ಬೆಂಗಳೂರು: ರಾಜ್ಯದ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇರುವ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸಾಧ್ಯವಿಲ್ಲ ಎಂಬ ಕರ್ನಾಟಕದ ಮನವಿಯನ್ನು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಪುರಸ್ಕರಿಸಿದೆ.
ಎರಡೂ ರಾಜ್ಯಗಳಲ್ಲಿನ ಜಲಾಶಯಗಳಲ್ಲಿನ ಉಪಯುಕ್ತ ಸಂಗ್ರಹಣೆ (live storage) ಯನ್ನು ಪರಿಗಣಿಸಿದ ಸಿಡಬ್ಲ್ಯುಎಂಎ-ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ, ಕರ್ನಾಟಕದಿಂದ ನೀರು ಬಿಡುಗಡೆಗೆ ಯಾವುದೇ ನಿರ್ದೇಶನ ನೀಡಿಲ್ಲ. ದೆಹಲಿಯಲ್ಲಿ ಗುರುವಾರ ನಡೆದ ಸಿಡಬ್ಲ್ಯುಎಂಎ ಸಭೆಯಲ್ಲಿ ಕರ್ನಾಟಕ ಅಧಿಕಾರಿಗಳು, ರಾಜ್ಯದ ಜಲಾಶಯಗಳ ಸದ್ಯದ ಸ್ಥಿತಿಯನ್ನು ಪ್ರಾಧಿಕಾರದ ಗಮನಕ್ಕೆ ತಂದಿದ್ದಾರೆ.
2024ರ ಮೇ ಅಂತ್ಯದವರೆಗೆ 18 ಟಿಎಂಸಿ ನೀರು (7.61 ಟಿಎಂಸಿ ಬಾಕಿ ಸೇರಿದಂತೆ) ಬಿಡುಗಡೆ ಮಾಡುವಂತೆ ತಮಿಳುನಾಡು ಒತ್ತಾಯಿಸಿತ್ತು. ಆದರೆ ನೀರಾವರಿ ಅವಧಿಯು ಜನವರಿ 31ಕ್ಕೆ ಕೊನೆಗೊಂಡಿರುವ ಅಂಶವನ್ನು ಮತ್ತು ಎರಡೂ ರಾಜ್ಯಗಳಲ್ಲಿನ ಜಲಾಶಯಗಳಲ್ಲಿನ ಉಪಯುಕ್ತ ಸಂಗ್ರಹಣೆಯನ್ನು ಪರಿಗಣಿಸಿದ CWMA, ಕರ್ನಾಟಕದಿಂದ ನೀರು ಬಿಡುಗಡೆಗೆ ಯಾವುದೇ ನಿರ್ದೇಶನ ನೀಡಿಲ್ಲ.
ಜನವರಿ18ರಂದು ನಡೆದಿದ್ದ ಸಿಡಬ್ಲ್ಯುಆರ್ಸಿಯ 92ನೇ ಸಭೆಯಲ್ಲಿ ಜನವರಿಯಲ್ಲಿ 1182 ಕ್ಯೂಸೆಕ್ ಹಾಗೂ ಫೆಬ್ರವರಿ ತಿಂಗಳಲ್ಲಿ 998 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡಲು ಕರ್ನಾಟಕಕ್ಕೆ ಕಾವೇರಿ ನೀರು ನಿಯಂತ್ರಣ ಸಮಿತಿ(CWRC) ಸೂಚಿಸಿತ್ತು.