ADVERTISEMENT
ಸಾಮೂಹಿಕ ಲೈಂಗಿಕ ಹಗರಣದಲ್ಲಿ ಆರೋಪಿಯಾಗಿರುವ ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಜೂನ್ 1ರಂದು ಬೆಳಗ್ಗೆ 10 ಗಂಟೆಗೆ ವಿಶೇಷ ತನಿಖಾ ತಂಡದ ಎದುರು ವಿಚಾರಣೆಗೆ ಹಾಜರಾಗಲಿದ್ದಾರೆ.
ಸೋಮವಾರ ಬಿಡುಗಡೆ ಮಾಡಿರುವ ವೀಡಿಯೋ ಸಂದೇಶದಲ್ಲಿ ತಾವು ಶನಿವಾರದಂದು ವಿಚಾರಣೆಗೆ ಹಾಜರಾಗುವ ಬಗ್ಗೆ ಅತ್ಯಾಚಾರ ಪ್ರಕರಣದ ಆರೋಪಿ ಪ್ರಜ್ವಲ್ ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ.
ಪ್ರಜ್ವಲ್ ವಿಚಾರಣೆಗೆ ಹಾಜರಾಗುವುದಕ್ಕೂ 4 ದಿನ ಮೊದಲು ಅಂದರೆ ಮಂಗಳವಾರ ಎಸ್ಐಟಿ ಪೊಲೀಸರು ಹಾಸನದಲ್ಲಿರುವ ಸಂಸದರ ನಿವಾಸದಲ್ಲಿ ಸಾಕ್ಷ್ಯ ಸಂಗ್ರಹಿಸಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯ ಸಮೇತ ಎಸ್ಐಟಿ ಸಂಸದರ ಮನೆಯಲ್ಲಿ ಸಾಕ್ಷ್ಯ ಸಂಗ್ರಹಿಸಿದೆ.
ಇವತ್ತು ನಸುಕಿನ ಜಾವ 4 ಗಂಟೆಗೆ ಸಾಕ್ಷ್ಯ ಸಂಗ್ರಹ ಪ್ರಕ್ರಿಯೆ ಮುಕ್ತಾಯವಾಗಿದೆ. ಸಾಕ್ಷ್ಯದ ಭಾಗವಾಗಿ ಪ್ರಜ್ವಲ್ ಬಳಸ್ತಿದ್ದ ಹಾಸಿಗೆ, ದಿಂಬು, ಹೊದಿಕೆ ಸೇರಿದಂತೆ ಸಂಸದರು ಬಳಸ್ತಿದ್ದ ಹಲವು ವಸ್ತುಗಳನ್ನು ವಶಪಡಿಸಿಕೊಂಡು ಬೆಂಗಳೂರಿಗೆ ಕೊಂಡೊಯ್ದಿದೆ.
ಪ್ರಜ್ವಲ್ ವಿರುದ್ಧ ದಾಖಲಾಗಿರುವ ಮೂರು ಎಫ್ಐಆರ್ಗಳ ಪೈಕಿ ಒಂದು ಎಫ್ಐಆರ್ನಲ್ಲಿ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಪಕ್ಕದಲ್ಲೇ ಇರುವ ಸಂಸದರ ನಿವಾಸದಲ್ಲಿ ಪ್ರಜ್ವಲ್ ತಮ್ಮ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.
ತಾತ ಹೆಚ್ ಡಿ ದೇವೇಗೌಡ ಅವರಿಗೆ ಸರ್ಕಾರದಿಂದ ನೀಡಲಾಗಿದ್ದ ಬಂಗಲೆಯನ್ನೂ ಕಾಮಕೃತ್ಯಗಳಿಗೆ ಪ್ರಜ್ವಲ್ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪವೂ ಇದೆ.
