ಚಿಕ್ಕಮಗಳೂರು: ಇಡೀ ದೇಶದಲ್ಲೇ ಎಲ್ಲೂ ಕಾಣಸಿಗದ ರಾಮನ ಎಡತೊಡೆಯ ಮೇಲೆ ಸೀತಾ ಮಾತೆ ಕುಳಿತಿರುವ ವಿಶೇಷ ಪುರಾತನ ಕಾಲದ ಪಟ್ಟಾಭಿರಾಮನ ವಿಗ್ರಹ ಜಿಲ್ಲೆಯ ತರೀಕೆರರೆ ಪಟ್ಟಣದ ತುದಿಪೇಟೆಯಲ್ಲಿರುವ ದೇವಾಲಯದಲ್ಲಿದೆ. ಈ ಅಪರೂಪದ ಸೀತಾರಾಮರ ವಿಗ್ರಹ ಸಿಕ್ಕಿದ್ದು ಕೆರೆಯೊಳಗೆ. ಸುಮಾರು 70 ವರ್ಷಗಳ ಹಿಂದೆ ತರೀಕೆರೆ ತಾಲೂಕಿನ ಚಿಕ್ಕಾತೂರು ಮಾರ್ಗದಲ್ಲಿನ ದಳವಾಯಿ ಕೆರೆಯ ಏರಿ ದುರಸ್ಥಿ ಮಾಡಲು ಕೆರೆ ಏರಿ ಅಗೆಯುವಾಗ ಈ ಮೂರ್ತಿ ಸಿಕ್ಕಿದೆ
ಈ ಅಪರೂಪದ ಈ ಪಟ್ಟಾಭಿರಾಮನ ವಿಗ್ರಹ ನಮಗೇ ಬೇಕೆಂದು ಅಂದು ತರೀಕೆರೆ ತಾಲೂಕಿನ ಎರಡು ಗ್ರಾಮಗಳ ಮಧ್ಯೆ ಗಲಾಟೆ-ಮಾತಿನ ಚಕಮಕಿ ಕೂಡ ನಡೆದಿತ್ತು. ಆದರೆ, ಅಂದು ಈ ಪಟ್ಟಾಭಿರಾಮನ ಮೂರ್ತಿಯನ್ನ ಎತ್ತಿನಗಾಡಿಯಲ್ಲಿ ಹೊತ್ತು ತಂದಿದ್ದರು. 1962ರ ನವೆಂಬರ್ ತಿಂಗಳಿನಲ್ಲಿ ಸಿಕ್ಕ ಈ ಮೂರ್ತಿಯನ್ನ 1982ರ ಮಾರ್ಚ್ನಲ್ಲಿ ಪ್ರತಿಷ್ಠಾಪನೆ ಮಾಡಿದ್ದರು. ಅಂದಿನಿಂದಲೂ ಸೀತೆಯನ್ನ ತನ್ನ ತೊಡೆ ಮೇಲೆ ಕೂರಿಸಿಕೊಂಡಿರುವ ಈ ಪಟ್ಟಾಭಿರಾಮನಿಗೆ ಪೂಜೆ-ಪುನಸ್ಕಾರ-ಕ್ರೈಂಕರ್ಯಗಳು ನಿರಂತರವಾಗಿ ನಡೆದುಕೊಂಡು ಬಂದಿದೆ.
ದಳವಾಯಿ ಕೆರೆ ಅಂಚಿನಲ್ಲಿ ಶತಮಾನಗಳ ಹಿಂದೆ ದೇವಸ್ಥಾನ ಇತ್ತು ಅನ್ನೋದು ಸ್ಥಳಿಯರ ಮಾತಾಗಿದ್ದು, ಇಂದಿಗೂ ಕೆರೆ ಏರಿಯಲ್ಲಿರುವ ದೇವಸ್ಥಾನದ ಕಲ್ಲುಗಳು ಇದಕ್ಕೆ ಸಾಕ್ಷಿಯಾಗಿವೆ. ಆ ಕಲ್ಲುಗಳು ದೇವಸ್ಥಾನದ ಕಲ್ಲುಗಳೇ ಎಂಬುದನ್ನು ಒತ್ತಿ ಒತ್ತಿ ಹೇಳುತ್ತಿವೆ. ಶತಮಾನಗಳ ಹಿಂದೆ ಇದ್ದ ದೇವಸ್ಥಾನ ನಶಿಸಿ ಹೋಗಿದ್ದು ನಾಶವಾದ ದೇವಾಲಯದ ಒಳಗಿದ್ದ ರಾಮನ ವಿಗ್ರಹ ಮಣ್ಣಿನಡಿ ಹಾಗೂ ದೇವಸ್ಥಾನದ ಕಲ್ಲುಗಳ ಅವಶೇಷದೊಂದಿಗೆ ಮುಚ್ಚಿ ಹೋಗಿದ್ದಿರಬಹುದು ಎಂದು ತುದಿಪೇಟೆಯಲ್ಲಿರುವ ಸ್ಥಳೀಯರ ನಂಬಿಕೆಯಾಗಿದೆ.