ನವದೆಹಲಿ ಈ ಬಾರಿಯ ಗಣರಾಜ್ಯೋತ್ಸವ ಸಂದರ್ಭದಲ್ಲಿ 132 ಮಂದಿಗೆ ಪದ್ಮ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಭಾರತ ರತ್ನ ಬಿಟ್ಟರೆ ಪದ್ಮ ಪ್ರಶಸ್ತಿಗಳು ಭಾರತದ ಅತ್ಯುಚ್ಚ ನಾಗರಿಕ ಗೌರವಕ್ಕೆ ಸಂಕೇತವಾಗಿವೆ. ಈ ಬಾರಿಯ 132 ಪದ್ಮಪುರಸ್ಕೃತರಲ್ಲಿ ಫ್ರಾನ್ಸ್ ದೇಶದ ನಾಲ್ವರು ಪ್ರಜೆಗಳು ಸೇರಿದ್ದಾರೆ. ಕಿರಣ್ ವ್ಯಾಸ್, ಚಾರ್ಲೊಟ್ಟೆ ಚಾಪಿನ್, ಪಿಯೆರೆ ಸಿಲ್ವಿಯನ್ ಫಿಲಿಯೋಜಾಟ್ ಮತ್ತು ಫ್ರೆಡ್ ನೆಗ್ರಿಟ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದೆ.
ಈ ಬಾರಿಯ ಗಣರಾಜ್ಯೋತ್ಸವದಂದು ಭಾರತ ಸರ್ಕಾರ 132 ಮಂದಿಗೆ ಪದ್ಮ ಪ್ರಶಸ್ತಿಗಳನ್ನು ನೀಡಿದೆ. ಐವರಿಗೆ ಪದ್ಮ ವಿಭೂಷಣ, 17 ಮಂದಿಗೆ ಪದ್ಮ ಭೂಷಣ ಮತ್ತು 110 ಮಂದಿಗೆ ಪದ್ಮ ಶ್ರೀ ಪ್ರಶಸ್ತಿಗಳನ್ನು ನೀಡಲಾಗಿದೆ.
132 ಪದ್ಮ ಪ್ರಶಸ್ತಿ ಪುರಸ್ಕೃತರ ಪೈಕಿ 30 ಮಂದಿ ಮಹಿಳೆಯರಿದ್ದಾರೆ. ಅನಿವಾಸಿ ಭಾರತೀಯರು, ಭಾರತ ಮೂಲದ ವಿದೇಶೀ ವ್ಯಕ್ತಿಗಳು 8 ಮಂದಿ ಇದ್ದಾರೆ. 9 ಮಂದಿಗೆ ಮರಣೋತ್ತರ ಪ್ರಶಸ್ತಿ ಕೊಡಲಾಗಿದೆ.
ವೈಜಯಂತಿ ಮಾಲ, ಮೆಗಾಸ್ಟಾರ್ ಚಿರಂಜೀವಿ, ಎಂ ವೆಂಕಯ್ಯ ನಾಯ್ಡು, ಬಿಂದೇಶ್ವರ್ ಪಾಠಕ್, ಪದ್ಮ ಸುಬ್ರಹ್ಮಣ್ಯಂ ಅವರಿಗೆ ಪದ್ಮ ವಿಭೂಷಣ ಸಿಕ್ಕಿದೆ. ಪದ್ಮ ಶ್ರೀ ಪುರಸ್ಕೃತರಲ್ಲಿ ನಾಲ್ವರು ಫ್ರಾನ್ಸ್ ನಾಗರಿಕರು ಸೇರಿದ್ದಾರೆ.
ಫ್ರಾನ್ಸ್ ನಾಗರಿಕರಾದ ಚಾರ್ಲೊಟ್ಟೆ ಚೋಪಿನ್, ಕಿರಣ್ ವ್ಯಾಸ್, ಪಿಯೆರೆ ಸಿಲ್ವಿಯನ್ ಫಿಲಿಯೋಜಾಟ್ ಮತ್ತು ಫ್ರೆಡ್ ನೆಗ್ರಿಟ್ ಅವರಿಗೆ ಪದ್ಮಶ್ರೀ ದೊರಕಿದೆ. ಒಂದು ವರ್ಷದಲ್ಲಿ ಒಂದೇ ದೇಶದ ನಾಲ್ವರಿಗೆ ಪದ್ಮ ಪ್ರಶಸ್ತಿಗಳು ಸಿಕ್ಕಿದ್ದು ಇದೇ ಮೊದಲು. ಈ ನಾಲ್ವರೂ ಕೂಡ ಭಾರತದೊಂದಿಗೆ ಸಾಂಸ್ಕೃತಿಕವಾಗಿ ಮತ್ತು ಶೈಕ್ಷಣಿಕವಾಗಿ ಜೋಡಿತವಾಗಿರುವುದು ವಿಶೇಷ.
