ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಕೇರಳದಲ್ಲಿ ಉದ್ಯಮಿಯೊಬ್ಬರು ಸ್ಥಾಪಿಸಿರುವ ಪಕ್ಷದೊಂದಿಗೆ ಆಮ್ ಆದ್ಮಿ ಪಾರ್ಟಿ ಮೈತ್ರಿ ಘೋಷಿಸಿಕೊಂಡಿದೆ. ಕೇರಳದಲ್ಲಿ ಟಿ-ಟ್ವೆಂಟಿ ಪಕ್ಷದ ಜೊತೆಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೊಂದಾಣಿಕೆ ಘೋಷಿಸಿದ್ದಾರೆ.
ಕೊಚ್ಚಿ ಸಮೀಪ ನಡೆದ ಬೃಹತ್ ಸಮಾವೇಶದಲ್ಲಿ ಈ ಐತಿಹಾಸಿಕ ಮೈತ್ರಿ ಪ್ರಕಟವಾಗಿದೆ. ಗಾರ್ಮೆಂಟ್ಸ್ ಉದ್ಯಮದಲ್ಲಿ ದೊಡ್ಡ ಹೆಸರು ಮಾಡಿರುವ ಕಿಟೆಕ್ಸ್ ಗ್ರೂಪ್ಗಳ ಮಾಲೀಕ ಸಬು ಎಂ ಜೇಕಬ್ ಅವರು ಸ್ಥಾಪಿಸಿರುವ ಟಿ-ಟ್ವೆಂಟಿ ಪಾರ್ಟಿಯ ಜೊತೆಗೆ ಆಪ್ ಮೈತ್ರಿ ಮಾಡಿಕೊಂಡಿದೆ.
ಈ ಮೈತ್ರಿಕೂಟಕ್ಕೆ ಪೀಪಲ್ಸ್ ವೆಲ್ಫೇರ್ ಅಲಯನ್ಸ್ ಎಂದು ನಾಮಕರಣ ಮಾಡಿಕೊಳ್ಳಲಾಗಿದೆ. ದಕ್ಷಿಣ ಭಾರತದಲ್ಲಿ ಆಮ್ ಆದ್ಮಿ ಪಾರ್ಟಿ ಮಾಡಿಕೊಂಡಿರುವ ಮೊದಲ ಚುನಾವಣಾ ಪೂರ್ವ ಮೈತ್ರಿ ಇದಾಗಿದೆ.
ಕೇರಳದಲ್ಲಿ ಐತಿಹಾಸಿಕ ದಿನ ಎಂದು ಬಣ್ಣಿಸಿರುವ ಕೇಜ್ರಿವಾಲ್ ಕೇರಳ ಮತ್ತದರ ಜನರ ಅಭಿವೃದ್ಧಿ ಒಟ್ಟಿಗೆ ಕೆಲಸ ಮಾಡುವುದಾಗಿ ಹೇಳಿದ್ದಾರೆ.
ಅಂದಹಾಗೆ 2012ರಲ್ಲಿ ಉದ್ಯಮಿ ಜೇಕಬ್ ಅವರು ಟಿ-ಟ್ವೆಂಟಿ ಪಕ್ಷವನ್ನು ಸ್ಥಾಪಿಸಿದ್ದರು. ಸದ್ಯ ಪಕ್ಷ ಎರ್ನಾಕುಲಂ ಜಿಲ್ಲೆಯ ನಾಲ್ಕು ಪಂಚಾಯತ್ಗಳಲ್ಲಿ ಆಡಳಿತದಲ್ಲಿದೆ. 2021ರ ವಿಧಾನಸಭಾ ಚುನಾವಣೆಯಲ್ಲಿ 8 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಶೇಕಡಾ 14ರಷ್ಟು ಮತಗಳನ್ನು ಪಡೆದಿತ್ತು.
ಇತ್ತ ಕೇರಳದಲ್ಲಿ ಆಮ್ ಆದ್ಮಿ ಪಾರ್ಟಿಯ ಘಟಕ ಆಂತರಿಕ ಕಚ್ಚಾಟದಿಂದ ನಿಷ್ಕ್ರೀಯವಾಗಿದೆ.
ಮೇ 31ರಂದು ತ್ರಿಕ್ಕಕಾರಾ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಅಂದಹಾಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಶೇಕಡಾ 10ರಷ್ಟು ಮತಗಳನ್ನು ಗಳಿಸಿತ್ತು. ಈ ಬಾರಿ ಈ ಕ್ಷೇತ್ರದಲ್ಲಿ ಅಭ್ಯರ್ಥಿ ಹಾಕಿಲ್ಲ.