ಇಂದಿನಿಂದ ದೇಶದಲ್ಲಿ ಹೊಸ ಹಣಕಾಸು ವರ್ಷ ಪ್ರಾರಂಭವಾಗಲಿದೆ. ಹೊಸ ತೆರಿಗೆ ನಿಯಮಗಳೂ ಕೂಡ ಇಂದಿನಿಂದಲೇ ಜಾರಿಯಾಗುತ್ತಿದೆ. ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದ ಹೆಚ್ಚಿನ ಬದಲಾವಣೆಗಳು ಈ ದಿನದಿಂದ ಜಾರಿಗೆ ಬರುತ್ತಿದ್ದು, ಬಜೆಟ್ನಲ್ಲಿ ಮಾಡಲಾದ ಬಹುತೇಕ ಘೋಷಣೆಗಳು ಜಾರಿಗೆ ಬರುತ್ತವೆ.
ನೂತನ ತೆರಿಗೆ ಪದ್ಧತಿ ಅನ್ವಯ ವಾರ್ಷಿಕ 3 ಲಕ್ಷ ರೂ ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಇರುವುದಿಲ್ಲ. 3 ರಿಂದ 6 ಲಕ್ಷ ರೂ ವರೆಗಿನ ಆದಾಯಕ್ಕೆ ಶೇ.5ರಷ್ಟು, 6 ರಿಂದ 9 ಲಕ್ಷದ ವರೆಗಿನ ಆದಾಯಕ್ಕೆ ಶೇ.10ರಷ್ಚು ತೆರಿಗೆ ಅನ್ವಯವಾಗುತ್ತದೆ. ಅಂತೆಯೇ 9ರಿಂದ 12 ಲಕ್ಷ ರೂ ವರೆಗಿನ ಆದಾಯಕ್ಕೆ ಶೇ.15ರಷ್ಟು ಮತ್ತು 12 ರಿಂದ 15 ಲಕ್ಷ ರೂ ವರೆಗಿನ ಆದಾಯಕ್ಕೆ ಶೇ.20ರಷ್ಟು ತೆರಿಗೆ ಅನ್ವಯವಾಗುತ್ತದೆ. 15 ಲಕ್ಷರೂ ಮೇಲ್ಪಟ್ಟ ಆದಾಯಕ್ಕೆ ಶೇ.30ರಷ್ಟು ತೆರಿಗೆ ಅನ್ವಯವಾಗಲಿದೆ.
ಈಗ ಜೀವ ವಿಮಾ ಪಾಲಿಸಿಯಿಂದ ಪಡೆದ ಮೆಚ್ಯೂರಿಟಿ ಆದಾಯದ ಮೇಲೆ ತೆರಿಗೆ ಪಾವತಿಸಬೇಕಾಗುತ್ತದೆ. ಇದನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಏಪ್ರಿಲ್ 1, 2023 ರಂದು ಅಥವಾ ನಂತರ ನೀಡಲಾದ ಯಾವುದೇ ನೀತಿಗಳು ಈ ನಿಯಮದ ವ್ಯಾಪ್ತಿಯಲ್ಲಿ ಬರುತ್ತವೆ. ಆದಾಗ್ಯೂ, ಒಟ್ಟು ಪ್ರೀಮಿಯಂ ರೂ 5 ಲಕ್ಷ ರೂಗಿಂತ ಹೆಚ್ಚು ಇರುವವರು ಮಾತ್ರ ಈ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
ಹೆಚ್ಚಿದ ಮೂಲ ವಿನಾಯಿತಿ ಮಿತಿ:
ಮೂಲ ವಿನಾಯಿತಿ ಮಿತಿಯನ್ನು 2.5 ಲಕ್ಷ ರೂಯಿಂದ 3 ಲಕ್ಷ ರೂಗೆ ಏರಿಸಲಾಗಿದ್ದು, ಇದು ಹೊಸ ತೆರಿಗೆ ಪದ್ಧತಿಯನ್ನು ಹೆಚ್ಚು ಆಕರ್ಷಕವಾಗಿ ಮಾಡುತ್ತದೆ. 5 ಕೋಟಿ ರೂ ಗಿಂತ ಹೆಚ್ಚಿನ ಆದಾಯ ಹೊಂದಿರುವ ವ್ಯಕ್ತಿಗಳ ಸರ್ಚಾರ್ಜ್ ದರವು 37% ರಿಂದ 25% ಕ್ಕೆ ಇಳಿದಿದೆ.
ಈ ಕಡಿಮೆಯಾದ ಸರ್ಚಾರ್ಜ್ ದರವು ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡುವವರಿಗೆ ಮಾತ್ರ ಅನ್ವಯಿಸುತ್ತದೆ. ಹೊಸ ತೆರಿಗೆ ಪದ್ಧತಿಯಲ್ಲಿ, ರಿಯಾಯಿತಿ ಮಿತಿಯನ್ನು ಹೆಚ್ಚಿಸಲಾಗಿದ್ದು, 7 ಲಕ್ಷ ರೂ ವರೆಗಿನ ಆದಾಯಕ್ಕೆ, ಅನ್ವಯವಾಗುವ ರಿಯಾಯಿತಿ ಮಿತಿ ಈಗ 25,000 ರೂ ಆಗಿದೆ.