ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಕಿಲ್ಲರ್ ಕಸದ ಲಾರಿಗೆ ಶನಿವಾರ ಮತ್ತೊಂದು ಬಲಿಯಾಗಿದ್ದು, ಚಿಕ್ಕಜಾಲದಲ್ಲಿ ಕಸದ ಲಾರಿ ಡಿಕ್ಕಿ ಹೊಡೆದ ಪರಿಣಾಮ 25 ವರ್ಷದ ಫುಡ್ ಡೆಲಿವರಿ ಬಾಯ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಬೆಂಗಳೂರು ಸಂಚಾರ ಪೊಲೀಸರು ಕಸದ ಲಾರಿ ಚಾಲಕರಲ್ಲಿ ಜಾಗೃತಿ ಅಭಿಯಾನ ನಡೆಸುತ್ತಿದ್ದರೂ ಕಳೆದ ಎರಡು ತಿಂಗಳಲ್ಲಿ ಬಿಬಿಎಂಪಿ ಕಸದ ಲಾರಿ ಡಿಕ್ಕಿಯಾಗಿ ನಾಲ್ಕು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಮೃತ ಬೈಕ್ ಸವಾರ ಯಾದಗಿರಿಯ ಸುರಪುರದ ದೇವಣ್ಣ ಎಂ, ಎಂದು ಗುರುತಿಸಲಾಗಿದ್ದು, ಈ ಯುವಕ ಕೊತ್ತನೂರಿನಲ್ಲಿ ತನ್ನ ಸ್ನೇಹಿತರೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಫುಡ್ ಡೆಲಿವರಿ ಮಾಡಲು ನಾಗವಾರದಿಂದ ಹೆಗಡೆ ನಗರಕ್ಕೆ ತೆರಳುತ್ತಿದ್ದ ವೇಳೆ ಓವರ್ಟೇಕ್ ಮಾಡಲು ಯತ್ನಿಸಿದ ಟ್ರಕ್ ಹಿಂಬದಿಯಿಂದ ಅವರ ಬೈಕ್ಗೆ ಡಿಕ್ಕಿ ಹೊಡೆದು ಆತನ ಮೇಲೆ ಹರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು, ಲಾರಿ ಚಾಲಕ ದಿನೇಶ್ ನಾಯಕ್ನನ್ನು ವಶಕ್ಕೆ ಪಡೆದಿದ್ದಾರೆ. ಜತೆಗೆ, ಅಪಘಾತ ಎಸಗಿದ ಲಾರಿಯನ್ನು ಜಪ್ತಿ ಮಾಡಿದ್ದಾರೆ. ಆರೋಪಿ ದಿನೇಶ್ ನಾಯಕ್ನ ಅಜಾಗರೂಕ ಚಾಲನೆ, ಅತಿವೇಗವೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.