ನಟ ದ್ರುವ ಸರ್ಜಾ ಹಾಗೂ ನಿರ್ದೇಶಕ ಜೋಗಿ ಪ್ರೇಮ್ ಕಾಂಬಿನೇಶನ್ನಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರದ ಮುಹೂರ್ತ ಕಾರ್ಯಕ್ರಮ ನಾಡದೇವತೆ ಮೈಸೂರಿನ ಶ್ರೀಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ನಡೆಯಿತು.
ಮೊದಲ ಬಾರಿಗೆ ಪ್ರೇಮ್ ಹಾಗೂ ಧ್ರುವ ಸರ್ಜಾ ಜೋಡಿ ಒಂದಾಗಿದೆ. ಈ ಜೊಡಿಯ ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ನ ವೆಂಕಟ್ ಕೋನಂಕಿ ಅವರು ಬಂಡವಾಳ ಹೂಡಲಿದ್ದಾರೆ.
ಹೂವಿನಿಂದ ಅಲಂಕೃತವಾಗಿದ್ದ ಶಕ್ತಿದೇವತೆಯ ರಥವನ್ನು ನಾಯಕ ದ್ರುವಸರ್ಜಾ, ನಿರ್ದೇಶಕ ಪ್ರೇಮ್ ಹಾಗೂ ನಿರ್ಮಾಪಕ ವೆಂಕಟ್ ಕೋನಂಕಿ ಅವರುಗಳು ಎಳೆಯುತ್ತಿರುವ ದೃಶ್ಯವನ್ನು ಚಿತ್ರೀಕರಿಸುವುದರೊಂದಿಗೆ ಚಿತ್ರೀಕರಣಕ್ಕೆ ಚಾಲನೆ ನೀಡಲಾಯಿತು.
ಮುಹೂರ್ತದ ನಂತರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ನಿರ್ದೇಶಕ ಪ್ರೇಮ್, ಬೆಂಗಳೂರು ಭೂಗತಲೋಕದಲ್ಲಿ ನಡೆದ ಕೆಲವು ಸತ್ಯ ಘಟನೆಗಳನ್ನು ಇಟ್ಟುಕೊಂಡು ಮಾಡುತ್ತಿರುವ ರೌಡಿಸಂ ಹಿನ್ನೆಲೆಯ ಚಿತ್ರವಿದು. 1968ರಿಂದ 1978 ರವರೆಗಿನ ಸಮಯದಲ್ಲಿ ಬೆಂಗಳೂರಿನಲ್ಲಿ ರೌಡಿಸಂ ಹೇಗಿತ್ತು ಎಂಬುದನ್ನು ರಕ್ತಚರಿತ್ರೆಯೊಂದರ ಮೂಲಕ ಹೇಳಹೊರಟಿದ್ದೇನೆ. ಹಾಗಂತ ಇದು ಬರೀ ರೌಡಿಸಂ ಕಥೆಯಲ್ಲ, ಜೊತೆಗೆ ಲವ್, ಅ್ಯಕ್ಷನ್, ಸೆಂಟಿಮೆಂಟ್ ಎಲ್ಲದರ ಮಿಳಿತವಾಗಿರಲಿದೆ. ಚಿತ್ರದ ನಾಯಕಿ ಪಾತ್ರಕ್ಕೆ ಇನ್ನೂ ಆಯ್ಕೆಯಾಗಿಲ್ಲ, ಎಲ್ಲವನ್ನೂ ಫೈನಲ್ ಮಾಡಿಕೊಂಡು ಮುಂದಿನ ತಿಂಗಳು ಬೆಂಗಳೂರು ಅರಮನೆ ಮುಂಭಾಗದಲ್ಲಿ ಚಿತ್ರದ ಟೈಟಲ್ ನ್ನು ಅದ್ದೂರಿಯಾಗಿ ಅನೌನ್ಸ್ ಮಾಡುವ ಯೋಜನೆಯಿದೆ ಎಂದು ಹೇಳಿದರು.
ಚಿತ್ರದ ನಿರ್ಮಾಪಕರಾದ ವೆಂಕಟ್ ಕೋನಂಕಿ ಅವರು ಮಾತನಾಡುತ್ತ ಈ ಕಥೆಯೇ ತುಂಬಾ ಚೆನ್ನಾಗಿದೆ, ಎಲ್ಲಾ ಕಡೆಗೂ ಹೊಂದಿಕೊಳ್ಳುವಂಥ ಯೂನಿವರ್ಸಲ್ ಸಬ್ಜೆಕ್ಟ್. ಬಜೆಟ್ ಬಗ್ಗೆ ಯಾವುದೇ ಲಿಮಿಟ್ ಹಾಕಿಕೊಂಡಿಲ್ಲ, ಕಥೆಗೆ ಏನು ಬೇಕೋ ಅದನ್ನೆಲ್ಲ ಕೊಡಲೇಬೇಕು. ಚಿತ್ರದಲ್ಲಿ 70 ರ ದಶಕದ ದೃಶ್ಯಗಳನ್ನು ರೀಕ್ರಿಯೇಟ್ ಮಾಡಬೇಕಿದೆ. ಹಾಗಾಗಿ ಸೆಟ್ಗೇ ಹೆಚ್ಚು ಮಹತ್ವವಿದ್ದು ಹೆಚ್ಚು ಬಂಡವಾಳ ಕೇಳುತ್ತದೆ, ಜೊತೆಗೆ ಪ್ರೇಮ್ ಒಳ್ಳೇ ಹಾಡುಗಳನ್ನು ಮಾಡಿಕೊಂಡಿದ್ದಾರೆ ಎಂದರು.