ಮಂಗಳೂರು: “ಯಕ್ಷರಂಗದ ರಾಜ” ಎಂದೇ ಖ್ಯಾತರಾದ, ಹೆಸರಾಂತ ಯಕ್ಷಗಾನ ಕಲಾವಿದ ಪೆರುವಾಯಿ ನಾರಾಯಣ ಶೆಟ್ಟಿ(82) ಅವರು ಮಂಗಳವಾರ ರಾತ್ರಿ ನಿಧನರಾಗಿದ್ದಾರೆ. ತೆಂಕುತಿಟ್ಟಿನ ಯಕ್ಷರಂಗದಲ್ಲಿ ತನ್ನದೇ ಛಾಪನ್ನು ನಿರ್ಮಿಸಿದ ಕನ್ನಡ -ತುಳು ಭಾಷೆಯ ಪ್ರಸಂಗಗಳಲ್ಲಿ ಏಕಪ್ರಕಾರ ಮಿಂಚಿದ ಪೆರುವಾಯಿ ನಾರಾಯಣ ಶೆಟ್ಟರು, ಕಂಚಿನ ಧ್ವನಿ, ಶ್ರುತಿಬದ್ಧ ಮಾತು ಹಾಗೂ ಅರ್ಥಪೂರ್ಣ ಸಂಭಾಷಣೆಗೆ ಹೆಸರಾಗಿದ್ದರು.
ಬಂಟ್ವಾಳ ತಾಲೂಕು ಪೆರುವಾಯಿ ಇವರ ಹುಟ್ಟೂರು. ಮದನಪ್ಪ ಶೆಟ್ಟಿ ಮತ್ತು ಅಬ್ಬಕ್ಕ ದಂಪತಿಗಳ ಸುಪುತ್ರರಾಗಿದ್ದ ಇವರು, 12ನೇ ವಯಸ್ಸಿನಲ್ಲೇ ಯಕ್ಷಗಾನದಲ್ಲಿ ತೊಡಗಿಸಿಕೊಂಡಿದ್ದರು. ಮಡಾವು, ಧರ್ಮಸ್ಥಳ, ಕರ್ನಾಟಕ, ಪೊಳಲಿ ರಾಜರಾಜೇಶ್ವರಿ ಮೇಳ, ಕದ್ರಿ, ಕುಂಬಳೆ, ಕುಂಟಾರು, ಕಟೀಲು ಹೀಗೆ ವಿವಿಧ ಯಕ್ಷಗಾನ ಮಂಡಳಿಗಳಲ್ಲಿ ತಿರುಗಾಟ ಮಾಡಿದ ಪೆರುವಾಯಿ ನಾರಾಯಣ ಶೆಟ್ಟಿ ಅವರದು ಬಹುದೊಡ್ಡ ಸಾಧನೆ. ಅವರು ಸುಮಾರು 52 ವರ್ಷ ಗಳ ಕಾಲ ನಿರಂತರ ತಿರುಗಾಟ ನಡೆಸಿದ್ದರು. ಬಳಿಕ ಅನಾರೋಗ್ಯದಿಂದಾಗಿ ಯಕ್ಷರಂಗದಿಂದ ನಿವೃತ್ತಪಡೆದಿದ್ದರು.