ವಿಮಾನದ ಟಿಕೆಟ್ ಬುಕ್:
ಜೂನ್ 1ರಂದು ಶನಿವಾರ ಬೆಳಗ್ಗೆ ಎಸ್ಐಟಿ ಮುಂದೆ ಹಾಜರಾಗುವುದಾಗಿ ಪ್ರಜ್ವಲ್ ಘೋಷಿಸಿಕೊಂಡಿರುವ ಹಿನ್ನೆಲೆಯಲ್ಲಿ ಜರ್ಮನಿಯ ಮ್ಯೂನಿಚ್ ನಗರದಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವುದಕ್ಕಾಗಿ ಮೇ 31ಕ್ಕೆ ಲುಫ್ತಾನಾ ಏರ್ಲೈನ್ಸ್ನಲ್ಲಿ ಟಿಕೆಟ್ ಬುಕ್ ಮಾಡಿದ್ದಾರೆ ಎಂಬ ಮಾಹಿತಿ ಇದೆ.
ಶರಣಾಗತಿಗೂ ಮೊದಲೇ ಬಂಧನ..?
ಎಸ್ಐಟಿ ಮುಂದೆ ಜೂನ್ 1ರಂದು ಪ್ರಜ್ವಲ್ ರೇವಣ್ಣ ಶರಣಾಗಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇದುವರೆಗೆ ಮೂರು ಅತ್ಯಾಚಾರ ಪ್ರಕರಣಗಳಲ್ಲೂ ಪ್ರಜ್ವಲ್ ಮೊದಲನೇ ಆರೋಪಿ.
ಏಪ್ರಿಲ್ 28ರಂದು ಎಸ್ಐಟಿ ಮೊದಲನೇ ಎಫ್ಐಆರ್ ದಾಖಲಿಸಿದ ಬಳಿಕ ಪ್ರಜ್ವಲ್ ನಾಪತ್ತೆಯಾಗಿದ್ದು, ಆ ಕಾರಣ ಪ್ರಜ್ವಲ್ ಬಂಧಿಸಲಾಗದೇ ಮೇ 1ರಂದು ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ಪ್ರಜ್ವಲ್ಗೆ ಸಮನ್ಸ್ ನೀಡಿತ್ತು.
ಆದರೆ ಮೇ 1ರಂದು ತಮ್ಮ ವಕೀಲರ ಮೂಲಕ ಎಸ್ಐಟಿಗೆ ಉತ್ತರಿಸಿದ್ದ ಪ್ರಜ್ವಲ್ ತಾವು ಹೊರಗಡೆ ಪ್ರವಾಸದಲ್ಲಿರುವ ಕಾರಣ ವಿಚಾರಣೆಗೆ ಹಾಜರಾಗಲು 1 ವಾರ ಸಮಯ ಕೇಳಿದ್ದರು. ಆದರೆ ಆ ಒಂದು ವಾರ ಕಳೆದ ಬಳಿಕವೂ ಪ್ರಜ್ವಲ್ ಎಸ್ಐಟಿ ಎದುರು ಹಾಜರಾಗಲಿಲ್ಲ.
ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಪ್ರಜ್ವಲ್ ವಿರುದ್ಧ ಮೇ 4ರ ವೇಳೆಗೆ ಎಸ್ಐಟಿ ಎರಡನೇ ಲುಕ್ಔಟ್ ನೋಟಿಸ್ ಹೊರಡಿಸಿತ್ತು.
ಇತ್ತ, ಎಸ್ಐಟಿ ಪೊಲೀಸರ ಮನವಿ ಮೇರೆಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ಪ್ರಜ್ವಲ್ ರೇವಣ್ಣ ವಿರುದ್ಧ ಇಂಟರ್ಪೋಲ್ ಮೂಲಕ ಮೇ 7ರಂದು ಬ್ಲೂ ಕಾರ್ನರ್ ನೋಟಿಸ್ ಹೊರಡಿಸಲಾಗಿತ್ತು.
ಬ್ಲೂ ಕಾರ್ನರ್ ನೋಟಿಸ್ ಪ್ರಕಾರ ಪ್ರಜ್ವಲ್ ಎಲ್ಲಿದ್ದಾನೆ..? ಎಂಬುದನ್ನು ಪತ್ತೆ ಹಚ್ಚಿ ಇಷ್ಟೊತ್ತಿಗಾಗಲೇ ಇಂಟರ್ಪೋಲ್ ಪತ್ತೆ ಹಚ್ಚಿ ಸಿಬಿಐ ಮೂಲಕ ಎಸ್ಐಟಿಗೆ ಮಾಹಿತಿ ನೀಡ್ಬೇಕಿತ್ತು.