ಚಾರ್ಲೊಟ್ಟೆ ಚಾಪಿನ್ ಅವರು ಶತಾಯುಷಿ ಮಹಿಳೆಯಾಗಿದ್ದು (100 ವರ್ಷ ವಯಸ್ಸಿನವರು) ಯೋಗ ಸಾಧಕರಾಗಿ ಗುರುತಿಸಿಕೊಂಡಿದ್ದಾರೆ. 50ನೇ ವಯಸ್ಸಿನಲ್ಲಿ ಯೋಗಾಭ್ಯಾಸ ಆರಂಭಿಸಿದ ಚಾರ್ಲೊಟ್ಟೆ ತಮ್ಮ ವಯಸ್ಸು ಹೆಚ್ಚಾದಂತೆಲ್ಲಾ ಯೋಗದ ಬಗೆಗಿನ ಆಸಕ್ತಿ ಹೆಚ್ಚಿಸಿಕೊಳ್ಳುತ್ತಾ ಬಂದಿದ್ದಾರೆ. ಕಳೆದ ವರ್ಷದ ಜುಲೈನಲ್ಲಿ ನರೇಂದ್ರ ಮೋದಿ ಅವರು ಫ್ರಾನ್ಸ್ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ಯಾರಿಸ್ನಲ್ಲಿ ಚಾರ್ಲೊಟ್ಟೆ ಅವರನ್ನು ಭೇಟಿ ಮಾಡಿದ್ದರು.
ಪಿಯೆರೆ ಸಿಲ್ವಿಯನ್ ಫಿಲಿಯೋಜಾಟ್ ಅವರು ಸಂಸ್ಕೃತ ವಿದ್ವಾಂಸರು, ಬರಹಗಾರರೂ ಆಗಿದ್ದಾರೆ. 87 ವರ್ಷದ ಅವರು ಫ್ರಾನ್ಸ್ ದೇಶದಲ್ಲಿ ಭಾರತೀಯ ಸಂಸ್ಕೃತಿ ಅಧ್ಯಯನ ಕ್ಷೇತ್ರವನ್ನು ಬೆಳೆಸಿದ್ದಾರೆ. ಭಾರತದೊಂದಿಗಿನ ಇವರ ಸಂಬಂಧ ಬಹಳ ಗಾಢವಾದುದು. ಆರು ತಿಂಗಳು ಫ್ರಾನ್ಸ್ನಲ್ಲಿ, ಮತ್ತಾರು ತಿಂಗಳು ಭಾರತದಲ್ಲಿ ಇವರು ಇರುತ್ತಾರೆ. ಪಾಂಡಿಚೆರಿಯಲ್ಲಿ ಫ್ರೆಂಚ್ ಇನ್ಸ್ಟಿಟ್ಯೂಟ್ ಸ್ಥಾಪಿಸಿದ್ದಾರೆ. ಸಂಸ್ಕೃತ, ತಮಿಳು ಭಾಷೆ ಕಲಿತಿದ್ದಾರೆ. ಶೈವ ಆಗಮ, ವಿಶಿಷ್ಟಾದ್ವೈತ ಪ್ರಾಕಾರಗಳನ್ನು ಕರಗತ ಮಾಡಿಕೊಂಡಿದ್ದಾರೆ.
ಕಿರಣ್ ವ್ಯಾಸ್ ಅವರು ಜಾಗತಿಕ ಯೋಗ ಮತ್ತು ಆಯುರ್ವೇದ ಸಾಧಕರಾಗಿದ್ದಾರೆ. ಗುಜರಾತ್ ಮೂಲದ 79 ವರ್ಷದ ಕಿರಣ್ ವ್ಯಾಸ್ ಲೇಖಕರೂ ಹೌದು. ಯೋಗ ಮತ್ತು ಆಯುರ್ವೇದದ ಬಗ್ಗೆ ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಫ್ರಾನ್ಸ್ನಲ್ಲಿ ಆಯುರ್ವೇದ ಚಿಕಿತ್ಸೆ ನೀಡುವ ತಪೋವನ ಸ್ಥಾಪಿಸಿದ್ದಾರೆ.
ಫ್ರೆಡ್ ನೆಗ್ರಿಟ್ ಅವರು ಫ್ರಾನ್ಸ್ ದೇಶದ ಪ್ರಮುಖ ಇಂಡಾಲಜಿಸ್ಟ್ ಎಂದು ಖ್ಯಾತರಾಗಿದ್ದಾರೆ. ಭಾರತೀಯ ಸಾಂಸ್ಕೃತಿಕ ಇತಿಹಾಸದ ಬಗ್ಗೆ ಇವರು ಸಾಕಷ್ಟು ಅಧ್ಯಯನ ಮಾಡಿದ್ದಾರೆ ಎನ್ನಲಾಗಿದೆ.
ಫ್ರಾನ್ಸ್ ದೇಶದ ನಾಲ್ವರು ಮಾತ್ರವಲ್ಲ ಮೆಕ್ಸಿಕೋದ ಪ್ರಕಾಶ್ ಸಿಂಗ್, ಪಪುವಾ ನ್ಯೂಗಿನಿಯಾದ ಶಶೀಂಧ್ರನ್ ಮುತುವೇಲ್ ಅವರಿಗೂ ಪದ್ಮ ಶ್ರೀ ಪ್ರಶಸ್ತಿಗಳು ಬಂದಿವೆ. ಫಾಕ್ಸ್ಕಾನ್ ಸಿಇಒ ಯಂಗ್ ಲಿಯು ಅವರಿಗೆ ಪದ್ಮಭೂಷಣ ಪ್ರಶಸ್ತಿ ಕೊಟ್ಟು ಗೌರವಿಸಲಾಗಿದೆ.