ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಅತ್ಯಂತ ಮಹತ್ವದ ಮಸೂದೆಗಳಲ್ಲಿ ಒಂದಾಗಿರುವ ಒಂದೇ ದೇಶ, ಒಂದೇ ಚುನಾವಣೆ ಮಸೂದೆ ಲೋಕಸಭೆಯಲ್ಲಿ ಮಂಡನೆಯಾಗಿದೆ.
ಆದರೆ ʻಒಂದೇ ದೇಶ ಒಂದೇ ಚುನಾವಣೆʼ ಮಸೂದೆ ಮೂಲಕ ರಾಜ್ಯಗಳ ಮೇಲೆ ಪರೋಕ್ಷವಾಗಿ ಕೇಂದ್ರ ಸರ್ಕಾರವೇ ಆಡಳಿತ ನಡೆಸುವ, ಆ ಮೂಲಕ ರಾಜ್ಯಗಳ ಆಡಳಿತವನ್ನು ಕೇಂದ್ರ ಸರ್ಕಾರವೇ ನೇರವಾಗಿ ತನ್ನ ಸುಪರ್ದಿಗೆ ತೆಗೆದುಕೊಳ್ಳುವ ಪರೋಕ್ಷ ಯತ್ನವನ್ನು ನಡೆಸುತ್ತಿರುವ ಗುಮಾನಿ ಗೋಚರವಾಗುತ್ತಿದೆ.
ಮಾಜಿ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಅವರ ನೇತೃತ್ವದ ಉನ್ನತ ಮಟ್ಟದ ಸಮಿತಿ ಕೊಟ್ಟಿರುವ ವರದಿಯಲ್ಲಿರುವ ಪ್ರಮುಖ ಅಂಶವೊಂದು ಈ ಸಂಶಯವನ್ನು ಬಲಗೊಳಿಸುತ್ತಿದೆ.
ಅಧ್ಯಯನ ವರದಿಯ ಮೂರನೇ ಭಾಗವಾಗಿರುವ ʻಏಕಕಾಲಕ್ಕೆ ಚುನಾವಣೆ ನಡೆಸುವ ಯೋಜನೆʼ ಇದರಲ್ಲಿರುವ ಪ್ಯಾರ ಸಂಖ್ಯೆ 32ರಲ್ಲಿ ಇರುವ ಶಿಫಾರಸ್ಸಿನ ಪ್ರಕಾರ ಚುನಾವಣಾ ಆಯೋಗಕ್ಕೆ ಇದೇ ಮೊದಲ ಬಾರಿಗೆ ಅತ್ಯಂತ ಮಹತ್ವದ ಪರಮಾಧಿಕಾರವನ್ನು ನೀಡಲಾಗಿದ್ದು, ಈ ಅಧಿಕಾರ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಯನ್ನು ಮುಂದೂಡುವುದಕ್ಕೆ ಪ್ರಮುಖ ಅಸ್ತ್ರವಾಗಲಿದೆ.
32. In the event of an extraordinary circumstance, when the simultaneous elections to any State Legislative Assembly cannot be conducted at the time of the General elections, the Election Commission of India may make a
recommendation to the President, to declare by an Order that the election to that Legislative Assembly may be conducted at a later date. However, the term of such Legislative Assembly, so constituted, shall end on the same date as the end of the full term of the House of the People constituted after the General Election.ಅಪರೂಪದ ಸನ್ನಿವೇಶದಲ್ಲಿ ಲೋಕಸಭಾ ಚುನಾವಣೆಯ ಜೊತೆ ಜೊತೆಗೆ ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ನಡೆಸುವುದಕ್ಕೆ ಅಸಾಧ್ಯವಾದಲ್ಲಿ, ಆಗ ಮುಂದಿನ ದಿನಗಳಲ್ಲಿ ಆ ರಾಜ್ಯಕ್ಕೆ ವಿಧಾನಸಭಾ ಚುನಾವಣೆ ನಡೆಸುವ ಸಂಬಂಧ ಆದೇಶ ಹೊರಡಿಸುವಂತೆ ರಾಷ್ಟ್ರಪತಿಗಳಿಗೆ ಚುನಾವಣಾ ಆಯೋಗ ಶಿಫಾರಸ್ಸನ್ನು ಮಾಡಬಹುದು. ಆದರೆ ಆ ರೀತಿ ರಚಿತವಾದ ವಿಧಾನಸಭೆಯ ಅವಧಿಯು ಲೋಕಸಭಾ ಚುನಾವಣೆಯಿಂದ ರಚಿತವಾದ ನಿರ್ದಿಷ್ಟ ಲೋಕಸಭೆಯ ಅವಧಿಯ ಜೊತೆಗೆಯೇ ಅಂತ್ಯ ಆಗಬೇಕು
ಎಂದು ಮಾಜಿ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಅವರ ಸಮಿತಿ ತನ್ನ ಶಿಫಾರಸ್ಸಿನಲ್ಲಿ ತಿಳಿಸಿದೆ.
