ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವುದು ಪಕ್ಕಾ ಆಗಿದೆ.
ಬೆಳಗಾವಿ ಕ್ಷೇತ್ರದ ಹಾಲಿ ಸಂಸದೆಯಾಗಿರುವ ಹಾಗೂ ಬೀಗರೂ ಆಗಿರುವ ಮಂಗಳಾ ಅಂಗಡಿ ಅವರಿಗೆ ಟಿಕೆಟ್ ತಪ್ಪುವ ಸಾಧ್ಯತೆಯಿದೆ. ಬುಧವಾರ ಸಂಜೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಶೆಟ್ಟರ್ ತಮ್ಮ ರಾಯಚೂರು ಪ್ರವಾಸ ಮೊಟಕುಗೊಳಿಸಿ ಮರಳಿ ಹುಬ್ಬಳ್ಳಿಗೆ ಆಗಮಿಸಿದ್ದರು. ಗುರುವಾರ ಬೆಳಿಗ್ಗೆ ತಮ್ಮ ಆಪ್ತರೊಂದಿಗೆ ಸಭೆ ನಡೆಸಿದರು.
ಧಾರವಾಡ ಇಲ್ಲವೆ ಹಾವೇರಿ ಲೋಕಸಭೆಯ ಟಿಕೆಟ್ ಆಕಾಂಕ್ಷಿಯಾಗಿದ್ದ ಶೆಟ್ಟರ್ ಅವರಿಗೆ ನಿರಾಸೆಯಾಗಿದ್ದನ್ನು ಗಮನಿಸಿ ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೂರವಾಣಿ ಮೂಲಕ ಸಂಪರ್ಕಿಸಿ ಸಮಾಧಾನಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿನ ಪಕ್ಷದ ಮುಖಂಡರು, ಶಾಸಕರು, ಮಾಜಿ ಶಾಸಕರೊಂದಿಗೆ ಖುದ್ದು ಶೆಟ್ಟರ್ ಫೋನ್ ಮೂಲಕವೇ ಮಾತನಾಡಿದ್ದಾರೆ. ಎಲ್ಲರೂ ಶೆಟ್ಟರ್ ಅವರಿಗೆ ಆಹ್ವಾನ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.