ಈ ಬಾರಿಯೂ ವೇಸ್ಟ್ ಆಗುತ್ತಾ ಜೆಡಿಎಸ್ ವೋಟ್..? ನಾಳೆ ರಾಜ್ಯಸಭಾ ಚುನಾವಣೆ. ನಾಳೆಯ ರಾಜ್ಯಸಭಾ ಚುನಾವಣೆಯಲ್ಲೂ ಜೆಡಿಎಸ್ ಶಾಸಕರ ಮತಗಳು ವೇಸ್ಟ್ ಆಗುತ್ತವಾ..? ಅಂದರೆ ಜೆಡಿಎಸ್ ಶಾಸಕರು ತಮ್ಮದೇ ಪಕ್ಷದ ಅಭ್ಯರ್ಥಿ ಪರ ಮತ ಹಾಕಿದರೂ ಅಭ್ಯರ್ಥಿಯೇ ಗೆಲ್ಲಕ್ಕಾಗದ ಪರಿಸ್ಥಿತಿ ಇದ್ಯಾ..?
2022ರಲ್ಲಿ ರಾಜ್ಯಸಭಾ ಚುನಾವಣೆಗೆ ಜೆಡಿಎಸ್ನಿಂದ ಸ್ಪರ್ಧೆ ಮಾಡಿದ್ದರು ಡಿ ಕುಪೇಂದ್ರ ರೆಡ್ಡಿ. ಅವರಿಗೆ ಜೆಡಿಎಸ್ನ 32 ಶಾಸಕರ ಪೈಕಿ 30 ಶಾಸಕರು ಮತ ಹಾಕಿದ್ದರು. 3 ಸಾವಿರ ಮತ ಮೌಲ್ಯವನ್ನು ಪಡೆದ ರೆಡ್ಡಿ ಅವರು ಮತ ಎಣಿಕೆ ವೇಳೆ ಎರಡನೇಯವರಾಗಿ ಎಲಿಮಿನೇಟ್ ಆದರು.
2018ರಲ್ಲಿ ಜೆಡಿಎಸ್ನಿಂದ ಉದ್ಯಮಿ ಬಿ ಎಂ ಫಾರೂಕ್ ಅವರು ಸ್ಪರ್ಧೆ ಮಾಡಿದ್ದರು. ಆದರೆ ಜೆಡಿಎಸ್ ಕೇವಲ ಇಬ್ಬರು ಶಾಸಕರ ಮತಗಳಷ್ಟೇ ಅವರಿಗೆ ಸಿಕ್ಕಿತ್ತು. ಕೇವಲ 200 ಮತ ಮೌಲ್ಯ ಪಡೆದು ಮತ ಎಣಿಕೆ ವೇಳೆ ಎಲಿಮಿನೇಟ್ ಆದರು.
2016ರಲ್ಲಿ ನಡೆದಿದ್ದ ರಾಜ್ಯಸಭಾ ಚುನಾವಣೆಯಲ್ಲಿ ಉದ್ಯಮಿ ಬಿ ಎಂ ಫಾರೂಕ್ ಮೊದಲ ಬಾರಿಗೆ ಸ್ಪರ್ಧೆ ಮಾಡಿದ್ದರು. ಆದರೆ ಆಗ 8 ಮಂದಿ ಜೆಡಿಎಸ್ ಶಾಸಕರು ಕಾಂಗ್ರೆಸ್ ಅಭ್ಯರ್ಥಿ ಸಿ ಕೆ ರಾಮಮೂರ್ತಿ ಪರವಾಗಿ ಮತ ಹಾಕಿದ್ದರಿಂದ ಫಾರೂಕ್ ಅವರಿಗೆ ಸಿಕ್ಕಿದ್ದು 32 ಶಾಸಕರ ಮತ. ಪಕ್ಷದಲ್ಲಿ 40 ಶಾಸಕರಿದ್ದರೂ ಫಾರೂಕ್ ಸೋತರು.
