ಪ್ರತಿಭಟನಾನಿರತ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಜೇನು ಹುಳುಗಳ ಹಿಂಡು ದಾಳಿ ಮಾಡಿದ ಘಟನೆ ಇಂದು ಒಡಿಶಾದಲ್ಲಿ ನಡೆದಿದೆ.
ಇಲ್ಲಿನ ಭುಬನೇಶರದಲ್ಲಿ ಭ್ರಷ್ಟಾಚಾರ ಆರೋಪ ಹೊತ್ತು ಸಿಬಿಐ ತನಿಖೆ ಎದುರಿಸುತ್ತಿರುವ ಐಎಎಸ್ ಅಧಿಕಾರಿ ಭಿಷ್ಣುಪಾದ ಸೇಥಿಯವರ ವಿರುದ್ಧ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಕೈಗೊಂಡಿದ್ದರು.
ಭಷ್ಟಾಚಾರ ಪ್ರಕರಣದ ಆರೋಪಿಯಾಗಿರುವ ಸೇಥಿಯವರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲೆತ್ನಿಸಿದ ವೇಳೆ ಏಕಾಏಕಿ ಜೇನು ಹುಳುಗಳ ಹಿಂಡು ಪ್ರತಿಭಟನಾಕಾರರ ಮೇಲೆ ದಾಳಿ ನಡೆಸಿತು. ಕೂಡಲೇ ಪ್ರತಿಭಟನಾನಿರತ ಕಾಂಗ್ರೆಸ್ ಕಾರ್ಯಕರ್ತರು ಸ್ಥಳದಿಂದ ಓಟ ಕಿತ್ತರು.
ಜೇನು ನೊಣಗಳಿಂದ ರಕ್ಷಿಸಿಕೊಳ್ಳಲು ಕೆಲವರು ಮುಖ ಮುಚ್ಚಿಕೊಂಡ್ರೆ, ಹಲವರು ನೆಲದ ಮೇಲೆ ಮಲಗಿ ಜೇನು ಹುಳುಗಳ ಕಡಿತದಿಂದ ಪಾರಾದರು. ಕೆಲ ಹೊತ್ತಲ್ಲೇ ಮತ್ತೆ ಪ್ರತಿಭಟನಾಕಾರರು ಐಎಎಸ್ ಆಧಿಕಾರಿ ಮನೆಗೆ ಮುತ್ತಿಗೆ ಹಾಕಲೆತ್ನಿಸಿದರು. ಅಲ್ಲದೆ ಅವರ ಮನೆ ಮೇಲೆ ಮೊಟ್ಟೆ, ಟೊಮ್ಯಾಟೋಗಳನ್ನು ತೂರಿದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಜಟಾಪಟಿ ಏರ್ಪಟ್ಟು ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹಲವು ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿದರು.