ಉದ್ಯಮಿ ಗೌತಮ್ ಅದಾನಿ ಕಂಪನಿ ಷೇರು ಅಕ್ರಮದ ವಿರುದ್ಧದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸುವುದಕ್ಕೆ ಸುಪ್ರೀಂಕೋರ್ಟ್ ನಿರಾಕರಿಸಿದೆ ಮತ್ತು ಅದಾನಿ ಕಂಪನಿಗಳ ವಿರುದ್ಧ ಕೇಳಿ ಬಂದಿರುವ ಆರೋಪಗಳ ವಿರುದ್ಧ ನಡೆಯುತ್ತಿರುವ ತನಿಖೆಯನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಭಾರತೀಯ ಷೇರು ವಿನಿಮಯ ಮಂಡಳಿಗೆ ಸೂಚಿಸಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರಿದ್ದ ಪೀಠ ಅದಾನಿ ಕಂಪನಿಗಳ ವಿರುದ್ಧ ಮಾಧ್ಯಮಗಳ ವರದಿ ಅಧರಿಸಿ ವಿಶೇಷ ತನಿಖಾ ತಂಡದಿಂದ ತನಿಖೆಗೆ ಆದೇಶ ಕೊಡಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ಅದಾನಿ ಕಂಪನಿಗಳ ವಿರುದ್ಧದ 24 ಆರೋಪಗಳ ಪೈಕಿ 22ರ ಬಗ್ಗೆ ಈಗಾಗಲೇ ಸೆಬಿ ತನಿಖೆ ಪೂರ್ಣಗೊಳಿಸಿದೆ. ಸೆಬಿ ನಡೆಸಿರುವ ತನಿಖೆಯ ಮೇಲೆ ಅನುಮಾನ ವ್ಯಕ್ತಪಡಿಸಲು ಸಾಧ್ಯವಿಲ್ಲ. ಉಳಿದೆರಡು ಆರೋಪಗಳ ಬಗ್ಗೆ ಸೆಬಿ ಮೂರು ತಿಂಗಳಲ್ಲಿ ತನಿಖೆಯನ್ನು ಪೂರ್ಣಗೊಳಿಸಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.
ಅದಾನಿ ಕಂಪನಿಗಳ ಷೇರು ಅಕ್ರಮದ ಬಗ್ಗೆ ಅಮೆರಿಕ ಮೂಲದ ಹಿಂಡೆನ್ಬರ್ಗ್ ವರದಿ ಮತ್ತು ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆ ಪ್ರಕಟಿಸಿರುವ ವರದಿಗಳನ್ನು ನಂಬಿ ಎಸ್ಐಟಿ ತನಿಖೆಗೆ ಆದೇಶಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ಮಾಧ್ಯಮಗಳ ವರದಿ ಮತ್ತು ಮೂರನೇ ವ್ಯಕ್ತಿಯ ತನಿಖಾ ವರದಿಯನ್ನು ಆಧರಿಸಿ ಸಾಂಸ್ಥಿಕ ತನಿಖಾ ಸಂಸ್ಥೆ (ಸೆಬಿ)ಯ ತನಿಖೆಯ ಬಗ್ಗೆ ಅನುಮಾನಿಸಲು ಸಾಧ್ಯವಿಲ್ಲ. ಸೆಬಿ ನಡೆಸುತ್ತಿರುವ ತನಿಖೆಯನ್ನು ಎಸ್ಐಟಿಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.