ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನಲ್ಲಿ ಮೂರು ವರ್ಷದ ನರ್ಸರಿ ವಿದ್ಯಾರ್ಥಿನಿ ಮೇಲೆ ಆಕೆಯ ಶಾಲಾ ಬಸ್ ಚಾಲಕ ವಾಹನದೊಳಗೆ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಕಳೆದ ಗುರುವಾರ ಘಟನೆ ನಡೆದಾಗ ಮಹಿಳಾ ಅಟೆಂಡರ್ ಕೂಡ ವಾಹನದೊಳಗೆ ಇದ್ದರು ಎಂದು ಮಗುವಿನ ಪೋಷಕರು ಆರೋಪಿಸಿದ್ದು, ಬಸ್ ಚಾಲಕ ಮತ್ತು ಮಹಿಳಾ ಅಟೆಂಡರ್ ಅನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಶಾಲೆಯ ಆಡಳಿತ ಮಂಡಳಿಯು ಈ ವಿಷಯವನ್ನು ಮುಚ್ಚಿಡಲು ಪ್ರಯತ್ನಿಸಿದೆಯೇ ಎಂಬ ಪ್ರಶ್ನೆಗೆ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ, ಶಾಲೆಯ ಆಡಳಿತ ಮಂಡಳಿಯ ಪಾತ್ರದ ಬಗ್ಗೆ ತನಿಖೆ ನಡೆಸಲಾಗುವುದು. ವಿಚಾರಣೆ ಮತ್ತು ತನಿಖೆಯ ನಂತರ ಶಾಲಾ ಆಡಳಿತ ಮಂಡಳಿ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಇದನ್ನೂ ಓದಿ : 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಹತ್ಯೆ
ನಗರದ ಪ್ರಮುಖ ಖಾಸಗಿ ಶಾಲೆಯೊಂದರಲ್ಲಿ ಓದುತ್ತಿರುವ ಮಗು ಬಸ್ನಲ್ಲಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ಕೃತ್ಯ ನಡೆದಿದೆ. ಬಾಲಕಿ ಮನೆಗೆ ಮರಳಿದ ನಂತರ, ತನ್ನ ಬ್ಯಾಗ್ನಲ್ಲಿ ಇರಿಸಲಾಗಿದ್ದ ಮತ್ತೊಂದು ಜೊತೆ ಬಟ್ಟೆಯಿಂದ ಮಗುವಿನ ಬಟ್ಟೆಯನ್ನು ಯಾರೋ ಬದಲಾಯಿಸಿದ್ದನ್ನು ಆಕೆಯ ತಾಯಿ ಗಮನಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ನಂತರ ತಾಯಿ ತನ್ನ ಮಗಳ ಕ್ಲಾಸ್ ಟೀಚರ್ ಮತ್ತು ಶಾಲೆಯ ಪ್ರಾಂಶುಪಾಲರನ್ನು ವಿಚಾರಿಸಿದ್ದಾರೆ. ಆದರೆ, ಇಬ್ಬರೂ ಮಗುವಿನ ಬಟ್ಟೆಯನ್ನು ಬದಲಾಯಿಸಿಲ್ಲ ಎಂದಿದ್ದಾರೆ. ನಂತರ ಮಗು ತನ್ನ ಜನನಾಂಗದಲ್ಲಿ ನೋವಾಗುತ್ತಿರುವ ಬಗ್ಗೆ ಹೇಳಿದೆ. ಬಳಿಕ ನಡೆಸಿದ ಕೌನ್ಸೆಲಿಂಗ್ನಲ್ಲಿ ಬಸ್ ಚಾಲಕ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು ಮತ್ತು ಬಟ್ಟೆ ಬದಲಿಸಿದ್ದನ್ನು ಮಗು ತಿಳಿಸಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಬಾಲಕಿಯ ಪೋಷಕರು ಸೋಮವಾರ ಪೊಲೀಸರಿಗೆ ದೂರು ನೀಡಿದ್ದು, ಘಟನೆಯ ಕುರಿತು ತನಿಖೆ ಆರಂಭಿಸಲಾಗಿದೆ. ಬಸ್ ಚಾಲಕ ಮತ್ತು ಮಹಿಳಾ ಅಟೆಂಡರ್ ಅನ್ನು ಬಂಧಿಸಲಾಗಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ನಿಧಿ ಸಕ್ಸೇನಾ ತಿಳಿಸಿದ್ದಾರೆ. ಇದನ್ನೂ ಓದಿ : ಶಿವಮೊಗ್ಗ : ಅಪ್ರಾಪ್ತೆ ಮೇಲೆ ಅತ್ಯಾಚಾರ – ವೃದ್ಧನಿಗೆ ಜೀವಾವಧಿ ಶಿಕ್ಷೆ