕಾ ವ್ಯಾಕ್ಸಿನ್ ಮಾತ್ರ ಶೇ.27% ಜನರು ಮಾತ್ರ ಪಡೆದಿದ್ದಾರೆ. ಇನ್ನು 1.5 ಕೋಟಿಗೂ ಅಧಿಕ ಜನರು ಮುನ್ನೆಚ್ಚರಿಕಾ ವ್ಯಾಕ್ಸಿನ್ ಪಡೆಯಬೇಕಿದೆ.
ಅಲ್ಲದೆ, 1.5 ಕೋಟಿಗೂ ಹೆಚ್ಚು ಜನರು ಮೂರನೇ ಡೋಸ್ ವ್ಯಾಕ್ಸಿನ್ ತಗೆದುಕೊಂಡಿಲ್ಲ. ಹೀಗಾಗಿ ಈಗ ಮತ್ತೆ ಮುನ್ನೆಚ್ಚರಿಕಾ ಲಸಿಕೆ ನೀಡಲು ಆರೋಗ್ಯ ಇಲಾಖೆ ಮುಂದಾಗಿದೆ. ಪ್ರಾಥಮಿಕ ಹಂತದಲ್ಲಿ 30 ಸಾವಿರ ಕೋರ್ಬಿವಾಕ್ಸ್ ಲಸಿಕೆ ಖರೀದಿಗೆ ಸರ್ಕಾರ ನಿರ್ಧರಿಸಿದೆ. ಸದ್ಯ 15,800 ಲಸಿಕೆ ಈಗಾಗಲೇ ಖರೀದಿ ಮಾಡಲಾಗಿದೆ. ಇಂದಿನಿಂದಲೇ ಲಸಿಕೆಗಳನ್ನ ರಾಜ್ಯದಲ್ಲಿ ಎಲ್ಲ ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆಗಳಿಗೆ ವ್ಯಾಕ್ಸಿನ್ ನೀಡಲು ಪ್ಲಾನ್ ಮಾಡಿದೆ.
ರಾಜ್ಯದಲ್ಲಿ ಕಳೆದ ಒಂದು ವಾರದಲ್ಲಿ 197 ಸ್ಯಾಂಪಲ್ಸ್ ಜೀನೋಮ್ ಸೀಕ್ವೆನ್ಸಿಂಗ್ ಮಾಡಲು ಕಳಿಸಲಾಗಿದೆ. ಇದರಲ್ಲಿ ಸದ್ಯ ವರದಿ ಬಂದಿರುವ 60 ಸ್ಯಾಂಪಲ್ಸ್ ಗಳಲ್ಲಿ ಶೇ50 ರಷ್ಟು ಅಂದ್ರೆ 34 ಸ್ಯಾಂಪಲ್ಸ್ ನಲ್ಲಿ ಉಪತಳಿ JN.1 ಕಂಡು ಬಂದಿದೆ. ಹೀಗಾಗಿ ರಾಜ್ಯದಲ್ಲಿ ಸರಾಸರಿ ಶೇ.50 ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳಲ್ಲಿ JN.1 ಇರುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.