ಆ ಅಡ್ಡಮತದಾನದ ಬಳಿಕ ಜೆಡಿಎಸ್ ಜಮೀರ್ ಅಹ್ಮದ್ ಖಾನ್, ಕೆ ಗೋಪಾಲಯ್ಯ, ಅಖಂಡ ಶ್ರೀನಿವಾಸಮೂರ್ತಿ, ಚಲುವರಾಯಸ್ವಾಮಿ, ಹೆಚ್ ಸಿ ಬಾಲಕೃಷ್ಣ, ಇಕ್ಬಾಲ್ ಅನ್ಸಾರಿ, ರಮೇಶ್ ಬಂಡಿಸಿದ್ದೇಗೌಡ, ಭೀಮಾ ನಾಯ್ಕ್ 8 ಮಂದಿ ಶಾಸಕರನ್ನು ಪಕ್ಷದಿಂದಲೇ ಉಚ್ಛಾಟಿಸಿದ್ದರು ದೇವೇಗೌಡರು.
2014ರಲ್ಲಿ ರಾಜ್ಯಸಭೆಯ 4 ಸ್ಥಾನಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಇಬ್ಬರು, ಬಿಜೆಪಿಯಿಂದ ಒಬ್ಬರು ಮತ್ತು ಜೆಡಿಎಸ್ನಿಂದ ಕುಪೇಂದ್ರ ರೆಡ್ಡಿ ಅವಿರೋಧವಾಗಿ ಆಯ್ಕೆಯಾಗಿದ್ದರು. ನಾಲ್ವರು ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದರಿಂದ ಕುಪೇಂದ್ರ ರೆಡ್ಡಿ ಅವಿರೋಧವಾಗಿ ಆಯ್ಕೆಯಾಗುವುದು ಸುಲಭವಾಯಿತು.
2014, 2016,2018 ರಾಜ್ಯಸಭಾ ಚುನಾವಣೆ ವೇಳೆ ಜೆಡಿಎಸ್ ಬಳಿ 40 ಶಾಸಕರ ಬಲವಿತ್ತು. ಆದರೆ 2014ರಲ್ಲಿ ಕುಪೇಂದ್ರ ರೆಡ್ಡಿ ಅವಿರೋಧವಾಗಿ ಆಯ್ಕೆಯಾಗಿದ್ದು ಆ ಬಳಿಕ ಜೆಡಿಎಸ್ಗೆ ತನ್ನ ಸ್ವಂತ ಬಲದಲ್ಲಿ (2016, 2018ರಲ್ಲೂ) ಒಬ್ಬರನ್ನೂ ಗೆಲ್ಲಿಸಿಕೊಂಡು ಬರಕ್ಕಾಗಲಿಲ್ಲ.
2020ರಲ್ಲಿ ದೇವೇಗೌಡರಿಗೆ ಕಾಂಗ್ರೆಸ್ ಬೆಂಬಲವನ್ನು ಸೂಚಿಸಿದ್ದರಿಂದ ಮತ್ತು ಎರಡನೇ ಅಭ್ಯರ್ಥಿ ಹಾಕದೇ ಇದಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು.
ಈ ಬಾರಿಯೂ ಜೆಡಿಎಸ್ಗೆ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವಷ್ಟು ಶಾಸಕರ ಮತಗಳಿಲ್ಲ. ಬಿಜೆಪಿ ಮತಗಳು ಮತ್ತು ಕಾಂಗ್ರೆಸ್ನ ಅಡ್ಡ ಮತಗಳು ಮತ್ತು ಪಕ್ಷೇತರ ಮತಗಳನ್ನಷ್ಟೇ ನೆಚ್ಚಿಕೊಂಡಿದೆ. ಒಂದು ವೇಳೆ ಈ ಬಾರಿಯೂ ಜೆಡಿಎಸ್ ಅಭ್ಯರ್ಥಿ ಸೋತರೆ ಸಿದ್ದರಾಮಯ್ಯ ಅವಧಿಯಲ್ಲಿ ಕುಮಾರಸ್ವಾಮಿ ನಾಯಕತ್ವಕ್ಕೆ ಆಗಬಹುದಾದ ಮೂರನೇ ನೇರ ಸೋಲು ಮತ್ತು ಕಾಂಗ್ರೆಸ್ ಎದುರು ಆಗಲಿರುವ 4ನೇ ನೇರ ಸೋಲು.