ಇಲ್ಲಿ ಮೂರು ಅಂಶಗಳನ್ನು ಪರಿಗಣಿಸಬಹುದು:
1. ಮಾಜಿ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಅವರ ಸಮಿತಿ ʻಒಂದೇ ದೇಶ ಒಂದೇ ಚುನಾವಣೆʼಗೆ ಸಂಬಂಧಿಸಿದಂತೆ ಶಿಫಾರಸ್ಸು ಮಾಡಿದ್ದರೂ ಲೋಕಸಭಾ ಚುನಾವಣೆಯ ಜೊತೆ ಜೊತೆಗೆ ಏಕಕಾಲಕ್ಕೆ ವಿಧಾನಸಭಾ ಚುನಾವಣೆಯನ್ನು ನಡೆಸದೇ ಇರುವುದಕ್ಕೆ ಕಾರಣಗಳನ್ನು ಕೊಟ್ಟು ವಿಧಾನಸಭಾ ಚುನಾವಣೆಯನ್ನು ನಡೆಸದೇ ಮುಂದೂಡಲು ಅವಕಾಶ ನೀಡಲಾಗಿದೆ.
2. ಒಂದು ವೇಳೆ ಲೋಕಸಭಾ ಚುನಾವಣೆ ಜೊತೆ ಜೊತೆಗೆ ವಿಧಾನಸಭಾ ಚುನಾವಣೆ ನಡೆಯದೇ ಹೋದರೆ ಅಂತಹ ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವುದಕ್ಕೆ ಅವಕಾಶಗಳಿವೆ. ಒಂದು ವೇಳೆ ಲೋಕಸಭಾ ಚುನಾವಣೆಯ ಜೊತೆ ಜೊತೆಗೆ ವಿಧಾನಸಭಾ ಚುನಾವಣೆಯನ್ನು ನಡೆಸಲು ಸಾಧ್ಯವಾಗದೇ ಹೋದರೆ ಎಷ್ಟು ತಿಂಗಳಲ್ಲಿ ಆ ರಾಜ್ಯಕ್ಕೆ ವಿಧಾನಸಭಾ ಚುನಾವಣೆಯನ್ನು ನಡೆಸಲೇಬೇಕು ಎಂಬ ನಿರ್ದಿಷ್ಟ ಕಾಲಮಿತಿಯನ್ನು ವರದಿಯಲ್ಲಿ ತಿಳಿಸಿಲ್ಲ.
ಸಂವಿಧಾನದ 356ನೇ ವಿಧಿ ಪ್ರಕಾರ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರುವುದಕ್ಕೆ ಅವಕಾಶವಿದೆ. ರಾಷ್ಟ್ರಪತಿ ಆಳ್ವಿಕೆಯು ಆರಂಭದಲ್ಲಿ ಆರು ತಿಂಗಳ ಅವಧಿಗೆ ಇರುತ್ತದೆ. ನಂತರ, ಇದನ್ನು ಪ್ರತಿ ಆರು ತಿಂಗಳಿಗೊಮ್ಮೆ ಸಂಸತ್ತಿನ ಅನುಮೋದನೆಯೊಂದಿಗೆ ಮೂರು ವರ್ಷಗಳ ಅವಧಿಗೆ ವಿಸ್ತರಿಸಬಹುದು.
3. ಒಂದು ವೇಳೆ ಲೋಕಸಭಾ ಚುನಾವಣೆಯ ಬಳಿಕವಷ್ಟೇ ಆ ನಿರ್ದಿಷ್ಟ ರಾಜ್ಯಕ್ಕೆ ವಿಧಾನಸಭಾ ಚುನಾವಣೆ ನಡೆಸಿದರೆ ಆಗ ರಚಿತವಾದ ವಿಧಾನಸಭೆಯ ಅವಧಿಯೂ ಆ ಲೋಕಸಭೆಯ ಅವಧಿಯೊಂದಿಗೆ ಅಂತ್ಯವಾಗುತ್ತದೆ.