ಬ್ಲೂ ಕಾರ್ನರ್ ನೋಟಿಸ್ ಅಡಿಯಲ್ಲಿ ಸದಸ್ಯ ರಾಷ್ಟ್ರಕ್ಕೆ ಬೇಕಾಗಿರುವ ವ್ಯಕ್ತಿಯ ಗುರುತು ಮತ್ತು ಆತ ಎಲ್ಲಿದ್ದಾನೆ ಎಂಬ ಮಾಹಿತಿಯನ್ನು ಸಂಗ್ರಹಿಸಿ ಆ ಸದಸ್ಯ ರಾಷ್ಟ್ರಕ್ಕೆ ನೀಡಲಾಗುತ್ತದೆ. ಆ ಮಾಹಿತಿ ಆಧರಿಸಿ ಆ ದೇಶ ಆ ಆರೋಪಿಯ ಗಡೀಪಾರಿಗೆ ಆತ ಉಳಿದುಕೊಂಡಿರುವ ದೇಶಕ್ಕೆ ಮನವಿ ಸಲ್ಲಿಸಬಹುದು.
ಆದರೆ ಇಂಟರ್ಪೋಲ್ ಪ್ರಜ್ವಲ್ ಎಲ್ಲಿದ್ದಾನೆ ಎಂದು ಗುರುತು ಪತ್ತೆ ಹಚ್ಚುವ ಮೊದಲೇ ವೀಡಿಯೋ ಬಿಡುಗಡೆಗೊಳಿಸಿ ತಾನು ಜೂನ್ 1ರಂದು ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ್ದಾನೆ.
ಬೆಂಗಳೂರಿಗೆ ಬರ್ತಿದ್ದಂತೆ ಅರೆಸ್ಟ್..?
ಲುಕ್ಔಟ್ ನೋಟಿಸ್ನ ಪ್ರಕಾರ ಬೇಕಾಗಿರುವ ಆರೋಪಿ ಒಂದು ವೇಳೆ ವಿಮಾನ ನಿಲ್ದಾಣ, ಬಂದರು ಅಥವಾ ರಸ್ತೆ ಮೂಲಕ ವಿದೇಶಕ್ಕೆ ಓಡಿಹೋಗುವ ಸುಳಿವು ಇದ್ದಲ್ಲಿ ಆತನನ್ನು ವಶಕ್ಕೆ ಪಡೆದು ತನಿಖಾ ಸಂಸ್ಥೆಗೆ ಒಪ್ಪಿಸಬೇಕು.
ಪ್ರಜ್ವಲ್ ವಿರುದ್ಧದ ಲುಕ್ಔಟ್ ನೋಟಿಸ್ ಅಥವಾ ಬ್ಲೂ ಕಾರ್ನರ್ ನೋಟಿಸ್ನ್ನು ವಾಪಸ್ ಪಡೆದಿಲ್ಲ. ಹೀಗಾಗಿ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಎಸ್ಐಟಿ ಪ್ರಜ್ವಲ್ನ್ನು ಬಂಧಿಸಿದರೂ ಅಚ್ಚರಿಯಿಲ್ಲ.
ಆದರೆ ದೇವೇಗೌಡರ ಕುಟುಂಬ ಇಲ್ಲೊಂದು ಮೈಂಡ್ ಗೇಮ್ ಆಡ್ತಿದೆ. ಮೇ 23ರಂದು ತಾತ ದೇವೇಗೌಡರು ಎಸ್ಐಟಿ ಎದುರು ಶರಣಾಗುವಂತೆ ಎಚ್ಚರಿಕೆ ಕೊಟ್ಟು ಪತ್ರ ಬರೆದಿದ್ದರು. ಆ ಪತ್ರದ ಐದು ದಿನಗಳ ಬಳಿಕ ಸಾಮೂಹಿಕ ಅತ್ಯಾಚಾರದ ಆರೋಪಿಯಾಗಿರುವ ಪ್ರಜ್ವಲ್ ವೀಡಿಯೋ ಸಂದೇಶ ಬಿಡುಗಡೆ ಮಾಡಿದ್ದರು.
