ಅಯೋಧ್ಯೆ: ರಾಮಮಂದಿರದಲ್ಲಿ ಬಾಲಕ ರಾಮನ ಪ್ರಾಣಪ್ರತಿಷ್ಠಾಪನೆ ಬಳಿಕ ದರ್ಶನಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಿದ್ದಾರೆ. ಮಂಗಳವಾರ ಸುಮಾರು 5 ಲಕ್ಷ ಜನ ಭೇಟಿ ನೀಡಿದ್ದರು. ಇಂದು (ಜ.24) ಸಹ ಲಕ್ಷಾಂತರ ಭಕ್ತರು ಬಾಲಕ ರಾಮನ ದರ್ಶನಕ್ಕೆ ಮುಂಜಾನೆಯಿಂದಲೇ ಕಾದು ಕುಳಿತಿದ್ದಾರೆ.
ಬಾಲಕ ರಾಮನ ದರ್ಶನಕ್ಕೆ ಅವಕಾಶ ಕೊಟ್ಟ ಮೊದಲ ದಿನ, ಮುಂಜಾನೆ 3 ಗಂಟೆ ಸುಮಾರಿಗೆ ಲಕ್ಷಾಂತರ ಭಕ್ತರು ಸೇರಿದ್ದರು. ಈ ವೇಳೆ ರಾಮ ಮಂದಿರದ ಬಾಗಿಲು ತೆರೆಯುತ್ತಿದ್ದಂತೆ ದರ್ಶನಕ್ಕೆ ನೂಕು ನುಗ್ಗಲು ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ದೇವಾಲಯದ ಒಳಗೆ ಪ್ರವೇಶಿಸುವ ಭಕ್ತರನ್ನು ಮೆಟಲ್ ಡಿಟೆಕ್ಟರ್ ಮೂಲಕ ಪರಿಶೀಲಿಸಲಾಗುತ್ತಿದೆ
ಮಂದಿರಕ್ಕೆ ಜನರನ್ನು ಬಿಡುವಾಗ ಸರದಿಯಲ್ಲಿ ಬಿಡಲಾಗುತ್ತಿದ್ದು, ಶಿಸ್ತು, ಸಂಯಮ ಪಾಲನೆಗೆ ಮನವಿ ಮಾಡಲಾಗುತ್ತಿದೆ. ಯಾವುದೇ ಅಹಿತಕರ ಘಟನೆಗಳಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದಕ್ಕಾಗಿ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.