ಉದಾಹರಣೆ: 2034ರಿಂದಲೇ ಏಕಕಾಲಕ್ಕೆ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭಾ ಚುನಾವಣೆ ಯೋಜನೆ ಜಾರಿಯಾದ್ರೆ ಆಗ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ಒಟ್ಟೊಟ್ಟಿಗೆ ನಡೆಸಬೇಕಾಗುತ್ತದೆ. ಒಂದು ಯಾವುದಾದರೂ ರಾಜ್ಯದ ವಿಧಾನಸಭಾ ಚುನಾವಣೆಯನ್ನು ಲೋಕಸಭಾ ಚುನಾವಣೆಯ ಜೊತೆಗೆ ನಡೆಸಲು ಸಾಧ್ಯವಾಗದೇ ಇದ್ದರೆ ಉದಾಹರಣೆಗೆ 1 ವರ್ಷದ ಬಳಿಕ ನಡೆಸಲು ತೀರ್ಮಾನಿಸಿದರೆ ಆಗ ರಚಿತವಾಗುವ ವಿಧಾನಸಭೆ ಅವಧಿ ಕೇವಲ 4 ವರ್ಷವಷ್ಟೇ ಇರುತ್ತದೆ. ( 5 ವರ್ಷದ ಅವಧಿ – 1 ವರ್ಷದ ವಿಳಂಬಿತ ಚುನಾವಣೆ = 4 ವರ್ಷವಷ್ಟೇ ಅಧಿಕಾರ).
ಸಂವಿಧಾನದಲ್ಲಿನ ಈಗಿರುವ ನಿಯಮಗಳ ಪ್ರಕಾರ ವಿಧಾನಸಭೆಯ ಅವಧಿ ಅಂತ್ಯವಾಗುವ ಮೊದಲೇ ಚುನಾವಣಾ ಆಯೋಗ ವಿಧಾನಸಭೆ ಚುನಾವಣೆಯನ್ನು ಪೂರ್ಣಗೊಳಿಸಬೇಕು. ಆದರೆ ಚುನಾವಣೆಯನ್ನು ಮುಂದೂಡುವುದಕ್ಕೆ ಚುನಾವಣಾ ಆಯೋಗಕ್ಕೆ ಈಗ ಅಧಿಕಾರವನ್ನು ಕೊಟ್ಟಿಲ್ಲ.
ಆದರೆ ಏಕಕಾಲಕ್ಕೆ ಲೋಕಸಭಾ ಚುನಾವಣೆಯ ಜೊತೆ ಜೊತೆಗೆ ವಿಧಾನಸಭಾ ಚುನಾವಣೆಯನ್ನೂ ನಡೆಸಬೇಕೆಂದು ವರದಿ ನೀಡಿರುವ ಮಾಜಿ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಅವರ ಸಮಿತಿ ʻಅಪರೂಪದ ಸನ್ನಿವೇಶʼಗಳೆಂಬ ಪದ್ಧತಿಯೊಂದನ್ನು ಸೃಷ್ಟಿಸಿ ಆ ಮೂಲಕ ಒಂದು ರಾಜ್ಯದಲ್ಲಿ ಅವಧಿಗೆ ಸರಿಯಾಗಿ ನಡೆಯಬೇಕಿರುವ ವಿಧಾನಸಭಾ ಚುನಾವಣೆಯನ್ನು ಮುಂದೂಡುವುದಕ್ಕೆ ಚುನಾವಣಾ ಆಯೋಗ ಎಂಬ ಸಂವಿಧಾನಿಕ ಸಂಸ್ಥೆಯನ್ನು ಬಳಸಿಕೊಳ್ಳುವ ಆ ಮೂಲಕ ರಾಜ್ಯಗಳನ್ನು ನೇರವಾಗಿ ಕೇಂದ್ರ ಸರ್ಕಾರದ ಆಧೀನಕ್ಕೆ ತರುವ ಹುನ್ನಾರಕ್ಕೆ ಬೀಜ ಬಿತ್ತಿದೆ.
ADVERTISEMENT
ADVERTISEMENT