ಒಂದು ವೇಳೆ ಎಸ್ಐಟಿ ಬಂಧನಕ್ಕೂ ಮೊದಲೇ ಕೈಗೆ ಸಿಗದೇ ನೇರವಾಗಿ ಹೋಗಿ ಮೊದಲೇ ಹೇಳಿದಂತೆ ವಿಚಾರಣೆ ಹಾಜರಾಗುವ ನೆಪದಲ್ಲಿ ಶರಣಾದರೆ ಅದನ್ನು ದೇವೇಗೌಡರು, ಕುಮಾರಸ್ವಾಮಿ ಮತ್ತು ಹೆಚ್ ಡಿ ರೇವಣ್ಣ ಆದಿಯಾಗಿ ಬಿಜೆಪಿ ನಾಯಕರೂ ಒಳಗೊಂಡಂತೆ ವಿಪಕ್ಷ ಬಣ ತಮ್ಮ ನೈತಿಕ ಗೆಲುವು ಎಂದು ಬಿಂಬಿಸಿಕೊಳ್ಳುವುದರಲ್ಲಿ ತಪ್ಪಿಲ್ಲ.
ಪ್ರಜ್ವಲ್ ಶರಣಾದ ಬಳಿಕ ಎಸ್ಐಟಿ ಬಂಧಿಸಿದರೆ ಅದು ಎಸ್ಐಟಿ ತನಿಖೆ ಎಷ್ಟರ ಮಟ್ಟಿಗೆ ಬಿಗಿಯಾಗಿದೆ, ಪಾರದರ್ಶಕವಾಗಿದೆ ಎನ್ನುವುದರ ಮೇಲೆ ಅನುಮಾನ ಸೃಷ್ಟಿಸುತ್ತದೆ. ಅಷ್ಟೇ ಅಲ್ಲ, ಪ್ರಜ್ವಲ್ ಕಾಮಕೃತ್ಯಕ್ಕೆ ಬಲಿಯಾಗಿರುವ ಅದೆಷ್ಟೋ ಹೆಣ್ಮಕ್ಕಳು ತಮಗಾದ ಅನ್ಯಾಯದ ವಿರುದ್ಧ ಎಸ್ಐಟಿಗೆ ಮೊರೆ ಹೋಗುವ ನೈತಿಕ ಸ್ಥೈರ್ಯ ಕಳೆದುಕೊಳ್ಳುತ್ತಾರೆ.
ಓಡಿಹೋಗಿರುವ ಪ್ರಜ್ವಲ್ ಬೆಂಗಳೂರಿಗೆ ಬರ್ತಿದ್ದಂತೆ ಎಸ್ಐಟಿ ಬಂಧಿಸಿದರೆ ಅದು ಅಪ್ಪ-ಮಕ್ಕಳ ದೌರ್ಜನ್ಯ ವಿರುದ್ಧದ ತನಿಖೆಯ ಮೇಲೆ ಜನರ ವಿಶ್ವಾಸವನ್ನು ಹೆಚ್ಚಿಸಬಹುದು, ದೌರ್ಜನ್ಯಕ್ಕೊಳಗಾದವರಿಗೆ ತಮ್ಮಗಾದ ಅನ್ಯಾಯ ಹೇಳಿಕೊಳ್ಳಲು ನೈತಿಕ ಧೈರ್ಯ ತುಂಬಬಹುದು.
ಇಂಥ ದಿನವೇ ವಿಚಾರಣೆಗೆ ಬರುವುದಾಗಿ ಎಂದು ಸ್ವತಃ ಪ್ರಜ್ವಲ್ ದಿನ, ಸಮಯ ಹೇಳಿರುವ ಕಾರಣ ಎಸ್ಐಟಿಗೆ ಶರಣಾಗತಿಗೂ ಮೊದಲೇ ಪ್ರಜ್ವಲ್ ಬಂಧನ ಕಷ್ಟವೇನಲ್ಲ, ಮನಸ್ಸು ಮಾಡಬೇಕಷ್ಟೇ.
ADVERTISEMENT